ಐಸಿಎಂಆರ್‍ನಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಆ.25 ರಂದು 2ನೇ ಸುತ್ತಿನ ಕೋವಿಡ್-19 ಸಮೀಕ್ಷೆ
1 min readಚಿತ್ರದುರ್ಗ, ಆ.24:
ಸಮುದಾಯ ಮಟ್ಟದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯ ಸದ್ಯದ ಪರಿಸ್ಥಿತಿಯನ್ನು ಪರಿಶೀಲನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವತಿಯಿಂದ ನಡೆಸಲ್ಪಡುತ್ತಿರುವ 2ನೇ ಸುತ್ತಿನ ನ್ಯಾಷನಲ್ ಸಿರೋ ಸರ್ವೇಲೆನ್ಸ್ ಫಾರ್ ಕೋವಿಡ್-19 ಸಮೀಕ್ಷೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಸಮೀಕ್ಷಾ ಕಾರ್ಯದ ನೋಡಲ್ ಅಧಿಕಾರಿ ಡಾ.ಆರ್.ರಂಗನಾಥ್ ತಿಳಿಸಿದ್ದಾರೆ.
ಈ ಸರ್ವೇಕ್ಷಣೆಯಲ್ಲಿ ಜಿಲ್ಲೆಯ ಒಟ್ಟು 10 ಸ್ಥಳಗಳನ್ನು ಆಯ್ದುಕೊಳ್ಳಲಾಗಿದ್ದು, ಸ್ಥಳೀಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ನ್ಯಾಷನಲ್ ಇನ್ಸಿಟಿಟ್ಯೂಟ್ ಫಾರ್ ರೀಸರ್ಚ್ ಟ್ಯೂಬ್ಯೂರೋಕ್ಯೂಲೊಸಿಸ್‍ನ 30 ಜನರ ತಂಡವು ಈ ಸರ್ವೇಕ್ಷಣೆ ನಡೆಸಲಿದೆ. ಈ ಕಾರ್ಯಕ್ರಮವು ಸುಗಮವಾಗಿ ನಡೆಯಲು ಬೇಕಾದ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಇಲಾಖೆಗಳಿಗೆ ನಿರ್ದೇಶನ ನೀಡಿರುತ್ತಾರೆ. ಈ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿಗಳು, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಇವರನ್ನು ನಿಯೋಜಿಸಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಈ ಕಾರ್ಯಕ್ರಮದ ಮೇಲುಸ್ತುವಾರಿ ನಡೆಸಲಿದ್ದಾರೆ.
ಈ ಸರ್ವೇಕ್ಷಣೆಯ ಉದ್ದೇಶ, ಸಮುದಾಯ ಮಟ್ಟದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿದ್ದು, ಕರ್ನಾಟಕದಲ್ಲಿ ಕಲಬುರ್ಗಿ, ಚಿತ್ರದುರ್ಗ ಹಾಗೂ ಬೆಂಗಳೂರು ನಗರ ಈ ಮೂರು ಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿನ ಚಿತ್ರದುರ್ಗ ತಾಲ್ಲೂಕಿನ ವಡ್ಡನಹಳ್ಳಿ, ಚಳ್ಳಕೆರೆ ತಾಲ್ಲೂಕಿನ ಘಟಪರ್ತಿ, ಪರಶುರಾಂಪುರ ಹಾಗೂ ಚಳ್ಳಕೆರೆ ನಗರದ ವಾರ್ಡ್ ಸಂಖ್ಯೆ-22, ಹಿರಿಯೂರು ತಾಲ್ಲೂಕಿನ ಭರಮಗಿರಿ, ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ ನಗರದ ವಾರ್ಡ್ ಸಂಖ್ಯೆ-5, ಹಿರೆಕಂದವಾಡಿ, ಹೊಸದುರ್ಗ ತಾಲ್ಲೂಕಿನ ತುಂಬಿನಕೆರೆ, ಹಾಗಲಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಕಾಟನಾಯಕನಹಟ್ಟಿ ಈ ಸ್ಥಳಗಳನ್ನು ಯಾದೃಚ್ಛವಾಗಿ ಆಯ್ದುಕೊಳ್ಳಲಾಗಿದೆ.
ಜಿಲ್ಲೆಯ ಈ 10 ಸ್ಥಳಗಳಲ್ಲಿ ಒಟ್ಟು ಪ್ರದೇಶವನ್ನು 4 ಕ್ಲಸ್ಟರ್‍ಗಳಾಗಿ ವಿಂಗಡಿಸಿ, ಪ್ರತಿ ಕ್ಲಸ್ಟರ್‍ನಿಂದ ರ್ಯಾಂಡಮ್ ಸ್ಯಾಪಲಿಂಗ್ ಮಾದರಿಯಲ್ಲಿ ಮನೆಗಳನ್ನು ಆಯ್ಕೆ ಮಾಡಿ ಆ ಮನೆಯ ಆಯ್ದ ವ್ಯಕ್ತಿಗೆ ಆಪ್ತಸಮಾಲೋಚನೆ ನಡೆಸಿ, ಪ್ರಶ್ನಾವಳಿಗಳಿಗೆ ಉತ್ತರ ಪಡೆದು ಅವರಿಂದ ಪರೀಕ್ಷೆ ನಡೆಸುವುದಕ್ಕೆ ಸಮ್ಮತಿ ಪಡೆದು 4-5 ಎಂ.ಎಲ್ ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಈ ರೀತಿ ಪ್ರತಿ ಕ್ಲಸ್ಟರ್‍ನಿಂದ 10 ಮಾದರಿಗಳ ಹಾಗೆ ಪ್ರತಿ ಸ್ಥಳದಿಂದ 40 ಮಾದರಿಗಳು ಒಟ್ಟು 400 ಮಾದರಿಗಳನ್ನು ಚಿತ್ರದುರ್ಗ ಜಿಲ್ಲೆಯಿಂದ ಸಂಗ್ರಹಿಸಿ ಇಟisಚಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಗೂ ಕೋವಿಡ್-19 ಸೋಂಕಿನ ವಿವರವನ್ನು ಪಡೆಯಲಾಗುತ್ತದೆ. ಈ ಸರ್ವೇಕ್ಷಣೆಗೆ ಐಸಿಎಂಆರ್,ಎನ್‍ಐಆರ್‍ಟಿಯ ತಂಡ ಹಾಗೂ ಸ್ಥಳೀಯ ಆರೋಗ್ಯ ಕೇಂದ್ರ ಪ್ರಯೋಗಶಾಲಾ ತಂತ್ರಜ್ಞರನ್ನು ನಿಯೋಜಿಸಲಾಗಿದ್ದು, ನಿಗಧಿಪಡಿಸಿದ ಸ್ಥಳಗಳಿಗೆ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಮೇಲ್ವಿಚಾಕರು ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಹಾಗೂ ಸಿಬ್ಬಂದಿ, ಈ ಸಮೀಕ್ಷೆಯ ಚಟುವಟಿಕೆಯನ್ನು ಸಮನ್ವಯತೆಯೊಂದಿಗೆ ಮೇಲ್ವಿಚಾರಣೆ ಮಾಡಲಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದಿಂದ ಒಟ್ಟು 09 ಹಿರಿಯ ಅಧಿಕಾರಿಗಳು ಕಾರ್ಯಕ್ರಮ ಮೇಲ್ವಿಚಾರಣೆ ಮಾಡಲಿದ್ದಾರೆ.
ಐಸಿಎಂಆರ್‍ನ ವಿಜ್ಞಾನಿಗಳು ರಾಜ್ಯಮಟ್ಟದ ಸರ್ವೇಕ್ಷಣಾಧಿಕಾರಿಗಳು ಹಾಗೂ ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳು, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರು ಈ ಸಮೀಕ್ಷಾ ಕಾರ್ಯಚಟುವಟಿಕೆಯ ಮೇಲುಸ್ತುವಾರಿ ವಹಿಸಲಿದ್ದಾರೆ.
ಆಗಸ್ಟ್ 24 ರಂದು ಜಿಲ್ಲೆಯ ಆಯ್ದು ಗ್ರಾಮಗಳಲ್ಲಿ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮುಖಂಡರು ಹಾಗೂ ಸದಸ್ಯರು, ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಜನಸಾಮಾನ್ಯರಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿದ್ದಾರೆ.
ಕಾರ್ಯಕ್ರಮಕ್ಕೆ ಆಯ್ದ ಸ್ಥಳಗಳ ಪೊಲೀಸ್ ಅಧಿಕಾರಿಗಳು ಭದ್ರತೆಯ ಜವಾಬ್ದಾರಿ ವಹಿಸಿದ್ದಾರೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ ವತಿಯಿಂದ ನಡೆಸಲಾಗಿರುವ ನ್ಯಾಷನಲ್ ಸಿರೋ ಸರ್ವೇಲೆನ್ಸ್ ಫಾರ್ ಕೋವಿಡ್-19 ಸಮೀಕ್ಷೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲನೇ ಸುತ್ತು ಮೇ 16 ರಂದು ಆಯೋಜಿಸಲಾಗಿತ್ತು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಸಮೀಕ್ಷಾ ಕಾರ್ಯದ ನೋಡಲ್ ಅಧಿಕಾರಿ ಡಾ.ಆರ್.ರಂಗನಾಥ್ ತಿಳಿಸಿದ್ದಾರೆ.
=========