ಮಗುವಿನ ಉತ್ತಮ ಆರೋಗ್ಯಕ್ಕೆ ಜಂತುಹುಳು ಮಾತ್ರೆ ವಿತರಿಸಿ: ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಸಲಹೆ
1 min readಚಿತ್ರದುರ್ಗ, ಸೆಪ್ಟೆಂಬರ್ 07:
ಜಿಲ್ಲೆಯ 01 ರಿಂದ 19 ವರ್ಷದ ಪ್ರತಿಯೊಬ್ಬ ಮಗುವಿಗೂ ಜಂತುಹುಳು ನಿವಾರಕ ಮಾತ್ರೆಗಳನ್ನು ವಿತರಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಸಲಹೆ ನೀಡಿದರು.
ಇಲ್ಲಿನ ಬುದ್ಧ ನಗರದ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಹಾಗೂ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಮಟ್ಟದ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಂತುಹುಳುಗಳಿಂದ ಮಕ್ಕಳಲ್ಲಿ ಸ್ಕೀನ್ ಸಮಸ್ಯೆ ಮತ್ತು ಮುಖದಲ್ಲಿ ಬಿಳಿ ಮಚ್ಚೆಯಂತಹ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳಿಗೆ ಜಂತುಹುಳು ಮಾತ್ರೆಗಳನ್ನು ನೀಡಬೇಕು ಎಂದು ಹೇಳಿದರು.
ಕೊರೊನಾ ಹಿನ್ನಲೆಯಲ್ಲಿ ಮಕ್ಕಳು ಮನೆಯಿಂದ ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಿಂದಾಗೆ ಕೈಗಳನ್ನು ಸೋಪುನಿಂದ ಚೆನ್ನಾಗಿ ಕೈತೊಳೆದುಕೊಳ್ಳಬೇಕು. ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಸೆಪ್ಟೆಂಬರ್ 07 ರಿಂದ 21ರ ವರೆಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಜಂತು ಹುಳು ಮಾತ್ರೆಗಳನ್ನು ತಲುಪಿಸಲಿದ್ದು, ಪೋಷಕರು ಆಶಾ ಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಕಾರ ನೀಡುವುದರ ಮೂಲಕ ಜಿಲ್ಲೆಯಲ್ಲಿ ಜಂತು ಹುಳು ನಿವಾರಣೆ ಮಾಡೋಣ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿ ಸೆಪ್ಟೆಂಬರ್ 7 ರಿಂದ 21ರ ವರೆಗೆ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲಾ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗಳಿಗೆ ಭೇಟಿ ನೀಡಿ 1 ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಅಲ್‍ಬೆಂಡಜೋಲ್ ಮಾತ್ರೆ ನೀಡಲಾಗುತ್ತಿದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಇಲಾಖೆಯ ಸಿಬ್ಬಂದಿ ವರ್ಗದವರು ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳಿಗೆ ಅಲ್‍ಬೆಂಡಜೋಲ್ ಮಾತ್ರೆ ನೀಡುವರು ಎಂದು ಹೇಳಿದರು.
1 ವರ್ಷದಿಂದ 19 ವರ್ಷದೊಳಗಿನ ಜಿಲ್ಲೆಯ 427866 ಮಕ್ಕಳಿಗೆ ಅಲ್‍ಬೆಂಡಜೋಲ್ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅಲ್‍ಬೆಂಡಜೋಲ್ ಅರ್ಧ ಮಾತ್ರೆಯನ್ನು ಮುರಿದು ಎರಡು ಚಮಚಗಳ ನಡುವೆ ಪುಡಿ ಮಾಡಬೇಕು. ಮಾತ್ರೆಯನ್ನು ನೀಡಲು ಸಹಾಯವಾಗುವುದಕ್ಕೆ ಒಂದೆರೆಡು ಹನಿ ಸುರಕ್ಷಿತ ನೀರನ್ನು ಸೇರಿಸಬೇಕು. 200ಎಂ.ಜಿ ಮಾತ್ರೆ ನೀಡಬೇಕು. 2 ರಿಂದ 3 ವರ್ಷದೊಳಗಿನ ಮಕ್ಕಳಿಗೆ ಒಂದು ಮಾತ್ರೆಯನ್ನು ಪುಡಿಮಾಡಿ ಒಂದು ಚಮಚದಲ್ಲಿ ಶುದ್ಧವಾದ ನೀರಿನೊಂದಿಗೆ ಬೇರಿಸಿ ಕೊಡುವುದುದು. 400 ಎಂ.ಜಿ. ಮಾತ್ರೆ ನೀಡಬೇಕು. 2 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್‍ಬೆಂಡಜೋಲ್ 400 ಎಂ.ಜಿ. ಮಾತ್ರೆ ನೀಡಬೇಕು. ಈ ಮಾತ್ರೆಗಳನ್ನು ಅಗಿದು, ಜಿಗಿದು ತಿನ್ನಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶ್ರೀದೇವಿ ಚಕ್ರವರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಜಯಮ್ಮ, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಉಪ ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಚಿದಾನಂದಪ್ಪ, ಆನಂದಪ್ಪ, ತಾಲ್ಲೂಕು ಆರೋಗ್ಯಶಿಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.