ಗ್ರಾಮ ಪಂಚಾಯತಿ ಚುನಾವಣೆ ನವಂಬರ್ ನಲ್ಲಿ ನಡೆಸುವ ಸಾಧ್ಯತೆ?
1 min readಬೆಂಗಳೂರು : ರಾಜ್ಯದ 5800 ಗ್ರಾಮ ಪಂಚಾಯತಿಗಳಿಗೆ ನವೆಂಬರ್‍ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗ್ರಾಮ ಪಂಚಾಯತಿಗಳ ಚುನಾವಣೆ ನಡೆಸುವ ಕುರಿತು ಹಾಗೂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಈಗಾಗಲೇ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗಳಿಗೆ ಸೂಕ್ತ ಆದೇಶ ನೀಡಿದೆ.
ಎಲ್ಲಾ ಗ್ರಾಮ ಪಂಚಾಯತಿ ಕ್ಷೇತ್ರಗಳ ಮೀಸಲಾತಿಯನ್ನೂ ಕೂಡ ಆ.27ರ ಗೆಜೆಟ್‍ನಲ್ಲಿ ಪ್ರಕಟವಾಗಿದೆ. ಅಂತಿಮ ಮತದಾರರ ಪಟ್ಟಿಯ ಅಧಿಸೂಚನೆ ಕೂಡ ಪ್ರಕಟವಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚುನಾವಣಾ ಆಯೋಗ ಈಗಾಗಲೇ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ನವೆಂಬರ್‍ನಲ್ಲಿ ಚುನಾವಣೆ ನಡೆಯುವ ಸಂಭವವಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ತಿಳಿಸಿದ್ದಾರೆ.
ಈಗಿನ ಗ್ರಾಪಂ ಸದಸ್ಯರ ಅವಧಿ ಮುಗಿದ ನಂತರ ಚುನವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ನೀಡಿತ್ತು.
ಆಯೋಗವು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ 45 ದಿನಗಳೊಳಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಲು ನಿರ್ದೇಶನ ನೀಡಿತ್ತು. ಆಯೋಗವೂ ಕಾಲ ಕಾಲಕ್ಕೆ ಡಿಸಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚುನಾವಣೆ ನಡೆಸಲು ಬೇಕಾಗಿರುವ ಸೌಕರ್ಯಗಳ ಕುರಿತಂತೆ ಚರ್ಚಿಸಿದೆ.
ಹಾಗಾಗಿ ಗ್ರಾಮ ಪಂಚಾಯತಿಗಳಿಗೆ ನವೆಂಬರ್‍ನಲ್ಲೇ ಚುನಾವಣೆ ನಡೆಯುವ ಸಂಭವವಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.