April 23, 2024

Chitradurga hoysala

Kannada news portal

ಒಂದೇ ದಿನ 22 ಕುರಿಗಳು ಮೃತಪಟ್ಟವು ಏಕೆ ಗೊತ್ತೆ.

1 min read

ತುಮಕೂರು; ರಾಸಾಯನಿಕ ಮಿಶ್ರಿತ ನೀರು ಸೇವಿಸಿ 22ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ತುಮಕೂರಿಗೆ ಹತ್ತಿರವಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಗ್ರಾಮದ ಶಿವಣ್ಣ, ಸಿದ್ದಗಂಗಯ್ಯ, ಗಂಗಮ್ಮ ಅವರು ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಮಾರ್ಗವಾಗಿ ತಮ್ಮ ಕುರಿಗಳನ್ನು ಹೊಡೆದುಕೊಂಡು ಬರುತ್ತಿದ್ದರು. ಈ ವೇಳೆ ಗುಂಡಿ ಯೊಂದರಲ್ಲಿ ನಿಂತಿದ್ದ ವಿಷ ಮಿಶ್ರಿತ ನೀರು ಸೇವಿಸಿ ಸ್ಥಳದಲ್ಲೇ 22ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.

ಘಟನೆ ಕುರಿತು ಭಾರತೀಯ ಕೃಷಿಕ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕೈಗಾರಿಕೆಗಳಲ್ಲಿ ತ್ಯಾಜ್ಯವನ್ನು ನೇರವಾಗಿ ಪರಿಸರಕ್ಕೆ ಬಿಡುತ್ತಿದ್ದಾರೆ ಮತ್ತು ನೀರಿಗೆ ಬೆರೆಸಿ ಕೆರೆಕಟ್ಟೆಗಳಿಗೆ ಹರಿಸುತ್ತಾರೆ. ಇದರ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ತುಮಕೂರು) ಅವರಿಗೆ ಬಹಳಷ್ಟು ಬಾರಿ ಮನವಿ ಮಾಡಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಕುರಿಗಳ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ’ ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೋರಾ ಠಾಣೆ ಪೊಲೀಸರು ಹಾಗೂ ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೈಗಾರಿಕಾ ಪ್ರದೇಶಗಳಿಂದ ಬಿಡುವ ವಿಷಯುಕ್ತ ತ್ಯಾಜ್ಯವು ನೀರಿಗೆ ಸೇರಿದ್ದು, ಅದನ್ನು ಕುರಿಗಳು ಸೇವಿಸಿದ್ದರಿಂದ ಘಟನೆ ಸಂಭವಿಸಿದೆ ಎಂದು ಪಶು ವೈದ್ಯರಾದ ಡಾ.ಲೋಕೇಶ್ ಹಾಗೂ ಪೊಲೀಸರು ಶಂಕಿಸಿದ್ದಾರೆ

About The Author

Leave a Reply

Your email address will not be published. Required fields are marked *