ಪೋಲಿಸರ ಭರ್ಜರಿ ಕಾರ್ಯಚರಣೆ ಮೆಕ್ಕೆಜೋಳದೊಂದಿಗೆ ಬೆಳೆದ 28 ಕೆ.ಜಿ. ಗಾಂಜಾ ವಶ
1 min readಚಿತ್ರದುರ್ಗ, ಅಕ್ಟೋಬರ್03:
ಹೊಳಲ್ಕೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ್ತೂರಪ್ಪ ಮತ್ತು ನರಸಿಂಹಪ್ಪ ಅವರಿಗೆ ಸೇರಿದ ಸರ್ವೇ ನಂ 390/1 ರ ತೆಂಗಿನ ತೋಟದ ಮಧ್ಯದ 01 ಎಕರೆ 20 ಗುಂಟೆ ಜಮೀನಿನಲ್ಲಿ ಚಿತ್ರದುರ್ಗ ಉಪವಿಭಾಗ ಮತ್ತು ಚಿತ್ರದುರ್ಗ ಜಿಲ್ಲೆಯ ಎಲ್ಲಾ ವಲಯಗಳ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಗಳೊಂದಿಗೆ ಅಬಕಾರಿ ದಾಳಿ ಮಾಡಿದಾಗ ಮೆಕ್ಕೆಜೋಳದೊಂದಿಗೆ ಬೆಳೆದ ಅಂದಾಜು 28 ಕೆ.ಜಿ. ಹಸಿ ಗಾಂಜಾ ಗಿಡಗಳು ಪತ್ತೆ ಮಾಡಿ ಸಿಬ್ಬಂದಿಗಳ ಸಹಯೋಗದೊಂದಿಗೆ ಎಲ್ಲಾ ಗಿಡಗಳನ್ನು ಅಬಕಾರಿ ಪೊಲೀಸರು ನಿಯಮಾನುಸಾರ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಇದರ ಅಂದಾಜು ಮೌಲ್ಯ ರೂ.2.50,000/- ಗಳಾಗಿರುತ್ತದೆ. ಹೊಳಲ್ಕೆರೆ ವಲಯ ಅಬಕಾರಿ ಉಪ ನಿರೀಕ್ಷಕ ಡಿ.ಬಿ.ಅವಿನಾಶ್ ಇವರಿಂದ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಸರ್ವೆ ನಂ 390/1 ಕಸ್ತೂರಪ್ಪ ಹಾಗೂ ನರಸಿಂಹಪ್ಪ ಎಂಬ ಸಹೋದರರಿಗೆ ಜಮೀನು ಸೇರಿದ್ದು ಎಂದು ತಿಳಿದು ಬಂದಿದೆ.ಮುಂದಿನ ಹಂತದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ದಾಳಿ ಸಮಯದಲ್ಲಿ ಸರ್ಕಾರಿ ಪಂಚರಾಗಿ ಸಹಕರಿಸಿದ ಗ್ರಾಮ ಲೆಕ್ಕಾಧಿಕಾರಿ ಹರೀಶ್, ಕಂದಾಯ ಅಧಿಕಾರಿ ಪ್ರಶಾಂತ್ ಕುಮಾರ್ ಭಾಗವಹಿಸಿದ್ದರು.
ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಲ್.ಎನ್.ಮೋಹನ್, ಚಿತ್ರದುರ್ಗ ಜಿಲ್ಲೆ ಅಬಕಾರಿ ಉಪ ಆಯುಕ್ತ ಆರ್.ನಾಗಶಯನ ಅವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಎಸ್.ಎಂ.ಶಿವಹರಳಯ್ಯ ಅವರ ನೇತೃತ್ವದಲ್ಲಿ ಹೊಳಲ್ಕೆರೆ ವಲಯ ಅಬಕಾರಿ ನಿರೀಕ್ಷಕರಾದ ಕೆ. ಲತಾ ಇವರಿಗೆ ಬಂದ ಖಚಿತ ಬಾತ್ಮಿ ಮೇರೆಗೆ ಅಬಕಾರಿ ಉಪ ನಿರೀಕ್ಷಕ ಡಿ.ಬಿ. ಅವಿನಾಶ್, ಅಬಕಾರಿ ರಕ್ಷಕರುಗಳಾದ ಆರ್.ದಾದಾಪೀರ್, ಪ್ರವೀಣ್ ಕುಮಾರ್, ಮಧುರಾಯ, ಬಸವರಾಜ್, ಈ.ಶಿವಮೂರ್ತಿ, ಎಸ್.ಬಸವರಾಜ್ ಇವರೆಲ್ಲರೊಂದಿಗೆ ಕಳೆದ 15 ದಿನಗಳಿಂದ ಹೊಳಲ್ಕೆರೆ ತಾಲ್ಲೂಕಿನ ಗುಡ್ಡ ಪ್ರದೇಶಗಳು, ಜಮೀನುಗಳು, ಕಾವಲು ಭೂಮಿಗಳಲ್ಲಿ ಗಾಂಜಾ ಬೆಳೆಯುವ ಬಗ್ಗೆ ಹುಡುಕಾಟ ನಡೆಸಲಾಗುತ್ತಿತ್ತು ಎಂದು ಚಿತ್ರದುರ್ಗ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಎಸ್.ಎಂ.ಶಿವಹರಳಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.