April 17, 2024

Chitradurga hoysala

Kannada news portal

ಮಮತಾಮಯಿಯ ಕಣ್ಮರೆ : ಹಳೇಬೀಡು ರಾಮಪ್ರಸಾದ್

1 min read

ಮಮತಾಮಯಿಯ ಕಣ್ಮರೆ

ಚಿತ್ರದುರ್ಗ ಹೊಯ್ಸಳ ನ್ಯೂಸ್ :

ದಾವಣಗೆರೆ

ಕಳೆದ ಅರೆ ಶತಮಾನದಿಂದ ದಾವಣಗೆರೆಯ ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ( ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಸಂಬಂದಿಸಿದಂತೆ ) ವಿಶಿಷ್ಟ ಛಾಪು ಮೂಡಿಸಿದ್ದ , ಸಿಎನ್ ಕೆ ಎಂದೇ ಜನಜನಿತರಾಗಿದ್ದ ಮಾಜೀ ಸಚಿವೆ ಶ್ರೀಮತಿ ನಾಗಮ್ಮ ಕೇಶವಮೂರ್ತಿಯವರು ಇಹಲೋಕ ವ್ಯಾಪಾರ ಮುಗಿಸುವ ಮೂಲಕ ಸೃಷ್ಟಿಯಾಗಿರುವ ಶೂನ್ಯ ತುಂಬುವಂತಹುದಲ್ಲ !

(ಶ್ರೀಮತಿ ನಾಗಮ್ಮ ಕೇಶವಮೂರ್ತಿಯವರು ಪ್ರಥಮ ಬಾರಿಗೆ ಸಚಿವರಾಗಿ ದಾವಣಗೆರೆಯ ಮನೆಗೆ ಬಂದಾಗ)

ರಾಜಕಾರಣಿಯಾಗಿ ಶಾಸಕಿ,ಸಚಿವೆ,ವಿಧಾನ ಸಭಾ ಉಪಾಧ್ಯಕ್ಶೆಯಾಗಿ ,ರಾಜ್ಯ ಮಹಿಳಾ ಕಾಂಗ್ರೆಸ್ ಸಾರಥ್ಯ ಇತ್ಯಾದಿ ಪದವಿಗಳನಲಂಕರಿಸಿದ್ದ ನಾಗಮ್ಮನವರು ಪಕ್ಷ,ಜಾತಿ,(ಅಸಲಿಗೆ ಅವರು ಪ್ರತಿನಿಧಿಸಿದ್ದ ಮಾಯಕೊಂಡವಾಗಲಿ,ದಾವಣಗೆರೆಯೇ ಆಗಲಿ ಅವರ ಜಾತಿಯ ಮತದಾರರ ಸಂಖ್ಯೆ ಹೆಚ್ಚಿರಲಿಲ್ಲ ಎಂಬುದು ಗಮನಾರ್ಹ!) ಮತ, ಅಂತಸ್ತು ಮತ್ತಿತರ ವ್ಯತ್ಯಯವಿಲ್ಲದೆ ನೊಂದವರ ಅಳಲನ್ನು ಮಾತೃ ಹೃದಯದಿಂದ ಆಲಿಸಿ,ನಿವಾರಣೆಗೆ ಪ್ರಾಮಾಣಿಕ ಶ್ರಮ ಹಾಕಿದ್ದರಿಂದಲೇ ಜನ,ಅಧಿಕಾರವಿಲ್ಲದಿದ್ದರೂ ಅದೇ ಗೌರವ ನೀಡುತ್ತಿದ್ದುದು ಮರೆಯುವಂತಿಲ್ಲ.ತಮ್ಮ ಅತ್ತೆ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪನವರ (ಪತಿ ಸಿ.ಕೇಶವಮೂರ್ತಿಯವರ ತಾಯಿ) ಹಾದಿಯಲ್ಲಿ ಸಾಗಿ ವನಿತಾ ಸಮಾಜದ ಮೂಲಕ ಮಹಿಳೆ ಹಾಗೂ ಮಕ್ಕಳ ಅಭ್ಯುದಯಕ್ಕೆ ಹಲವು ಹತ್ತು ಕಾರ್ಯಕ್ರಮಗಳನ್ನಾರಂಭಿಸಿದರು.

(ನಾಗಮ್ಮ ಕೇಶವಮೂರ್ತಿ ಯವರೊಂದಿಗೆ ಗ್ರಾಮೀಣ ಪ್ರದೇಶ ಪ್ರವಾಸದಲ್ಲಿ)

ಸ್ವತಃ ಸಂಗೀತಗಾರರಾಗಿದ್ದ ನಾಗಮ್ಮನವರು ಸಿ.ವಿರೂಪಾಕ್ಷಪ್ಪ,ಕಾಂತರಾಜ್, ಹಳೇಬೀಡು ಕೃಷ್ಣಮೂರ್ತಿ ಮೊದಲಾದವರೊಂದಿಗೆ “ಗಾಯನ ಸಭಾ “ಆರಂಭಿಸುವ ಮೂಲಕ ಶಾಸ್ತ್ರೀಯ ಸಂಗೀತ ಪ್ರಿಯರ ಮನತಣಿಸುವ ಕಾರ್ಯಕ್ರಮಗಳನ್ನು ಒದಗಿಸಿದರು.ಅಧಿಕಾರವನ್ನು ಪ್ರದರ್ಶನಕ್ಕೊ , ಮತ್ತೊಂದಕ್ಕೊ ಬಳಸಿಕೊಳ್ಲದೆ ಜನಸೇವೆಗೊಂದು ಮಾರ್ಗದಂತೆ ಉಪಯೋಗಿಸಿಕೊಂಡರು. ಅಧಿಕಾರ ಹೋದಾಗ ಕೊಂಚವೂ ವಿಚಲಿತರಾಗದೆ, “ವನಿತಾ ಸಮಾಜ “, “ಗಾಯನ ಸಮಾಜ” ಗಳಲ್ಲಿ ತೊಡಗಿಸಿಕೊಂಡು ಸಮಚಿತ್ತ ಪ್ರದರ್ಶಿಸಿದರು.

ಶ್ರೀಮಂತ ಕುಟುಂಬದ ಏಕೈಕ ಪುತ್ರಿಯಾಗಿ,ಭಾರೀ ಶ್ರೀಮಂತರ ಸೊಸೆಯಾಗಿ ಬಂದರೂ ಸಜ್ಜನಿಕೆ,ಸರಳತೆ,ವಾತ್ಸಲ್ಯದ ಪ್ರತಿಮೂರ್ತಿಯಾಗಿದ್ದ ನಾಗಮ್ಮನವರನ್ನು ನಾನು 1974 ರಿಂದಲೂ, ಸಮೀಪದಿಂದ ನೋಡುವ ಭಾಗ್ಯಕ್ಕೆ ಪಾತ್ರನಾದವನು.” ನಗರ ವಾಣಿ “ಪತ್ರಿಕೆಯ ವರದಿಗಾರನಾಗಿ, ನಾಗಮ್ಮನವರ ರಾಜಕೀಯ – ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜೊತೆಯಲ್ಲಿ ಪಾಲ್ಗೊಂಡು,ಪ್ರವಾಸ ಮಾಡುತ್ತಿದ್ದ ಹದಿನಾರರ ಪ್ರಾಯದ ನಾನು ಅಮ್ಮಾವರ ದೃಷ್ಟಿಯಲ್ಲಿ “ಮನೆ ಹುಡ್ಗ”.ಮಹಿಳಾ ಕಲ್ಯಾಣ ಮಂಡಳಿ ಜಿಲ್ಲಾ ಸದಸ್ಯೆಯಾಗಿದ್ದ ನಾಗಮ್ಮನವರು ವರ್ಷಕ್ಕೊಮ್ಮೆ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಮಹಿಳಾ ಸಮಾಜಗಳಿಗೆ ಭೇಟಿ ನೀಡಿ ವಾರಕಾಲ ಕ್ಯಾಂಪ್ ಮಾಡುತ್ತಿದ್ದಾಗಲೂ ನನ್ನ ಹಾಜರಿ ಖಡ್ದಾಯ.”ಪ್ರಸಾದೂ ಕೇವಲ ನಮ್ಮ ಪತ್ರಿಕೆಯ ವರದಿಗಾರ ಮಾತ್ರವಲ್ಲ , ನಮ್ಮ ಮನೆ ಮಗ ” ಎಂದು ಎಲ್ಲರೊಡನೆ ಅಭಿಮಾನದಿಂದ ಹೇಳುತ್ತಿದ್ದ ಅಮ್ಮಾವರು ಎಂದಿಗೂ ನನ್ನನ್ನು ಅವರ ಸಂಸ್ಥೆಯ ಒಬ್ಬ ಕೆಲಸಗಾರ ಎಂಬಂತೆ ಕಾಣಲೇ ಇಲ್ಲ.” ನಿಮ್ಮ ತಾಯಿಯಸ್ಟು ನನಗೆ ವಯಸ್ಸಾಗಿಲ್ಲದಿರಬಹುದು , ದೊಡ್ದಕ್ಕ ಅಂದುಕೋ ” ಎಂದು ಅಭಿಮಾನ ತೋರಿದವರು. ” ಬರೀ ಇಲ್ಲೇ ವರದಿಗಾರ ಎಂತಾ ಕೂರಬೇಡ , ವಿಧ್ಯಾಭ್ಯಾಸ ಮುಂದುವರೆಸಿ , ಒಳ್ಳೆ ಬದುಕು ಮಾಡು ” ಎಂದು ಹಿತವಚನವಿತ್ತವರು.

ಇತ್ತೆಚೆಗೆ ನಾನು , ಮಿತ್ರ ಹೆಚ್.ಆಂಜನೇಯ ರ ಜೊತೆಯಲ್ಲಿ ಭೇಟಿ ಮಾಡಿದಾಗಲೂ ವಯಸ್ಸು , ಅನಾರೋಗ್ಯ , ತುಸು ಮರೆವು…ಗಳ ಮಧ್ಯೆಯೂ ಅದೇ ವಾತ್ಸಲ್ಯ , ಅಭಿಮಾನ.

ತಾಯಿ ನಾಗಮ್ಮನವರಿಗೊಂದು ಅಂತಿಮ ನಮನ.    ಹಳೇಬೀಡು ರಾಮಪ್ರಸಾದ್.

About The Author

Leave a Reply

Your email address will not be published. Required fields are marked *