ಕ್ಲೋರಿನ್ ಗ್ಯಾಸ್ ಸೋರಿಕೆ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ
1 min readಕ್ಲೋರಿನ್ ಗ್ಯಾಸ್ ಸೋರಿಕೆ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಚಿತ್ರದುರ್ಗ ಹೊಯ್ಸಳ ಸುದ್ದಿ
ಹೊಸದುರ್ಗ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿರುವ ಪುರಸಭೆಯ ನೀರು ಶುದ್ಧೀಕರಣ ಘಟಕದಲ್ಲಿ ಸೋಮವಾರ ಸಂಜೆ ಕ್ಲೋರಿನ್ (ಕ್ಲೋರೋಫಾರಂ) ಅನಿಲ ಸೋರಿಕೆಯಾಗಿ ನೂರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಸಂಭವಿಸಿದೆ.
ಪಟ್ಟಣಕ್ಕೆ ಸರಬರಾಜು ಆಗುವ ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೋರಿನ್ ಅನಿಲ ತುಂಬಿದ ಸಿಲೆಂಡರ್ ನಿಂದ ಸಂಜೆ 6:00 ಸುಮಾರಿಗೆ ಅನಿಲ ಸೋರಿಕೆಯಾಗಿದೆ. ಘಟಕದ ಸುತ್ತಮುತ್ತ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಾಳಿಗೆ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಬಡಾವಣೆಯ ಜನರು ಅಸ್ವಸ್ಥಗೊಂಡಿದ್ದಾರೆ.
ಒಮ್ಮೆಲೇ ಉಸಿರು ಕಟ್ಟಿದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಜನರ ಮನೆಯಿಂದ ಹೊರಗೆ ಬಂದು ಎಪಿಎಂಸಿ ಮೈದಾನ ಹಾಗೂ ಶಾಲಾ ಮೈದಾನದ ಸೇರಿದಂತೆ ಕಾಲಿ ಜಾಗಕ್ಕೆ ಓಡಿ ಹೋಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಿಲೆಂಡರ್ ನಿಂದ ಅನಿಲ ಸೋರಿಕೆಯಾಗುವುದನ್ನು ತಡೆಯಲು ತೀವ್ರ ಪ್ರಯತ್ನ ನಡೆಸಿದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳು ಕೂಡ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡರೂ ಸಿಲೆಂಡರ್ನ್ನು ಭೂಮಿಯಲ್ಲಿ ಗುಂಡಿ ತೆಗೆದು ಮುಚ್ಚುವ ಮೂಲಕ ಅನಿಲ ತೋರಿಕೆಯನ್ನ ನಿಲ್ಲಿಸುವಲ್ಲಿ ಯಶಸ್ವಿಯಾದರು.
ಘಟನೆಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ನೂರಕ್ಕೂ ಹೆಚ್ಚು ಜನರು ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಇರುವವರಿಗೆ ಆಕ್ಸಿಜನ್ ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಒಮ್ಮೆಲೆ ಆಸ್ಪತ್ರೆಗೆ ನೂರಕ್ಕೂ ಹೆಚ್ಚು ಅಸ್ವಸ್ಥರು ದಾಖಲಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಹೆಚ್ಚಾಗಿತ್ತು. ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯರು ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯ ತಪ್ಪಿದೆ.
ಪುರಸಭೆ ಕರ್ತವ್ಯ ನಿರ್ವಹಣೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳದೆ ಇರುವುದು ಘಟನೆ ಸಂಭವಿಸಲು ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಸಾರ್ವಜನಿಕರ ಹಿತ ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು. ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ತಿರುಪತಿ ಪಾಟೀಲ್, ಪೊಲೀಸ್ ಪಿ ಐ ತಿಮಣ್ಣ, ಸ್ಥಳದಲ್ಲಿದ್ದು ಪರಿಸ್ಥಿತಿ ಸುಧಾರಣೆಗೆ ಕ್ರಮ ತೆಗೆದುಕೊಂಡಿದ್ದಾರೆ.
ಬಾಕ್ಸ್ ಲೈವ್ 👇🏻👇🏻
ಕಲಿಷಿತ ಅನಿಲ ಸೋರಿಕೆಯಿಂದ ಸಂಭವಿಸಬಹುದಾದ ಭಾರಿ ಅನಾಹುತ ಪುರಸಭೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡ ಸ್ಥಳೀಯರನ್ನ ತಕ್ಷಣಕ್ಕೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ನೀಡಿರುವುದರಿಂದ ಅಪಾಯ ತಪ್ಪಿದೆ.ಇಂತಹ ಘಟನೆಗಳು ಸಂಭವಿಸದಂತೆ ಪುರಸಭಾ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ಬಿ.ಜಿ.ಗೋವಿಂದಪ್ಪ.
ಶಾಸಕರು.