ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹುದ್ದೆ ಅರ್ಜಿ ಆಹ್ವಾನ.
1 min readಚಿತ್ರದುರ್ಗ,ಅಕ್ಟೋಬರ್03:
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು ಹೊಸದಾಗಿ 2020-21ನೇ ಸಾಲಿನಿಂದ ಪ್ರಾರಂಭಿಸಲಾಗಿದ್ದು, ಈ ಯೋಜನೆಯ ಅನುಷ್ಠಾನಕ್ಕಾಗಿ ಅರ್ಹ ವ್ಯಕ್ತಿಗಳಿಂದ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 08 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳು: ಯೋಜನೆಯಡಿಯಲ್ಲಿ ಸೂಕ್ತ ಫಲಾನುಭವಿಗಳನ್ನು ಗುರುತಿಸುವುದು, ವೈಯಕ್ತಿಕ ಘಟಕಗಳು ಹಾಗೂ ಸಮೂಹಗಳಿಗೆ ವಿವರವಾದ ಯೋಜನಾವರದಿ ಸಿದ್ದತೆ, ಫಲಾನುಭವಿಗಳು FASSAI, GST, Udyog, Aadhar ನೋಂದಣಿ ಪಡೆಯಲು ಸಹಾಯ ಮಾಡುವುದು, ಸಹಾಯಧನ ಪಡೆದ ಘಟಕಗಳಿಗೆ ಭೇಟಿ ನೀಡುವುದು.
ಚಿತ್ರದುರ್ಗ ಜಿಲ್ಲೆಗೆ ಇಬ್ಬರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು. ಇವರಿಗೆ ಯಾವುದೇ ವೇತನ ನೀಡಲಾಗುವುದಿಲ್ಲ. ಆದರೆ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಲಾಗುವ ಹಣ ಪಾವತಿಯನ್ನು ಅವರು ಬೆಂಬಲಿಸಿರುವಂತಹ ಫಲಾನುಭವಿಯನ್ನು ಆಧರಿಸಿ ಬ್ಯಾಂಕ್‍ನಿಂದ ಅವರಿಗೆ ಸಾಲ ಮಂಜೂರಾತಿ ಆದ ನಂತರ ಬ್ಯಾಂಕಿನಿಂದ ಮಂಜೂರಾದ ಪ್ರತಿ ಸಾಲವನ್ನು ಆಧರಿಸಿ ರೂ.20000.00ಗಳನ್ನು 2 ಕಂತುಗಳಲ್ಲಿ ಪಾವತಿಸಲಾಗುವುದು.
ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ: ಅಹಾರ ತಂತ್ರಜ್ಞಾನ, ಆಹಾರ ಇಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ, ಪದವಿ, ಪ್ರತಿಷ್ಠಿತ ರಾಷ್ಟ್ರ, ಅಂತರ ರಾಷ್ಟ್ರೀಯ ವಿಶ್ವವಿದ್ಯಾಲಯ, ಸಂಸ್ಥೆಗಳಿಂದ ಪಡೆದಿರಬೇಕು. ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ತಂತ್ರಜ್ಞಾನ ಉನ್ನತೀಕರಣ, ಹೊಸ ಉತ್ಪನ್ನ, ಗುಣಮಟ್ಟ ಖಾತ್ರಿ, ಆಹಾರ ಭದ್ರತಾ ನಿರ್ವಹಣೆಗಾಗಿ ಸಲಹಾ ಸೇವೆಗಳನ್ನು ಒದಗಿಸಿದ 3 ರಿಂದ 5 ವರ್ಷಗಳ ಅನುಭವವಿರಬೇಕು. ಒಂದು ವೇಳೆ ಆಹಾರ ತಂತ್ರಜ್ಞಾನ ವಿಷಯದಲ್ಲಿ ಅರ್ಹತೆ ಹೊಂದಿರುವ ವ್ಯಕ್ತಿಗಳು ಲಭ್ಯವಾಗದಿದ್ದರೆ, ಆಹಾರ ಸಂಸ್ಕರಣಾ ಕೈಗಾರಿಕೆ, ಬ್ಯಾಂಕಿಂಗ್, ಡಿಪಿಆರ್, ಸಿದ್ದಪಡಿಸುವಿಕೆಯಲ್ಲಿ ಹಾಗೂ ತರಬೇತಿಯಲ್ಲಿ ಅನುಭವವುಳ್ಳ ವ್ಯಕ್ತಿಗಳನ್ನು ಪರಿಗಣಿಸಲಾಗುವುದು.
ಅರ್ಜಿಗಳನ್ನು ಪರಿಶೀಲಿಸಿ ಶಾರ್ಟ್ ಲೀಸ್ಟ್ ಮಾಡಿ ಅಭ್ಯರ್ಥಿಗಳ ಸಂದರ್ಶನ ನಡೆಸಿ, ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಇವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಅತ್ಯವಶ್ಯಕವಾಗಿರುತ್ತದೆ. ಅರ್ಜಿ ನಮೂನೆಗಳು ಜಿಲ್ಲಾ ಮಟ್ಟದ ಕೃಷಿ ಇಲಾಖೆಯಲ್ಲಿ ಲಭ್ಯವಿರುತ್ತವೆ. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜಂಟಿ ಕೃಷಿ ನಿರ್ದೇಶಕರು, ಚಿತ್ರದುರ್ಗ ಇವರ ಕಚೇರಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
============