ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಕಮಲ ಕೈ ನಾಯಕರ ಆರೋಪ ಪ್ರತ್ಯಾರೋಪ.
1 min readಬೆಂಗಳೂರು: ಡಿ ಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಮೇಲೆ ಸಿಬಿಐ ತನ್ನ ಕೆಲಸ ಮಾಡುತ್ತಿದ್ದು, ಅದಕ್ಕೆ ಸಹಕಾರ ನೀಡುವ ಬದಲು ಸಿಬಿಐ ಅಧಿಕಾರಿಗಳ ವಾಹನಗಳ ಮೇಲೆ ಬೆಂಬಲಿಗರನ್ನು ಬಿಟ್ಟು ದಾಳಿ ಮಾಡಿದ್ದು ಸರಿಯಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಕುಟುಕಿದ್ದಾರೆ.
ಇದಕ್ಕೆ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ಕುಮ್ಮಕ್ಕು ನೀಡುತ್ತಿರುವುದು ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆಗೆ ಬೆಂಬಲ ಇದೆಯೆಂದು ಸಾಬೀತುಪಡಿಸಿದಂತೆ ಆಗುತ್ತದೆ.
ಡಿಕೆಶಿ ಅಕ್ರಮ ಹಣ ಗಳಿಕೆಯಲ್ಲಿ ಕಾಂಗ್ರೆಸ್ ನಾಯಕರಿಗೂ ಪಾಲು ಇದೆಯೆಂದು ತೋರಿಸಿದಂತೆ ಆಗಿದೆ. ಸಿಬಿಐ ಯಾವುದೇ ದಾಳಿ ಮಾಡುವ ಮೊದಲು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುತ್ತದೆ.
70 ವರ್ಷ ಆಳಿದ ಕಾಂಗ್ರೆಸ್ಸಿಗೆ ಅದು ಗೊತ್ತಿಲ್ಲ ಎಂದರೆ ಇಷ್ಟು ವರ್ಷ #CBI ಅನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಕಾಂಗ್ರೆಸ್ ಬಳಸುತ್ತಿತ್ತು ಎನ್ನುವುದನ್ನು ಅವರೇ ಒಪ್ಪಿಕೊಂಡಂತೆ ಆಗಿದೆ!! ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ವೈದ್ಯಕೀಯಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿರುಗೇಟು ನೀಡಿದ್ದು, ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಷ್ಟೇ ದೊಡ್ಡವರಾದರೂ ಕಾನೂನಿಗೆ ತಲೆ ಬಾಗಲೇ ಬೇಕು ಎಂದು ಗುಡುಗಿದ್ದಾರೆ.
ಅದೇ ರೀತಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ,ಡಿಕೆಶಿವಕುಮಾರ್ ಮೇಲೆ ಹಿಂದೆ ಸಹ ED ರೈಡ್ ಆಗಿದೆ. ಹವಾಲಾ ಹಣ ಸಿಕ್ಕಿರುವ ಬಗ್ಗೆ ಹಿಂದಿನ ದಾಳಿಯಲ್ಲಿ ಗೊತ್ತಾಗಿತ್ತು.
ಹೀಗಾಗಿ ತನಿಖೆ ಸಹ ಆಗ್ತಿದೆ. ಬೇಕಾಬಿಟ್ಟಿ ಆರೋಪ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಕಂಡು ಆಶ್ಚರ್ಯವಾಗಿದೆ. ಕಾಂಗ್ರೆಸ್ ಗೊಂದು ಕಾನೂನು ಬೇರೆ ಇದೆಯಾ? ಎಂದು ಛೇಡಿಸಿದ್ದಾರೆ.
ಅದಕ್ಕೆ ತಿರುಗೇಟು ಕೊಟ್ಟಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವ ಕೆ.ಜೆ. ಜಾರ್ಜ್, ದಾಳಿ ರಾಜಕೀಯ ದುಷ್ಟತನದ ಪರಮಾವಧಿ. ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಾಗದೆ, ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಗುಡುಗಿದ್ದಾರೆ.
ಹೈಕೋರ್ಟ್ ಅನುಮತಿ ಇಲ್ಲದೆ ದಾಳಿ ನಡೆಸಿರುವುದು ದುರುದ್ದೇಶಪೂರಿತವಲ್ಲದೆ ಇನ್ನೇನು? ಈ ಹೆದರಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಮತ್ತು ಅದರ ಸದಸ್ಯರು ಬಗ್ಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಹಾಗೆಯೇ, ಬಿ.ಎಸ್. ಯಡಿಯೂರಪ್ಪ @BSYBJP ಕುಟುಂಬದವರು ಆರ್ ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ. ಕೊರೊನ ಸಂಕಷ್ಟದಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ.
ಈ ಬಗ್ಗೆಯೂ ಸಿಬಿಐ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಇದು ರಾಜಕೀಯ ಪ್ರೇರಿತ ದಾಳಿ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಆರೋಪಿಸಿದ್ದಾರೆ.