March 24, 2025

Chitradurga hoysala

Kannada news portal

ಇಂದು ಹಿರಿಯ ಪತ್ರಕರ್ತ ಹರಿಯಬ್ಬೆ ಹೆಂಜಾರಪ್ಪ ಇವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

1 min read

ಇಂದು ಹಿರಿಯ ಪತ್ರಕರ್ತ ಹರಿಯಬ್ಬೆ ಹೆಂಜಾರಪ್ಪ ಇವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ಚಿತ್ರದುರ್ಗ ಹೊಯ್ಸಳ ನ್ಯೂಸ್,

ಚಿತ್ರದುರ್ಗ:

ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಸಿ.ಹೆಂಜಾರಪ್ಪ ಹರಿಯಬ್ಬೆ ಇವರಿಗೆ ಫೆಬ್ರವರಿ 03 ರಂದು ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರು ಮಲ್ಲೇಶ್ವರಂನ ಸಿ.ವಿ.ರಾಮನ್ ರಸ್ತೆಯ ಐ.ಐ.ಎಸ್.ಸಿ ಆವರಣದಲ್ಲಿರುವ ಜೆ. ಎನ್. ಟಾಟಾ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡುವರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಂದ್ರ ಗಡಿ ಭಾಗದ ಸಮೀಪ ಇರುವ ಹರಿಯಬ್ಬೆ ಗ್ರಾಮದ ಜೀತ ಕುಟುಂಬದ ಅನಕ್ಷರಸ್ಥ ತಂದೆ ದೊಡ್ಡಜ್ಜೇರ ಚಿಕ್ಕಣ್ಣ ಮತ್ತು ತಾಯಿ ಕರಿಯಮ್ಮ ಇವರ ೩ನೇ ಪುತ್ರನಾಗಿ ೧೯೬೪ರ ಜೂನ್-೧ರಂದು ಜನಿಸಿದ್ದಾರೆ.

ಶಿಕ್ಷಣ:

ಹರಿಯಬ್ಬೆ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ. ಚಿತ್ರದುರ್ಗದ ಎಸ್ ಜೆಎಂ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿಯುಸಿ, ಪದವಿ ವ್ಯಾಸಂಗ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ಒಂದೂವರೆ ದಶಕದ ನಂತರ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪತ್ರಕರ್ತ ವೃತ್ತಿ:

೧೦೮೩-೮೫ರಲ್ಲಿ ಪಿಯುಸಿ ಓದುವ ಸಂದರ್ಭದಲ್ಲೇ ಪತ್ರಿಕಾ ರಂಗದ ನಂಟು ಬೆಳೆಸಿಯಿತು. ಅಂದು ಚಿತ್ರದುರ್ಗದಿಂದ ಪ್ರಕಟವಾಗುತ್ತಿದ್ದ ವೀರಾಗ್ರಣಿ ಪತ್ರಿಕೆಯ ಸಂಪಾದಕರಾದ ಕೆಳಗೋಟೆ ಶ್ರೀನಿವಾಸ್ ಇವರಿಗೆ ವಿವಿಧ ಸಂಘಟನೆಗಳು, ಸಾರ್ವಜನಿಕರು ನೀಡುತ್ತಿದ್ದ ಪ್ರೆಸ್ ನೋಟ್ ಗಳನ್ನು ವೀರಾಗ್ರಣಿ ಕಚೇರಿಗೆ ತಲುಪಿಸುವ ಕೆಲಸ ಅವರದಾಗಿತ್ತು. ಅಂದು ಇಂದಿನಂತೆ ಆಧುನಿಕ ತಂತ್ರಜ್ಞಾನ ಮೇಳೈಸದ ಸಂದರ್ಭದಲ್ಲಿ ಮೊಳೆ(ಪಿನ್) ಜೋಡಿಸಿ ಅಚ್ಚು ಹಾಕಿಸುವ ಕಾಲ. ಕಾಲೇಜ್ ಅವಧಿಯಲ್ಲಿ ಓದು, ಬಿಡುವಿನ ವೇಳೆಯಲ್ಲಿ ಸಿನೆಮಾ ಪ್ರತಿನಿಧಿಯಾಗಿ ಚಲನಚಿತ್ರ ಹಂಚಿಕೆದಾರರ ಕಚೇರಿಯಲ್ಲಿ ಕೆಲಸ ಮಾಡುತ್ತಾ ಪತ್ರಿಕೆಯ ನಂಟು ಇಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದಾರೆ.

ಹಿರಿಯೂರು ವಾರ ಪತ್ರಿಕೆಯಲ್ಲಿ ಸಣ್ಣ ಸಣ್ಣ ಸುದ್ದಿಗಳನ್ನು ಬೆರೆಯುತ್ತಿದ್ದ ಇವರು ೨೦೦೦ ದಶಕದಲ್ಲಿ ಕನ್ನಡಪ್ರಭ ಪತ್ರಿಕೆಯಲ್ಲಿ ಹಿರಿಯೂರು ತಾಲೂಕು ವರದಿಗಾರರಾಗಿ ಕೆಲಸ ಆರಂಭಿಸಿದರು.
೨೦೧೧ರಿಂದ ೨೦೧೯ರ ಜುಲೈ ಅಂತ್ಯದ ವರೆಗೆ ಉದಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಪ್ರಸ್ತುತ 47 ವರ್ಷಗಳ ಅತ್ಯಂತ ಹಳೆಯದಾದ ಚಂದ್ರವಳ್ಳಿ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯ ಸಂಪಾದಕರಾಗಿ ವೃತ್ತಿ ಮುಂದುವರೆಸಿದ್ದಾರೆ.

ಭದ್ರಾ-ನಿದ್ರೆ:

ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ೨.೨೫ ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಆರಂಭವಾಗಿ ಆಮೆ ನಡಿಗೆಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ೨೦೧೪-೧೫ನೇ ಸಾಲಿನಲ್ಲಿ ಇಡೀ ಯೋಜನೆ ಕುರಿತು ನಿರಂತರವಾಗಿ ೭೩ ಸರಣಿಗಳನ್ನು ಭದ್ರಾ-ನಿದ್ರೆ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಪ್ರಕಟಿಸಿ ಸರ್ಕಾರ, ಜನಪ್ರತಿನಿಧಿಗಳ ಕಣ್ಣು ತೆರೆಸಿದ್ದರು.

ಉದಯವಾಣಿ ಪತ್ರಿಕೆಯಲ್ಲಿ ಅಭಿವೃದ್ಧಿ ವಿಚಾರ ಹಿಡಿದು ೭೩ ಸರಣಿಗಳನ್ನು ನಿರಂತರವಾಗಿ ಬರೆದಿರುವ ಹೆಗ್ಗಳಿಕೆ ಪತ್ರಕರ್ತ ಹರಿಯಬ್ಬೆ ಸಿ.ಹೆಂಜಾರಪ್ಪ ಇವರಿಗೆ ಸಲ್ಲುತ್ತದೆ. ಬಹುಶಃ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ಅಭಿವೃದ್ಧಿ ವಿಷಯ ಕುರಿತು ನಿರಂತರ ೭೩ ಸರಣಿಯಂತೆ ಬೇರೆ ಯಾವ ಸರಣಿಗಳು ಬಂದಿರಲು ಸಾಧ್ಯವಿಲ್ಲ. ಕನ್ನಡ ಪತ್ರಿಕೆಗಳಲ್ಲಿ 73 ದಿನಗಳ ನಿರಂತರ ಸರಣಿ ಲೇಖನ ಬಂದಿದ್ದು ಬಹುಶಃ ಇದೇ ಮೊದಲು ಎನ್ನಬಹುದು. ಹಾಗಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ಭದ್ರಾ-ನಿದ್ರೆ ಸರಣಿ ಒಂದು ಮೈಲುಗಲ್ಲು. ಈ ಸರಣಿ ಬರೆದ ಸಂದರ್ಭದಲ್ಲಿ ಅಂದರೆ ೧೦ ವರ್ಷಗಳಿಂದೆಯೇ ಯಾವುದೇ ಪ್ರಶಸ್ತಿ ಸಿಗುವ ಸಾಧ್ಯತೆ ಇತ್ತು. ಆದರೆ ಇವರು ಪ್ರಶಸ್ತಿಗಳ ಹಿಂದೆ ಬೀಳಲಿಲ್ಲ.

ಪ್ರಶಸ್ತಿಗಳು:

೧ ಚಿತ್ರದುರ್ಗ ಜಿಲ್ಲಾಡಳಿತ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ೨೦೨೪ನೇ ಸಾಲಿನಲ್ಲಿ ಹೆಂಜಾರಪ್ಪ ಇವರು ಭಾಜನರಾಗಿದ್ದಾರೆ.
೨ ಕರ್ನಾಟಕ ಮಾಧ್ಯಮ ಅಕಾಡೆಮಿ ಪತ್ರಕರ್ತರಿಗೆ ನೀಡುವ ೨೦೨೩ನೇ ಸಾಲಿನ ಜೀವಮಾನದ ಸಾಧನೆಗಾಗಿ ವಾರ್ಷಿಕ ಪ್ರಶಸ್ತಿ ಹರಿಯಬ್ಬೆ ಸಿ.ಹೆಂಜಾರಪ್ಪ ಇವರಿಗೆ ಲಭ್ಯವಾಗಿದೆ.

ಆಯ್ಕೆ ಸಮಿತಿ ಸದಸ್ಯರು:

೧ ಚಿತ್ರದುರ್ಗ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರಾಗಿ, ೨ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡುವ ಡಿ.ದೇವರಾಜ ಅರಸು ಜಿಲ್ಲಾ ಮಟ್ಟದ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯನಾಗಿ ಹೆಂಜಾರಪ್ಪ ಇವರು ಕೆಲಸ ಮಾಡಿದ್ದಾರೆ.

ಕೃತಿಗಳು:

೧ ಬರಪೀಡಿತ ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತಾದ ಸಮಗ್ರ ಮಾಹಿತಿಯುಳ್ಳ “ಬಯಲು-ಭದ್ರಾ” ಪುಸ್ತಕ ಮುದ್ರಣದಲ್ಲಿದೆ.
೨ ಬಯಲು ಸೀಮೆಯ ರೈತರ ಕೃಷಿ ಯಶೋಗಾಥೆ, ಪಶುಪಾಲನೆ, ನೀರಾವರಿ ಪದ್ಧತಿ, ಸಮಗ್ರ ಬೆಳೆ ವಿಧಾನ, ಪ್ರಗತಿಪರ ಕೃಷಿ ಕುರಿತಾದ “ಬಯಲು ಸೀಮೆ ರೈತರ ಯಶೋಗಾಥೆ” ಕುರಿತ ಪುಸ್ತಕ ಮುದ್ರಣದಲ್ಲಿದೆ.
೩ ಕುಂಚಿಟಿಗ ಜಾತಿಯ ಸ್ಥಿತ್ಯಂತರ, ಬುಡಕಟ್ಟು, ಕಟ್ಟೆಮನೆ, ಬಂಡಿಕಾರ, ಕೋಲ್ಕಾರ, ಪೂಜಾರಿಕೆ, ಬದುಕು ಬವಣೆ, ಆಚಾರ ವಿಚಾರ, ಕುರಿತಾದ ಸಮಗ್ರ ಮಾಹಿತಿಯುಳ್ಳ ಸಂಶೋಧನಾತ್ಮಕ ಕೃತಿ “ಕುಂಚಿಟಿಗ ಬುಡಕಟ್ಟು-ಕಟ್ಟೆಮನೆ” ಕುರಿತಾದ ಕ್ಷೇತ್ರ ಮಾಹಿತಿ ಆಧರಿಸಿದ ಪುಸ್ತಕ ಮುದ್ರಣದಲ್ಲಿದೆ. ಶೀಘ್ರದಲ್ಲೇ ಮಹತ್ವದ ಈ ಮೂರು ಪುಸ್ತಕ(ಕೃತಿ)ಗಳು ಪ್ರಕಟವಾಗಲಿವೆ.

ಅಭಿವೃದ್ಧಿ ಲೇಖನ-

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಮಂಜೂರಾತಿ, ಸರ್ವೇ, ಭೂ ಸ್ವಾಧೀನ ಸೇರಿದಂತೆ ಮತ್ತಿತರ ಮಾಹಿತಿಗಳ ವಿಷಯ ಕುರಿತು ಉದಯವಾಣಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದಾರೆ.
೨. ಕೆಎಸ್‌ಆರ್ ಟಿಸಿ ವಿಭಾಗೀಯ ಕಚೇರಿ ಆರಂಭಕ್ಕಾಗಿ ನಿರಂತರ ಗಮನ ಸೆಳೆಯಲು ವಿಶೇಷ ಸುದ್ದಿ, ಲೇಖನಗಳನ್ನು ಪ್ರಕಟಿಸಿದ್ದಾರೆ.

ಹೋರಾಟ:

ಹಿರಿಯೂರು ವಾಣಿ ಸಾಗರ ಜಲಾಶಯಕ್ಕಾಗಿ ೫ ಟಿಎಂಸಿ ನೀರಿಗೆ ಒತ್ತಾಯಿಸಿ ನಡೆದ ೫೪೨ ದಿನಗಳ ಹೋರಾಟದಲ್ಲಿ ಭಾಗಿ. ಜಿಲ್ಲಾ ನೀರಾವರಿ ಹೋರಾಟ ಸೇರಿದಂತೆ ಮತ್ತಿತರ ಜನಪರ ಹೋರಾಟಗಳಲ್ಲಿ ಭಾಗಿ. ಮೌಢ್ಯ ಪ್ರತಿಬಂಧಕ ಕಾಯ್ದೆ ಹೋರಾಟದಲ್ಲಿ ಭಾಗಿ.

ಅಧ್ಯಯನ ಪ್ರವಾಸ:

ಕೃಷಿ ಅಧ್ಯಯನಕ್ಕಾಗಿ ರಾಜ್ಯ, ಅಂತರ ರಾಜ್ಯ ಪ್ರವಾಸದಲ್ಲಿ ಪ್ರಗತಿಪರ ರೈತರು ಅಳವಡಿಸಿಕೊಂಡಿರುವ ಕೃಷಿ ವಿಧಾನಗಳ ಅರಿವಿಗಾಗಿ ಅಧ್ಯಯನ ಪ್ರವಾಸ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್, ಕೃಷಿಕ ಸಮಾಜ, ಮಕ್ಕಳ ಸಾಹಿತ್ಯ ಪರಿಷತ್ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಸದಸ್ಯನಾಗಿ ಸಕ್ರಿಯವಾಗಿ ಸೇವೆ ಮಾಡುತ್ತಿದ್ದಾರೆ.
ತಲಾ 10 ಕೋಟಿ ರೂ.ಗಳಲ್ಲಿ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜ್, ಸರ್ಕಾರಿ ವಿಜ್ಞಾನ ಕಾಲೇಜ್ ಗಳ ನೂತನ ಕಟ್ಟಡ ನಿರ್ಮಾಣಕ್ಕೆ ಪರಿಶ್ರಮ.
ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ೧೫ ಕ್ಕೂ ಹೆಚ್ಚಿನ ಕೆರೆ, ಕಟ್ಟೆಗಳಿಗೆ ವಿವಿ ಸಾಗರ ಜಲಾಶಯದಿಂದ ೦.೩೦ ಟಿಎಂಸಿ ನೀರು ಅಲೋಕೇಶನ್ ಮಾಡಿಸಲು ಶ್ರಮ.
ಹಿರಿಯೂರು ತಾಲೂಕಿನ ಗೂಳ್ಯದಿಂದ ಕಣಜನಹಳ್ಳಿ ವರೆಗೆ ೧೨ ಕಿಲೋ ಮೀಟರ್ ದೂರದ ಗ್ರಾಮೀಣ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಶ್ರಮ.
ಎಸ್ಸಿ, ಎಸ್ಟಿ ಇತರೆ ಹಿಂದುಳಿದ ವರ್ಗಗಳ ಹಾಸ್ಟೆಲ್ ಸೌಲಭ್ಯ ವಂಚಿತ ಮಕ್ಕಳಿಗೆ ಪ್ರತಿ ವರ್ಷ ಹಾಸ್ಟೆಲ್ ಕೊಡಿಸುವ ಕೆಲಸ ಮಾಡಿದ್ದಾರೆ. ಹಿರಿಯೂರು ತಾಲೂಕು ಹರಿಯಬ್ಬೆ ಗ್ರಾಮದಲ್ಲಿ ಬಿಸಿಎಂ ಇಲಾಖೆ ಮೆಟ್ರಿಕ್ ನಂತರ ವಿದ್ಯಾರ್ಥಿನಿಯರ ಹಾಸ್ಟೆಲ್ ಆರಂಭ, ಅಂತರ್ಜಲಮಟ್ಟ ವೃದ್ಧಿಗಾಗಿ ರೈತರಿಗೆ ಕೃಷಿ ಹೊಂಡ, ಚೆಕ್ ಡ್ಯಾಂ, ಸರಣಿ ಚೆಕ್ ಡ್ಯಾಂಗಳ ನಿರ್ಮಾಣ, ಗ್ರಾಮೀಣ ರಸ್ತೆಗಳ ನಿರ್ಮಾಣ ಮಾಡಿಸಲು ಶ್ರಮ ಹಾಕಿದ್ದಾರೆ.
ಚಿತ್ರದುರ್ಗದಲ್ಲಿ 2018ರ ಅಕ್ಟೋಬರ್ ನಲ್ಲಿ ಎರಡು ದಿನ ಆಯೋಜಿಸಿದ್ದ ಬಂಡಾಯ ಸಾಹಿತ್ಯ ಸಮ್ಮೇಳನದ ಪ್ರಮುಖ ಸಂಘಟಕರಾಗಿ ಕೆಲಸ ಮಾಡಿದ್ದಾರೆ. ೧೯೯೦ನೇ ಸಾಲಿನಲ್ಲಿ ಖ್ಯಾತಿ ನಟಿ ಮಾಲಾಶ್ರೀ ಅವರು ಕರ್ನಾಟಕದ ಕನ್ನಡ ಭಾಷೆಯ ಹಿರೋಗಳನ್ನು ಕೋತಿಗಳು ಎಂದು ಕರೆದಿದ್ದರು. ಮಾಲಾಶ್ರೀ ನೀಡಿದ ಹೇಳಿಕೆ ವಿರುದ್ಧ ಹೆಂಜಾರಪ್ಪನವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು.

ಸಮಾಜಮುಖಿ ಪತ್ರಕರ್ತ-

ಹರಿಯಬ್ಬೆ ಸಿ.ಹೆಂಜಾರಪ್ಪ ಅವರು ಕೇವಲ ಪತ್ರಕರ್ತರಾಗಿ ಕೆಲಸ ಮಾಡದೆ ಸಮಾಜ ಸೇವಕರಂತೆ ಸಮಾಜಮುಖಿ ಕಾರ್ಯಗಳನ್ನು ಎಲೆಮರೆ ಕಾಯಿಯಂತೆ ಮಾಡುತ್ತಿದ್ದಾರೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರ, ಗ್ರಾಮೀಣ ವರದಿಗಾರಿಕೆ, ಅಭಿವೃದ್ಧಿ ಪತ್ರಿಕೋದ್ಯಮ, ಶಿಕ್ಷಣ, ಆರೋಗ್ಯ ಕ್ಷೇತ್ರದ ಹಲವು ಆಸಕ್ತಿದಾಯಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಕನ್ನಡ ನೆಲ, ಜಲ, ಭಾಷೆಗೆ ಅಪಚಾರವಾದ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ.
ಅಷ್ಟೇ ಅಲ್ಲ ಪರಿಸರ ಸಂರಕ್ಷಣೆ, ಅಂತರ್ಜಲ ವೃದ್ಧಿಯಂತಹ ಜಾಗೃತಿ ಕಾರ್ಯಗಳನ್ನು ನಿರಂತರವಾಗಿ ಹೆಂಜಾರಪ್ಪನವರು ಮಾಡುತ್ತಾ ಬಂದಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು ಪ್ರಶಸ್ತಿಯ ಮೌಲ್ಯ ಹೆಚ್ಚಿದೆ.

About The Author

Leave a Reply

Your email address will not be published. Required fields are marked *