ಇಂಜಿನಿಯರ್ ದಿನವನ್ನು ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ ಅಂತ ಏಕೆ ಗೊತ್ತೆ? ಅವರ ಜೀವನ ಮತ್ತು ಸಾಧನೆಗಳನ್ನು ನೀವು ಓದಿ.
1 min readವಿಶೇಷ ಲೇಖನ: news19kannada: 15ರಂದು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಇವರ ಜನ್ಮ ದಿನವನ್ನು ಇಂಜಿನಿಯರ್ ದಿನವಾಗಿ ಆಚರಿಸಲಾಗುತ್ತದೆ. ಜನ್ಮದಿನದ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಗಮನಹರಿಸೋಣ ಬನ್ನಿ.
ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಭರತಖಂಡ ಕರ್ನಾಟಕಕ್ಕೆ ನೀಡಿದ ದೊಡ್ಡ ಕೊಡುಗೆ. ಸೆಪ್ಟೆಂಬರ್ 15, 1860ರಂದು ಜನಿಸಿದ ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ ಪೂನಾದಲ್ಲಿ 1884 ರಲ್ಲಿ ಇಂಜನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಸರ್ಕಾರದಲ್ಲಿ ಸೇವೆಯನ್ನು ಆರಂಭಿಸಿದರು. 1907 ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮುಂದಿನ ಅವಧಿಯಲ್ಲಿ ಇಡೀ ಭಾರತ ದೇಶದಲ್ಲಿ ತಮ್ಮ ಪ್ರತಿಭೆಯಿಂದ ಹಾಗೂ ಕಾರ್ಯಗಳಿಂದ ಪ್ರಸಿದ್ಧರಾದವರು.
ಮುಂಬೈ ರಾಜ್ಯದಲ್ಲಿ ಅವರು ಸೇವೆಯಲ್ಲಿದ್ದಾಗ, ಪುಣೆ ನಗರದಲ್ಲಿ ಆಗಿನ ಮಹಾನ್ ನಾಯಕರಾಗಿದ್ದ ಲೋಕಮಾನ್ಯ ತಿಲಕ್, ರಾನಡೆಯವರು ಮತ್ತು ಗೋಪಾಲಕೃಷ್ಣ ಗೋಖಲೆಯವರಿಂದ ದೇಶಪ್ರೇಮವನ್ನು ಬೆಳೆಸಿಕೊಂಡವರು. ಈ ನಾಯಕರುಗಳ ಸಂಪರ್ಕದಿಂದಾಗಿ ರಾಷ್ಟ್ರಕ್ಕಾಗಿ ಯಾವ ರೀತಿಯಿಂದ ಸೇವೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು. 1902 ರಲ್ಲಿ ವಿಶ್ವೇಶ್ವರಯ್ಯ ನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ “Present State of Education in Mysore” ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು.
ಮುಂಬೈ ರಾಜ್ಯದಲ್ಲಿ ಇವರು ನಿವೃತ್ತಿ ಪಡೆದುಕೊಂಡ ನಂತರ ಹೈದ್ರಾಬಾದ್ ಸಂಸ್ಥಾನದ ನಿಜಾಮರ ಕರೆ ಮೇರೆಗೆ 1908ರಲ್ಲಿ ಹೈದ್ರಾಬಾದ್ ನಗರದ ನೀರು ಸರಬರಾಜು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಒಂದು ಯೋಜನೆಯನ್ನು ವಿನ್ಯಾಸಗೊಳಿಸಿದರು. ವಿಶ್ವೇಶ್ವರಯ್ಯನವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೈದ್ರಾಬಾದ್ ಸಂಸ್ಥಾನದ ನಿಜಾಮರು ವಿಶ್ವೇಶ್ವರಯ್ಯನವರು ರೂಪಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಹೈದ್ರಾಬಾದ್ ನಗರವನ್ನು ನವೀಕರಿಸಿ ಅಧುನೀಕರಿಸುವಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಹಿರಿದಾಗಿತ್ತು.ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು ವಿಶ್ವೇಶ್ವರಯ್ಯನವರ ಖ್ಯಾತಿಯನ್ನು ಮನಗಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಳ್ಳಲು ಇಚ್ಛಿಸಿದಾಗ ವಿಶ್ವೇಶ್ವರಯ್ಯನವರು, ಮೈಸೂರು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ನನ್ನ ಸೇವೆ ಮೀಸಲಿರುವುದಾಗಿ ತಿಳಿಸಿ, ಇದಕ್ಕೆ ಒಪ್ಪುವುದಾದರೆ ನನ್ನ ಸೇವೆ ಮೈಸೂರು ರಾಜ್ಯಕ್ಕೆ ಲಭ್ಯವೆಂದು ತಿಳಿಸಿದರು. ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹ ಸಂಸ್ಥಾನದ ಅಭಿವೃದ್ಧಿ ಕುರಿತು ದೂರದೃಷ್ಟಿ ಹೊಂದಿದ್ದರಿಂದ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿದರು
.ವಿಶ್ವೇಶ್ವರಯ್ಯನವರು 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರೂ, ಇವರು ತಮ್ಮ ವ್ಯಾಪ್ತಿಯನ್ನು ಮುಖ್ಯ ಇಂಜಿನಿಯರ್ ಹುದ್ದೆಗೆ ಸೀಮಿತಗೊಳಿಸದೇ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ರೂಪಿಸುವಲ್ಲಿ ಕಾರಣೀಭೂತರಾದರು. ಇವರು ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿ 1911 ರಲ್ಲಿ ಸಂಪದಭಿವೃದ್ಧಿ ಸಮ್ಮೇಳನ (Economic Conference) ವನ್ನು ಪ್ರಾರಂಭಿಸಿ ಸಂಸ್ಥಾನದ ಪ್ರಮುಖರೆಲ್ಲರನ್ನು ಸೇರಿಸಿ ರಾಜ್ಯದ ಸಂಪನ್ಮೂಲಗಳು, ಕೈಗಾರಿಕೆಗಳು, ಇವುಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದೆಂಬ ಎಂಬ ಬಗ್ಗೆ ಅಧ್ಯಯನ ಕೈಕೊಂಡರು.
ಮುಂದೆ ದಿವಾನರಾದ ನಂತರ ಸಂಪದಭಿವೃದ್ಧಿ ಸಮ್ಮೇಳನದಲ್ಲಿ ಚರ್ಚಿಸಿದ ವಿಷಯಗಳನ್ನು ಆಧರಿಸಿ ಆಯವ್ಯಯ ಮಂಡಿಸುತ್ತಿದ್ದರು. ಇವರು ಮಂಡಿಸಿದ ಆಯವ್ಯಯವನ್ನು ಸಂಪತ್ತಿನ ಆಯವ್ಯಯವೆಂದು ಮಹಾರಾಜರು ವರ್ಣಿಸಿದ್ದರು. 1911 ರಲ್ಲಿ ಮೈಸೂರು ಸಂಸ್ಥಾನದಲ್ಲಿ ವಿಶ್ವೇಶ್ವರಯ್ಯನವರು ಸಂಪದಭಿವೃದ್ಧಿ ಸಮ್ಮೇಳನ ಪ್ರಾರಂಭಿಸಿ ಅದನ್ನು ಮುಂದುವರಿಸಿಕೊಂಡು ಹೋಗಿದ್ದರಿಂದ, ಮೈಸೂರು ಸಂಸ್ಥಾನವು ವ್ಯವಸ್ಥಿತ ರೀತಿಯಲ್ಲಿ ಆರ್ಥಿಕ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು.
ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆದಾಗ ನಾಡಿನ ರಸ್ತೆಗಳು, ರೈಲ್ವೆ ಮಾರ್ಗ ವಿಸ್ತರಣೆ, ನೀರಾವರಿ, ಕೆರೆಕಟ್ಟೆಗಳನ್ನು ಯಾವ ರೀತಿಯಲ್ಲಿ ನಿರ್ಮಿಸಿ ನಿರ್ವಹಿಸಬಹುದು ಎನ್ನುವ ಬಗ್ಗೆ ಯೋಜನೆಯನ್ನು ರೂಪಿಸಿ ಅನುಷ್ಠಾನ ಮಾಡುವ ಬಗ್ಗೆ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದರು. ಮೈಸೂರು ದಿವಾನರಾಗಿದ್ದ ವರ್ಷಗಳಲ್ಲಿ ವಿಶ್ವೇಶ್ವರಯ್ಯನವರು ಮೈಸೂರು ಮಹಾರಾಜರು ಮತ್ತು ಬ್ರಿಟಿಷ್ ಸರ್ಕಾರದೊಂದಿಗೆ ಅಧಿಕಾರ ಹಸ್ತಾಂತರ ಕುರಿತು ಇದ್ದ ಒಪ್ಪಂದವನ್ನು ತಮ್ಮ ರಾಜ ನೀತಿಜ್ಞ ನಡವಳಿಯಿಂದಾಗಿ ಗೌರವಯುತವಾಗಿ ಜಾರಿಗೊಳಿಸಲು ನೆರವಾದರು.