ಸಿಸಿಬಿ ವಿಚಾರಣೆಗೆ ಹಾಜರಾದ ರಾಧಿಕಾ ಕುಮಾರಸ್ವಾಮಿ.
1 min readಬೆಂಗಳೂರು, ಜ.08 : ಯುವರಾಜ್ ಸ್ವಾಮಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆ ಶುಕ್ರವಾರ ನಟಿ ರಾಧಿಕಾ ಕುಮಾರಸ್ವಾಮಿ ಅವರು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.
ಇದಕ್ಕೂ ಮುನ್ನ ಮಾಧ್ಯಮದವರೊಡನೆ ಮಾತನಾಡಿದ ಅವರು, “ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆ ಸಿಸಿಬಿ ಕಚೇರಿಗೆ ತೆರಳುತ್ತಿದ್ದೇನೆ. ವಿಚಾರಣೆ ಪೂರ್ಣಗೊಂಡ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ” ಎಂದಿದ್ದಾರೆ.
ಯುವರಾಜ್ ಸ್ವಾಮಿ ಅವರನ್ನು ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿ ಯುವರಾಜ್ ಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ ಯುವರಾಜ್ ಸ್ವಾಮಿ ಖಾತೆಯಿಂದ ಹಣ ಸಂದಾಯ ಆಗಿರುವ ವಿಚಾರ ತಿಳಿದುಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರಾಧಿಕಾ ಅವರ ಸಹೋದರ ರವಿರಾಜ್ ಅವರನ್ನು ವಿಚಾರಣೆ ನಡೆಸಿತ್ತು.