April 20, 2024

Chitradurga hoysala

Kannada news portal

ಕೈ ಬಿಟ್ಟು ಕಮಲ ಹಿಡಿದು ಚುನಾವಣಾ ರಂಗು ತರುವರೆ ರಾಜಣ್ಣ ?

1 min read

ತುಮಕೂರು: ರಾಜ್ಯದಲ್ಲಿ ಉಪ ಚುನಾವಣೆ ಕಣಕ್ಕೆ ಮತ್ತೊಂದು ಕ್ಷೇತ್ರ ಸಜ್ಜಾಗಿದೆ. ಆ ಕ್ಷೇತ್ರ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಮಾಡುವ ಮೊದಲೇ ರಾಜಕೀಯ ಚರ್ಚೆ ಜೋರಾಗಿದೆ. ಉಪಚುನಾವಣೆ ಘೋಷಣೆಗೆ ಇನ್ನು ಮೂರು ತಿಂಗಳು ಕಾಯಬೇಕು. ಆದರೂ ಸ್ಪರ್ಧೆ ಮಾಡುವ ಆಕಾಂಕ್ಷೆಗಳ ನಡುವೆ ಪೈಪೋಟಿ ಬಿರುಸುಗೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವ ರಾಜಕೀಯ ಆಟ ಶುರುವಾಗಿದೆ.
ಜೆಡಿಎಸ್ ನಲ್ಲಿ ಬಿ.ಸತ್ಯನಾರಾಯಣ ಕುಟುಂಬದ ಹೊರತಾಗಿ ಟಿಕೆಟ್ ನೀಡಬೇಕೆಂಬ ಕೂಗು ಎದ್ದಿದ್ದರೆ, ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿರುದ್ದ ಸ್ವ ಪಕ್ಷದ ಕೆ.ಎನ್ ರಾಜಣ್ಣ ತೊಡೆ ತಟ್ಟುತ್ತಿದ್ದಾರೆ. ಹಾಗಾಗಿ ಈ ಬಾರಿ ಜೆಡಿಎಸ್ V/s ಜೆಡಿಎಸ್, ಕಾಂಗ್ರೆಸ್ V/s ಕಾಂಗ್ರೆಸ್ ನಡುವೆಯೇ ಸಮರ ನಡೆಯತೊಡಗಿದೆ. ಇದು ಆರಂಭದಲ್ಲೇ ಉಭಯ ಪಕ್ಷದ ವರಿಷ್ಠರಿಗೆ ತಲೆಬಿಸಿ ತಂದಿಟ್ಟಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿಯಲ್ಲಿ ಕೆ.ಎನ್ ರಾಜಣ್ಣ ಸೋಲು ಕಂಡಿದ್ದರು. ಇದರಿಂದ ಗೆದ್ದೇ ಗೆಲ್ಲುವೆ ಎನ್ನುವ ರಾಜಣ್ಣನವರ ಹೆಚ್ಚಿನ ಆತ್ಮ ವಿಶ್ವಾಸಕ್ಕೆ ತೀವ್ರ ಪಟ್ಟು ಬಿದ್ದಿತ್ತು. 19 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇಂತಹ ಹೀನಾಯ ಸೋಲಿಗೆ ಟಿ.ಬಿ.ಜಯಚಂದ್ರ ಕೈ ಚಳಕ ಸಹ ಇತ್ತು ಎಂಬ ಆರೋಪವಿದೆ. ಇದರ ಸುಳಿವು ಅರಿತಿರುವ ಕೆ.ಎನ್ ರಾಜಣ್ಣ ಶಿರಾದಲ್ಲಿ ಸ್ಪರ್ಧಿಸುವ ಮಾತುಗಳನ್ನು ಆಡುತ್ತಿದ್ದಾರೆ.
ಈಗಾಗಲೇ ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿ ಉಪಚುನಾವಣೆಗೆ ನಾನು ಕೂಡ ಅಭ್ಯರ್ಥಿ ಆಕಾಂಕ್ಷಿ ಎಂದಿದ್ದಾರೆ. ಹೀಗೆ ಹೇಳುವ ಮೂಲಕ ಟಿ.ಬಿ.ಜಯಚಂದ್ರ ಬಂಡಾಯವೇಳುವಂತೆ ಮಾಡುತ್ತಿದ್ದಾರೆ. ತನ್ನ ಸೋಲಿಗೆ ಕಾರಣರಾದ ಟಿ.ಬಿ.ಜಯಚಂದ್ರ ಅವರಿಗೆ ‘ಒಳಏಟು’ ನೀಡಲು ರಾಜಣ್ಣ ತೀರ್ಮಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

 ಶಿರಾ ಶಾಸಕ, ಮಾಜಿ ಸಚಿವ ಬಿ.ಸತ್ಯನಾರಾಯಣ್ ನಿಧನ
ಶಿರಾದಲ್ಲಿ ರಾಜಣ್ಣ ಸರ್ಧೆಗೆ ರಾಜ್ಯ ವರಿಷ್ಠರು ಒಪ್ಪುವುದಿಲ್ಲ. ಟಿ.ಬಿ ಜಯಚಂದ್ರ ಅವರಿಗೆ ಟಿಕೆಟ್ ಖಚಿತ. ಇದು ರಾಜಣ್ಣ ಅವರಿಗೂ ಗೊತ್ತು. ಆದರೆ ತನ್ನನ್ನು ಸೋಲಿಸಿದ ವ್ಯಕ್ತಿಯ ವಿರುದ್ಧ ದಾಳ ಉರುಳಿಸುವ ಪ್ರಯತ್ನವನ್ನು ರಾಜಣ್ಣ ಬಿಟ್ಟುಕೊಡುವುದಿಲ್ಲವೆಂಬುದು ಗ್ಯಾರೆಂಟಿ. ಅದೇ ಕಾರಣಕ್ಕೆ ಶಿರಾ ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯವಿದೆ. ತನ್ನ ಸಮುದಾಯದ ಮತಗಳು, ಹಿಂದುಳಿದ ವರ್ಗದ ಮತಗಳು ತನ್ನ ಬುಟ್ಟಿಯಲ್ಲಿವೆ ಎಂಬುದನ್ನು ರಾಜಣ್ಣ ಅವರು ಪಕ್ಷಕ್ಕೆ, ಜಯಚಂದ್ರರವರಿಗೆ ನೆನಪಿಸುತ್ತಿದ್ದಾರೆ. ತನ್ನ ಬೆಂಬಲವಿಲ್ಲದೇ ಗೆಲುವು ಅಷ್ಟು ಸುಲಭವಲ್ಲ ಎಂಬ ಸಂದೇಶವನ್ನು ಹರಿಬಿಡುತ್ತಿದ್ದಾರೆ.
ಕೆ.ಎನ್.ಆರ್ ‘ಮಾತಿನ ಗುಮ್ಮ’ನಿಗೆ ಟಿ.ಬಿ.ಜಯಚಂದ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಅಳುಕು ಇಲ್ಲದಿಲ್ಲ. ಯಾಕೆಂದರೆ ಕೆ.ಎನ್.ರಾಜಣ್ಣ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರು. ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಸಾಲ ನೀಡಿ ಜನಮನ್ನಣೆ ಗಳಿಸಿದ್ದಾರೆ. ಇದರ ಮಹತ್ವವನ್ನು ಅರಿತಿರುವ ಟಿಬಿಜೆ ರಾಜಣ್ಣ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಮೌನವಾಗಿಯೇ ಎಲ್ಲವನ್ನೂ ಗಮನಿಸುತ್ತಲೇ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜೆ ನೆಚ್ಚಿಕೊಂಡಿರುವುದು ಗೊಲ್ಲರು, ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದ ಮತಗಳನ್ನು. ಒಕ್ಕಲಿಗ ಮತಗಳು ಮೂರು ಪಕ್ಷಗಳಲ್ಲಿ ಹಂಚಿಕೆಯಾದರೂ ದಲಿತರು ಮತ್ತು ಹಿಂದುಳಿದ ವರ್ಗದ ಮತಗಳು ಗ್ಯಾರೆಂಟಿ ಬರಲಿವೆ ಎಂದು ಜಯಚಂದ್ರ ಅರಿತಿದ್ದಾರೆ. ಆದರೆ ನಾಯಕ ಸಮುದಾಯದ ಮತಗಳು 9 ಸಾವಿರ, ದಲಿತ ಮತಗಳು 56 ಸಾವಿರ, ಗೊಲ್ಲರ ಮತಗಳು 46 ಸಾವಿರ, ಮುಸ್ಲೀಂ ಮತಗಳು 12 ಸಾವಿರ, ಒಕ್ಕಲಿಗ ಮತಗಳು 41 ಸಾವಿರ, ಕುರುಬರ ಮತಗಳು 9 ಸಾವಿರ ಹೀಗೆ ಎಲ್ಲ ಜಾತಿಯ ಮತದಾರರು ರಾಜಣ್ಣನವರ ಮಾತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾರರು.
ಇದೇ ಕಾರಣಕ್ಕೆ ಕೆಎನ್ಆರ್ ತನ್ನ ಬುಟ್ಟಿಯಲ್ಲಿ ಸಾಕಷ್ಟು ಮತಗಳು ಇವೆ. ಅವು ‘ನಿಮಗೆ’ ಧಕ್ಕವುದಿಲ್ಲ ಎಂಬ ಸಂದೇಶವನ್ನು ಟಿಬಿಜೆಗೆ ರವಾನಿಸುತ್ತಿದ್ದಾರೆ. ಕೆಎನ್.ಆರ್ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ಇಲ್ಲಿ ಜಯಚಂದ್ರ ಅವರಿಗೆ ಹೊಡೆತ ಬೀಳುವುದು ಗ್ಯಾರೆಂಟಿ. ಶತ್ರು ಜೊತೆ ಕೈ ಜೋಡಿಸಿದರೆ ಗೆಲುವು ಯಾರದ್ದು ಇದೇ ಕುತೂಹಲ.
ಜೆಡಿಎಸ್ ನಲ್ಲಿ ಸಾಕಷ್ಟು ಆಕಾಂಕ್ಷಿಗಳ ಪಟ್ಟಿಯೇ ಇದೆ. ವಂಶಪಾರಂಪರ್ಯವನ್ನು ವಿರೋಧಿಸುವ ಗುಂಪು ಉಲ್ಟಾ ಹೊಡೆದರೆ ಅದು ಯಾರಿಗೆ ವರದಾನವಾಗಬಹುದು ಎಂಬ ಚರ್ಚೆ ನಡೆಯುತ್ತಲೇ ಇದೆ.

ಬಿಜೆಪಿಯಿಂದ ಕೆ.ಎನ್.ರಾಜಣ್ಣ ಸ್ವರ್ಧೆ ಸಾಧ್ಯತೆ? : ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಚು‌ನಾವಣಾ ಕ್ಷೇತ್ರಕ್ಕೆ ಸೇರುವ ಶಿರಾ ಮತದಾರರು ನಿರೀಕ್ಷೆ ಮೀರಿ ಬಿಜೆಪಿಗೆ ಮತ ನೀಡಿದ್ದರು.‌ ಅದೇ ಹಾದಿಯಲ್ಲಿ ಈ ಬಾರಿ ಶಿರಾ ಉಪ ಚುನಾವಣೆಗೆ ತುಮಕೂರಿನ ರಾಜಕಾರಣದಲ್ಲಿ ತನ್ನದೇ ಹಿಡಿತ ಜೊತೆಗೆ ಹಿಂದುಳಿದ ವರ್ಗಗಳ ನಾಯಕನಾಗಿ ತನ್ನದಸ ಆದ ಪ್ರಭಾವ ಹೊಂದಿರುವ ರಾಜಣ್ಣ ಅವರಿಗೆ ಬಿಜೆಪಿಗೆ ಕರೆ ತಂದು ಶಿರಾ ವಿಧಾನಸಭಾ ಅಭ್ಯರ್ಥಿ ಮಾಡಿದರೆ ಗೆಲುವು ಸಾಧಿಸಬಹುದು ಎಂಬ ಲೆಕ್ಕಚಾರ ಸಹ ಹಾಕುತ್ತಿದೆ ಎಂಬ ಮಾತು ಗುಸುಗುಸು ಚರ್ಚೆಯಲ್ಲಿದೆ. ಆದರೆ ಇಲ್ಲಿನ ಮತದಾರರು ಅಭ್ಯರ್ಥಿಗಳು ಫೈನಲ್ ಆದ ನಂತರ ಪೂರ್ಣ ಚಿತ್ರಣ ಸಿಗಬಹುದು ಎಂದು ಎಲ್ಲಾರೂ ಕಾದು ನೋಡುತ್ತಿದ್ದಾರೆ.

About The Author

Leave a Reply

Your email address will not be published. Required fields are marked *