ಅಕ್ರಮ ಗಾಂಜಾ ಸಾಗಿಸುತ್ತಿದ್ದ 5 ಜನರ ಬಂಧನ: 10.26 ಲಕ್ಷ ಮೌಲ್ಯದ ಗಾಂಜಾ, ಕಾರು ವಶಕ್ಕೆ
1 min readದಾವಣಗೆರೆ: ಹೊರ ರಾಜ್ಯದಿಂದ ಗಾಂಜಾ ಪೂರೈಸುತ್ತಿದ್ದ ಐವರು ಆರೋಪಿತರನ್ನು ದಸ್ತಗಿರಿ ಮಾಡಿರುವ ಚನ್ನಗಿರಿ ಪೊಲೀಸರು ಆರೋಪಿಗಳಿಂದ ಒಟ್ಟು 10.26 ಲಕ್ಷ ಮೌಲ್ಯದ 5 ಕೆಜಿ 250 ಗ್ರಾಂ ತೂಕದ ಗಾಂಜಾ ಮತ್ತು ಇದರ ಸಾಗಾಣಿಕೆಗೆ ಉಪಯೋಗಿಸುತ್ತಿದ್ದ ಒಂದು ಇನ್ನೋವಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಸ್ಪಿ ಹನುಮಂತರಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಫೀರ್ ಖಾನ್ (೩೨), ಜಬೀವುಲ್ಲಾ (೨೭), ಪತ್ಹಾ ಖಾನ್ (೩೦), ತೌಸೀಫ್ ಖಾನ್ (೨೯), ಚಂದ್ರಶೇಖರ್ (೩೨) ಬಂಧಿತ ಆರೋಪಿಗಳಾಗಿದ್ದು, ಇದರಲ್ಲಿ ಓರ್ವ ಆರೋಪಿಗೆ ಆಂಧ್ರದ ಲಿಂಕ್ ಇತ್ತು. ಈತ ವಿಜಯವಾಡದ ರಾಜಮಂಡ್ರಿ ತಾಲ್ಲೂಕಿನಲ್ಲಿ ವಿವಾಹವಾಗಿದ್ದ. ಅಲ್ಲಿಂದಲೇ ಗಾಂಜಾವನ್ನು ಇಲ್ಲಿಗೆ ಪೂರೈಸುತ್ತಿದ್ದ ಎಂದು ಮಾಹಿತಿ ನೀಡಿದರು.
ಇಂದು ಹೊಳಲ್ಕೆರೆ ಕಡೆಯಿಂದ ಚನ್ನಗಿರಿ ನಗರದ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡಿಕೊಂಡು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಚನ್ನಗಿರಿ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ ಜಿ. ಮುನ್ನೋಳಿ ಅವರ ಮುಂದಾಳತ್ವದಲ್ಲಿ ಗರಗ ಕ್ರಾಸ್ ಬಳಿ ದಾಳಿ ಮಾಡಿ ಈ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿರುವ ಚನ್ನಗಿರಿ ವೃತ್ತ ನಿರೀಕ್ಷಕ ಆರ್.ಆರ್. ಪಾಟೀಲ್ ಪಿಎಸ್‌ಐ ಜಿ. ಜಗದೀಶ್ ಹಾಗೂ ಸಿಬ್ಬಂದಿಗಳಾದ ಎಎಸ್‌ಐ ವೀರಣ್ಣ, ನಾಗರಾಜ್, ಎಸ್.ಆರ್ ರುದ್ರೇಶ್, ಎಂ. ರುದ್ರೇಶ್, ಧರ್ಮಪ್ಪ, ಮಂಜುನಾಥ್ ಪ್ರಸಾದ್, ರವೀಂದ್ರ, ರಂಗಸ್ವಾಮಿ, ಜಗದೀಶ್, ಪ್ರಭು, ರೇವಣಸಿದ್ದಪ್ಪ ಇವರ ಕಾರ್ಯವೈಖರಿಗೆ ಹನುಮಂತರಾಯ ಪ್ರಶಂಸೆ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಎಎಸ್‌ಐ ಎಂ. ರಾಜೀವ್, ಚನ್ನಗಿರಿ ಉಪಾಧೀಕ್ಷಕ ಪ್ರಶಾಂತ ಜಿ. ಮುನ್ನೋಳಿ ಉಪಸ್ಥಿತರಿದ್ದರು.