ಗರ್ಭದಿಂದ ಗೋರಿಯವರೆಗೂ ಮಹಿಳೆಯನ್ನು ಗೌರವಿಸಿ: ಪ್ರಗತಿಪರ ಚಿಂತಕಿ ಕೆ.ಎಸ್.ವಿಮಲಾ
1 min read

ಗರ್ಭದಿಂದ ಗೋರಿಯವರೆಗೂ ಮಹಿಳೆಯನ್ನು ಗೌರವಿಸಿ: ಪ್ರಗತಿಪರ ಚಿಂತಕಿ ಕೆ.ಎಸ್.ವಿಮಲಾ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಹೊಸದುರ್ಗ:ಸಾಣೇಹಳ್ಳಿ/
ಗರ್ಭದಿಂದ ಗೋರಿಯವರೆಗೆ ಅಸಮಾನತೆ ಎದುರಿಸುತ್ತಿರುವ ಮಹಿಳೆಯರನ್ನು ಸಮಾನವಾಗಿ ನೋಡಬೇಕು. ಆಗ ಜೇಡರ ದಾಸಿಮಯ್ಯರ ವಚನದ ಸಾಲು ಸಾರ್ಥಕವಾಗುತ್ತದೆ ಎಂದು ಪ್ರಗತಿಪರ ಚಿಂತಕಿ ಕೆ.ಎಸ್.ವಿಮಲಾ ಅಭಿಪ್ರಾಯಪಟ್ಟರು.
ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟೀಯ ನಾಟಕೋತ್ಸವದ ಎರಡನೆಯ ದಿನವಾದ ಶುಕ್ರವಾರ ಸಂಜೆ ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಕುರಿತು ಮಾತನಾಡಿದರು.
ಎಲ್ಲರ ಮನೆಗಳಲ್ಲಿ ವಚನಗಳು ಬಂದಿದ್ದರೆ ಬೇರೆಯಾಗಿರುತ್ತಿತ್ತು. ದಿನಾ ಬೆಳಿಗ್ಗೆ ಅಹಲ್ಯೆ, ಸೀತೆ ಇಂಥವರ ಕಥೆಗಳನ್ನು ಕೇಳುತ್ತಿದ್ದೆ. ಅಹಲ್ಯೆ, ದ್ರೌಪದಿ, ಸೀತೆಯರು ತಮ್ಮ ತಪ್ಪಿಲ್ಲದಿದ್ದರೂ ಶಿಕ್ಷೆ ಅನುಭವಿಸಿದರು. ಇಂಥವರು ಮಾದರಿ ಎಂದು ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳಿ ಬೆಳೆದೆ. ಸಂಜೆ ರಾಮಾಯಣ, ಮಹಾಭಾರತ ಕಥೆಗಳನ್ನು ಹೇಳುತ್ತಿದ್ದರು. ಆದರೆ ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ವಚನಗಳನ್ನು ಕೇಳಿದ್ದರೆ ಬೇರೆಯಾಗಿ ಬೆಳೆಯಬಹುದಿತ್ತು. ಹಾಗೆಯೇ ಕಾಯಕವೇ ಕೈಲಾಸ ಎನ್ನುವುದು ಕೇಳದೆ ಕರ್ಮಣ್ಯೆ ವಾಧಿಕಾರಸ್ಥೆ ಎಂಬ ವೈದಿಕತೆ ಮೆರೆಯಿತು. ಶಿವಮೊಗ್ಗ ಜಿಲ್ಲೆಯ ಸಾಗರದವಳಾದ ನನಗೆ ಹಾಗೂ ನನ್ನಂಥವರಿಗೆ ಕಲ್ಯಾಣದಿಂದ ಮಲೆನಾಡಿಗೆ ವಚನಗಳು ತಲುಪದ ಹಾಗೆ ನೋಡಿಕೊಂಡ ಶಕ್ತಿಗಳು ಯಾವವು? ಇಲ್ಲಿಯೇ ಮಹಿಳಾ ಅಸಮಾನತೆ ಕಾಣಬಹುದು ಎಂದು ವಿವರಿಸಿದರು.
ಜಾತಿ, ಧರ್ಮ, ಲಿಂಗ, ವರ್ಗ ಕಾರಣಕ್ಕೆ ಯಾವುದೇ ಭೇದವಿಲ್ಲದೆ ಒಂದಾಗಿ ಬಾಳುವುದನ್ನು ಜೇಡರ ದಾಸಿಮಯ್ಯ ಹೇಳಿದ್ದಾರೆ. ಆದರೆ ಹೆಣ್ಣಾಗಿ ಹುಟ್ಟುವುದರಿಂದ ಏನೆಲ್ಲ ಸಂಕಟಗಳನ್ನು ಅನುಭವಿಸಬೇಕೆಂದ ಜಾನಪದರು ಕಟ್ಟಿಕೊಟ್ಟರು.
ಸ್ತೀಯರ ಶಿಕ್ಷಣಕ್ಕಾಗಿ ಜ್ಯೋತಿಬಾ ಪುಲೆ ಶ್ರಮಿಸಿದರು. ಆದರೂ ನನ್ನ ಉದರದ ಒಳಗೆ ಹುಟ್ಟುವ ಹೆಣ್ಣೋ ಗಂಡೋ ಎಂದರಿತು ಹೆಣ್ಣಾಗಿದ್ದರೆ ಇಲ್ಲವಾಗಿಸುವ ಕ್ರಮ ಹೆಚ್ಚುತ್ತಿದೆ. ಇದರೊಂದಿಗೆ ಸಾಮಾಜಿಕವಾಗಿ, ಕೌಟುಂಬಿಕವಾಗಿ, ಆರ್ಥಿಕವಾಗಿ ತಾನು ಬಲಾಢ್ಯಳು ಎಂದು ಮತ್ತೆ ಮತ್ತೆ ಸಾಬೀತುಪಡಿಸುತ್ತಾಳೆ. ಇಷ್ಟಾದರೂ ಸಂವಿಧಾನವು ಧರ್ಮ, ಜಾತಿ, ಭೇದಭಾವ ಮಾಡಬೇಡಿರೆಂದು ಹೇಳುತ್ತದೆ. ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾಲದಲ್ಲೂ ಮಹಿಳೆಯರಿಗೆ ದಕ್ಕದ ಶೇ 33ರಷ್ಟು ಮೀಸಲಾತಿಯಿ ರಾಜಕೀಯವಾಗಿ ಬೆಳೆಯಲು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ. ಹಾಗೆಯೇ ಮಹಿಳೆ ಎಷ್ಟೇ ಸಾಮರ್ಥ್ಯ ಸಾಬೀತುಪಡಿಸಿದರೂ ಹೆಂಡತಿಯಾಗಿ, ತಾಯಿಯಾಗಿ ಇರಬೇಕಾಗಿರುವುದು ಅನಿವಾರ್ಯ ಎಂದು ಕಳವಳ ವ್ಯಕ್ತಪಡಿಸಿದರು.
ರಂಗಭೂಮಿಯು ಕೂಡಿ ಬಾಳುವುದನ್ನು ಕಲಿಸುತ್ತದೆ. ಸ್ಪೃಶ್ಯ- ಅಸ್ಪೃಶ್ಯತೆ ತೊಡೆಯುತ್ತದೆ ಜೊತೆಗೆ ಸಹಜ ಸಾವಯವ ಜೀವನವನ್ನು ಕಲಿಸುತ್ತದೆ ರಂಗಭೂಮಿ. ಹೀಗೆ ರಂಗಭೂಮಿ ಮೂಲಕ ಅದ್ಭುತವಾದ ರಂಗಕಾಯಕವನ್ನು ಕೈಗೊಂಡಿರುವ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳ ಕಾರ್ಯ ಶ್ಲಾಘನೀಯ. ಈಮೂಲಕ ಜೀವಪರವಾದ ಸಮಾಜ ಕಟ್ಟೋಣ ಎಂದು ಅವರು ಸಲಹೆ ನೀಡಿದರು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಸುತ್ತೂರು ಮಹಾ ಸಂಸ್ಧಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಧಿತರಿದ್ದರು. ಪ್ರಗತಿಪರ ಚಿಂತಕಿ ಶ್ರೀ ಮತಿ ಕೆ.ಎಸ್.ವಿಮಲ ಅವರು ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲಾ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಮುಖ್ಯ ಅತಿಧಿಗಳಾಗಿ ಮಾಜಿ ಶಾಸಕರುಗಳಾದ ಡಿ.ಎಸ್.ಸುರೇಶ್, ಮಾಡಾಳುವಿರುಪಾಕ್ಷಪ್ಪ, ದಾವಣಗೆರೆ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ:ಬಿ.ಸುರೇಶ್ ಇಟ್ನಾಳ್, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಕುಲೊಪತಿ ಪ್ರೋ.ಕೆ.ಬಿ. ಗುಡಸಿ, ಸಂಗೀತ ನಿರ್ದೇಶಕ ವಿ.ಮನೋಹರ್, ಕೇರಳ ರಾಷ್ಟ್ರಕವಿ ಎಂ.ಗೋವಿಂದ ಪೈ ಸ್ಮಾರಕ ಸಮಿತಿಯ ಉಮೇಶ್ ಎಂ.ಸಾಲಿಯಾನ ಭಾಗವಹಿಸಿ ಮಾತನಾಡಿದರು.
ಹೊಸದುರ್ಗ ಎಸ್.ನಿಜಲಿಂಗಪ್ಪ ವಿದ್ಯಾಸಂಸ್ಧೆ ಮತ್ತು ಕನಕ ಪ್ರಿಯ ನಾಟ್ಯ ಕಲಾ ಕೇಂದ್ರದವರಿಂದ ನೃತ್ಯ ರೂಪಕ ನಡೆಯಿತು. ಇದೇ ಕಾರ್ಯಕ್ರಮದಲ್ಲಿ ನರ‍್ಲಿಗೆ ಸ್ವಾತಂತ್ರ್ಯ ಹೋರಾಟಗಾರ ಎನ್.ಎಂ.ಬಸವರಾಜಪ್ಪ ಅವರನ್ನ ಅಭಿನಂದಿಸಲಾಯಿತು.
ಕಾರ್ಯಕ್ರಮದ ನಂತರ ನಡೆದ ನಾಟಕೋತ್ಸದಲ್ಲಿ ಕೇರಳ ಲಿಟಲ್ ಅರ್ಥ್ಸ್ಕೂಲ್ ಆಫ್ ಥಯೇಟರ್ ಅಭಿನಯದ ಅರುಣ್‌ಲಾಲ್ ನಿರ್ಧೇಶನದ ಎಂ.ಪಿರಾಜೇಶ್ ರಚನೆಯ
ದ ವಿಲನ್‌ಮಾರ್ (ಮಲೆಯಾಳಿ) ಎಂಬ ಅದ್ಭುತ ನಾಟಕ ಪ್ರದರ್ಶನಗೊಂಡಿತು.