ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು ಕುಡಿಯುವ ನೀರಿಗೆ ಸಮಸ್ಯೆಯಿಲ್ಲ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹರ್ಷ
1 min readಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಂದ ಗೋನೂರು ಕೆರೆಗೆ ಬಾಗಿನ ಅರ್ಪಣೆ
ಚಿತ್ರದುರ್ಗ, ಆಗಸ್ಟ್ 27:ಚಿತ್ರದುರ್ಗ ತಾಲ್ಲೂಕಿನ ಗೋನೂರು ಕೆರೆ ಐದು ವರ್ಷಗಳಲ್ಲಿ ಮೂರು ಬಾರಿ ತುಂಬಿದ್ದು, ಸುತ್ತಲಿನ ರೈತರಿಗೆ ಸಂತಸ ಉಂಟಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಗೋನೂರು ಕೆರೆ ಕೋಡಿಬಿದ್ದ ಹಿನ್ನಲೆಯಲ್ಲಿ ಗುರುವಾರ ಗ್ರಾಮಸ್ಥರೊಂದಿಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಈ ವರ್ಷ ಚಿತ್ರದುರ್ಗ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಶೇ 80 ರಷ್ಟು ಚೆಕ್‍ಡ್ಯಾಂಗಳು ಭರ್ತಿಯಾಗಿವೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಶೇ.100 ರಷ್ಟು ಬಿತ್ತನೆಯಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಮಘೆ, ಉತ್ತರೆ, ಚಿತ್ತಾ, ಸ್ವಾತಿ ದೊಡ್ಡ ಮಳೆಗಳಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ಇನ್ನೂ ಎರಡು ವರ್ಷಗಳ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು. ಚಿತ್ರದುರ್ಗದ ಮೇಲುದುರ್ಗದಲ್ಲಿ ಉತ್ತಮ ಮಳೆಯಾದರೆ ಅಲ್ಲಿಂದ ಹರಿಯುವ ನೀರು ಮೊದಲು ಕೋಟೆಯ ಗೋಪಾಲಸ್ವಾಮಿ ಹೊಂಡ, ಅಕ್ಕ ತಂಗಿ ಹೊಂಡ, ಚಂದ್ರವಳ್ಳಿ ಕೆರೆ, ಸಿಹಿ ನೀರು ಹೊಂಡದ ತುಂಬಿದ ನಂತರ ಸಂತೆ ಹೊಂಡದ ಮೂಲಕ ಮಲ್ಲಾಪುರ ಕೆರೆ ಮತ್ತು ಗೋನೂರು ಕೆರೆ ಸೇರುತ್ತದೆ. ಇಲ್ಲಿಂದ ನಂತರ ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ ಕೆರೆ, ಸಾಣಿಕೆರೆ, ರಾಣಿಕೆರೆಗೆ ಸೇರಿ ನಂತರ ಆಂಧ್ರ ಪ್ರದೇಶಕ್ಕೆ ಸೇರುತ್ತದೆ. ಹೀಗೆ ಒಂದಕ್ಕೊಂದು ಸಂಪರ್ಕ ಇರುವಂತೆ ಜಿಲ್ಲೆಯ ಹಿರಿಯರು ಕೆರೆಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆ ಇವೆ. ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ, ಕೊರೊನಾ ಹರಡುವಿಕೆಯನ್ನು ತಡೆಗಟ್ಟಬೇಕು ಎಂದು ಶಾಸಕರು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಕಲಾ, ಮಾಜಿ ಸದಸ್ಯ ಹನುಮಂತಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್, ಮುಖಂಡರಾದ ಮಾಳಿಗೆ ಪಾಪಯ್ಯ, ಪೂಜಾರಿ ಹನುಮಂತಪ್ಪ, ಬೈಯಣ್ಣ, ಸಣ್ಣ ಅಣ್ಣಯ್ಯ, ಅಜ್ಜಪ್ಪ, ಬಿ.ಬಿ. ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ, ಗ್ರಾಮ ಲೆಕ್ಕಾಧಿಕಾರಿ ಕವಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.