April 19, 2024

Chitradurga hoysala

Kannada news portal

ಮೀಸಲಾತಿ ಕೇವಲ ಜಾತಿ ಆಧಾರಿತ ಅಲ್ಲ
ಕಲಬುರಗಿ ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ್ ಗಾಜನೂರು

1 min read

ಚಿತ್ರದುರ್ಗ: ಭಾರತದಲ್ಲಿ ಕೇವಲ ಜಾತಿ ಆಧಾರಿತವಾಗಿ ಮಾತ್ರ ಮೀಸಲಾತಿ ಇಲ್ಲ. ಜಾತಿ, ಧರ್ಮ, ಲಿಂಗ, ಪ್ರದೇಶ ಹಾಗೂ ಆರ್ಥಿಕತೆ ಆಧಾರಿತವಾಗಿಯೂ ಮೀಸಲಾತಿ ಇದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಆರ್ಥಿಕ ಮೀಸಲಾತಿಯನ್ನು ನೀಡಲಾಗುತ್ತಿದೆ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ್ ಗಾಜನೂರು ಅಭಿಪ್ರಾಯಪಟ್ಟರು.
ನಗರದ ಭೋವಿ ಗುರುಪೀಠದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ನ್ಯಾಯಾಲಯದ ತೀರ್ಪುಗಳು: ಮೀಸಲಾತಿ, ಒಳ ಮೀಸಲಾತಿ, ಕೆನೆಪದರ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕುರಿತ ವೆಬಿನಾರ್‍ನಲ್ಲಿ ಮಾತನಾಡಿದರು.
ಭಾರತದಲ್ಲಿ ಶೇ.90ರಷ್ಟು ಉದ್ಯೋಗಗಳು ಖಾಸಗಿ ವಲಯದಲ್ಲಿದ್ದರೆ, ಶೇ.10ರಷ್ಟು ಉದ್ಯೋಗಗಳು ಸರ್ಕಾರಿ ವಲಯದಲ್ಲಿವೆ. ಈ ಶೇ.10ರಷ್ಟು ಉದ್ಯೋಗಗಳಿಗೆ ಮಾತ್ರ ಮೀಸಲಾತಿ ಅನ್ವಯವಾಗುತ್ತಿದೆ. ಭಾರತದಲ್ಲಿ ಮಾತ್ರ ಮೀಸಲಾತಿ ಇದೆ. ಅದು ಜಾತಿ ಆಧಾರಿತವಾಗಿ ಮಾತ್ರ ಇದೆ ಎಂಬುದು ತಪ್ಪಾದ ಅಭಿಪ್ರಾಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಳಗೊಂಡ ದೇಶಗಳು ತನ್ನ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟವರಿಗೆ ವಿಶೇಷ ಅವಕಾಶಗಳನ್ನು ಒದಗಿಸುತ್ತಿವೆ. ಜಗತ್ತಿನ ಎಲ್ಲಾ ದೇಶಗಳಲ್ಲಿ ಬೇರೆ ಬೇರೆ ಮಾದರಿಯಲ್ಲಿ ಸಾಮಾಜಿಕ ಅಸಮಾನತೆಗಳಿಗೆ ಒಳಗಾದವರಿಗೆ ಮೀಸಲಾತಿ ನೀಡಲಾಗುತ್ತಿದೆ ಎಂದರು.
ದೇಶದ ನಾಗರಿಕರಿಗೆ ನೀಡುವ ಪಡಿತರ ವ್ಯವಸ್ಥೆ, ರೈತರಿಗೆ ಸಬ್ಸಿಡಿ, ಗ್ಯಾಸ್ ಸಬ್ಸಿಡಿ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಮುಂತಾದ ಯೋಜನೆಗಳು ಸೇರಿದಂತೆ ಸರ್ಕಾರದಿಂದ ಜಾರಿಗೆ ತಂದಿರುವ ಯೋಜನೆಗಳ ಫಲ ಅನುಭವಿಸುತ್ತಿರುವವಸಿಗುವ ಸೌಲಭ್ಯಗಳನ್ನು ಪಡೆಯುತ್ತಿರುವ ಜನರನ್ನು ಬಡತನದಿಂದ ಮೇಲೆತ್ತಲು ನೀಡಲಾಗುತ್ತಿರುವ ಆರ್ಥಿಕ ಮೀಸಲಾತಿಯಾಗಿದೆ ಎಂದರು.
ಮೀಸಲಾತಿಯನ್ನು ಜಗತ್ತಿನ ಎಲ್ಲಾ ದೇಶಗಳಲ್ಲಿ ಇದೆ. ಮತ್ತು ಇನ್ನೂ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತಿದೆ. ಭಾರತದಲ್ಲಿ ಅದನ್ನು ಮೀಸಲಾತಿ, ಇತರೆ ದೇಶಗಳಲ್ಲಿ ಕೋಟಾ ವ್ಯವಸ್ಥೆ ಎನ್ನಲಾಗುತ್ತಿದೆ. ಅಮೆರಿಕದಲ್ಲಿ ಕೂಡಾ ಸಾಮಾಜಿಕವಾಗಿ ಹಿಂದುಳಿದವರಿಗೆ, ಕರಿಯರಿಗೆ ಮೀಸಲಾತಿ ನೀಡಲಾಗುತ್ತಿದೆ. ಇಡೀ ಭಾರತದಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲ. ಅಮೆರಿಕದಲ್ಲಿ ಖಾಸಗಿ ಕ್ಷೇತ್ರದಲ್ಲೂ ಸಹ ಮೀಸಲಾತಿ ಇದೆ. ಅಮೆರಿಕದ ಯಾವುದಾದರೂ ಖಾಸಗಿ ಕಂಪನಿ ತನ್ನ ವಾರ್ಷಿಕ ವರಮಾನ 50 ಸಾವಿರ ಡಾಲರ್ ದಾಟಿದರೆ ತನ್ನ ಕಂಪನಿಯಲ್ಲಿ ಶೇ.50 ರಷ್ಟು ಹಿಂದುಳಿದವರಿಗೆ ಹಾಗೂ ತುಳಿತಕ್ಕೊಳಗಾದವರಿಗೆ ಮೀಸಲಾತಿ ನೀಡುವ ನಿಯಮವಿದೆ. ಕೆನಡಾ, ಜಪಾನ್, ಚೀನಾ ದೇಶಗಳಲ್ಲೂ ಮೀಸಲಾತಿ ಇದೆ ಎಂದರು.
ಭಾರತದಲ್ಲಿ ಮೀಸಲಾತಿ ಬಗೆಗೆ ತಪ್ಪಾದ ದೃಷ್ಟಿಕೋನಗಳಿವೆ. ಮೀಸಲಾಗಿ ಬಗೆಗ ಅನೇಕ ಪೂರ್ವಾಗ್ರಹಗಳಿದ್ದು ಅವುಗಳಿಂದ ಹೊರಬರಬೇಕಿದೆ. ಮೀಸಲಾತಿಯ ಫಲ ಅನುಭವಿಸುತ್ತಿರುವವರೂ ಕೂಡ ಅದರ ಫಲಾನುಭವಿ ಎಂಬ ಅರಿವೇ ಇರುವುದಿಲ್ಲ. ಸಂವಿಧಾನ ಮೀಸಲಾತಿಯನ್ನು ಬಡತನ ನಿವಾರಣೆಗೆ ಇರುವುದಲ್ಲ ಎಂದು ಕೂಡ ಹೇಳುತ್ತದೆ ಎಂದರು.
ಭೋವಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಬಾಬಾಸಾಹೇಬರ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ಸೌಲಭ್ಯ ಲಭಿಸಬೇಕು. ಸಮಬಾಳು-ಸಮಪಾಲು ತರಲು ಮೀಸಲಾತಿ ಆರಂಭವಾಗಿದೆ. ಯಾವ ಆಶಯವನ್ನು ಇಟ್ಟುಕೊಂಡು ಮೀಸಲಾತಿಯನ್ನು ಜಾರಿಗೊಳಿಸಲಾಗಿದೆಯೋ ಅದನ್ನು ಜಾರಿಗೊಳಿಸಲು ಸಂಘಟಿತ ಹೋರಾಟ ನಡೆಸಬೇಕು ಎಂದರು.
ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೂ ಮುನ್ನ ಹಿಂದಿನ ಸರ್ಕಾರ ರೂಪಿಸಿದ್ದ ಸಾಮಾಜಿಕ, ಆರ್ಥಿಕ, ಜಾತಿಗಣತಿಯ ವರದಿ ಹಾಗೂ ಕೇಂದ್ರ ಸರ್ಕಾರದ ಜನಗಣತಿ ವರದಿಯನ್ನು ವೈಜ್ಞಾನಿಕವಾಗಿ ತಾಳೆ ಮಾಡಿ ಮೀಸಲಾತಿ ಹಂಚಬೇಕು. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಸಮಿತಿಯ ವರದಿಯ ಅಂಕಿಅಂಶಗಳ ಆಧಾರಿತವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದರು.
ವೆಬಿನಾರ್‍ನಲ್ಲಿ ಭೋವಿ ಗುರುಪೀಠದ ಕಾರ್ಯನಿರ್ವಾಹಕ ಅಧಿಕಾರಿ ಗೌನಹಳ್ಳಿ ಗೋವಿಂದಪ್ಪ, ಡಾ.ಫಾಲಾಕ್ಷಮೂರ್ತಿ, ಡಾ.ಬಿ.ಶೇಖರ್, ಹೈಕೋರ್ಟ್ ವಕೀಲ ಅನಂತನಾಯ್ಕ್, ಡಾ.ಗೌತಮ್, ಡಾ.ಲೋಕೇಶ್, ಡಾ.ಗಿರೀಶ್ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *