ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿರ
1 min readಚೆನ್ನೈ: ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ (74) ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ಸೋಮವಾರ ಹೇಳಿದೆ.
ವೆಂಟಿಲೇಟರ್ ಮತ್ತು ಇಸಿಎಂಒ ಸಹಾಯದೊಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಎಂಜಿಎಂ ಹೆಲ್ತ್‌ಕೇರ್‌ನ ಡಾ.ಅನುರಾಧಾ ಬಾಸ್ಕರನ್ ತಿಳಿಸಿದ್ದಾರೆ. ಕೋವಿಡ್ ದೃಢಪಟ್ಟ ಬೆನ್ನಲ್ಲೇ ಆಗಸ್ಟ್ 5ರಂದು ಎಸ್‌ಪಿಬಿ ಆಸ್ಪತ್ರೆಗೆ ದಾಖಲಾದರು.
ಬಾಲಸುಬ್ರಮಣ್ಯಂ ಅವರ ಸದ್ಯದ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಹಾಗೂ ನಮ್ಮ ತಜ್ಞ ವೈದ್ಯರ ತಂಡ ಅವರನ್ನು ಆರೋಗ್ಯ ಗಮನಿಸುತ್ತಿರುವುದಾಗಿ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿದೆ ಎಂದು ಪಿಆರ್‌ಒ ನಿಖಿಲ್ ಮುರುಗನ್ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಇದು ವದಂತಿ ಎಂದು ಎಸ್‌ಪಿಬಿ ಪುತ್ರ ಚರಣ್ ಹೇಳಿದ್ದಾರೆ.
ನನ್ನಪ್ಪನಿಗೆ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂಬ ವದಂತಿಯೊಂದು ಹರಿದಾಡುತ್ತಿದೆ. ಅವರಿಗೆ ಕೋವಿಡ್ ಪಾಸಿಟಿವ್ ಅಥವಾ ನೆಗೆಟಿವ್ ಏನೇ ಆಗಿರಲಿ, ಅವರ ಆರೋಗ್ಯ ಸ್ಥಿತಿ ಅದೇ ರೀತಿ ಇದೆ. ಇಎಂಒ ವೆಂಟಿಲೇಟರ್ ಸಹಾಯದಿಂದ ಅವರು ಚಿಕಿತ್ಸೆಯಲ್ಲಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಚರಣ್ ತಮ್ಮ ಫೇಸ್‌ಬುಕ್ ಪುಟದಲ್ಲಿ ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ.