ಯುವಕ ಯುವತಿಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ತರಬೇತಿ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
1 min read
ಚಿತ್ರದುರ್ಗ: ಜನವರಿ08:
ಜಿಲ್ಲಾಮಟ್ಟದಲ್ಲಿ ಈಗಾಗಲೇ ಸೃಜಿಸಲಾಗಿರುವ ಜಿಲ್ಲಾ ಕೌಶಲ್ಯ ಮಿಷನ್‍ಗೆ ಪೂರಕವಾಗಿ ಹಾಗೂ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ 3.0ನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ 3.0ನ್ನು ಜಿಲ್ಲಾಮಟ್ಟದಲ್ಲಿ ಕಾರ್ಯದಕ್ಷತೆ ಹಾಗೂ ಪರಿಣಾಮ ಅನುಷ್ಠಾನಗೊಳಿಸಲು ವಿವಿಧ ಉಪಸಮಿತಿಗಳನ್ನು ಸೃಜಿಸಿರುವ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆ ಹಾಗೂ ಕೌಶಲ್ಯ ಕರ್ನಾಟಕ ಯೋಜನೆಯ ಮಾರ್ಗಸೂಚಿಗಳನ್ವಯ ಅರ್ಹ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಕೌಶಲ್ಯತರಬೇತಿ ನೀಡಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ, ಯೋಜನೆಯ ಅನುಷ್ಠಾನದ ಗುಣಮಟ್ಟ, ತರಬೇತಿ, ಮೂಲ ಸೌಕರ್ಯ, ಅಭ್ಯರ್ಥಿಗಳಿಗೆ ಉದ್ಯೋಗ ನಿಯುಕ್ತಿ ಇತ್ಯಾದಿ ವಿಷಯಗಳ ಕುರಿತು ಮೇಲ್ವಿಚಾರಣೆ ಮಾಡಲು ಜಿಲ್ಲಾಮಟ್ಟದಲ್ಲಿ ಕೌಶಲ್ಯ ಮಿಷನ್ ರಚಿಸಲಾಗಿದ್ದು, ಜಿಲ್ಲಾ ಕೌಶಲ್ಯ ಮಿಷನ್‍ಗೆ ಪೂರಕವಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಉಪ-ಸಮಿತಿಗಳನ್ನು ರಚಿಸಲಾಗಿದ್ದು, ಉಪಸಮಿತಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಉದ್ಯೋಗಿಗಳ ಬೇಡಿಕೆಯಂತೆ ತರಬೇತಿ ನೀಡಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವಿ.ಸುರೇಶ ಮಾತನಾಡಿ, ಜಿಲ್ಲಾ ಕೌಶಲ್ಯ ಮಿಷನ್‍ಗೆ ಪೂರಕವಾಗಿ ಹಾಗೂ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ(ಪಿಎಂಕೆವಿವೈ) 3.0ನ್ನು ಜಿಲ್ಲಾ ಮಟ್ಟದಲ್ಲಿ ಕಾರ್ಯದಕ್ಷತೆ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ 8 ಉಪಸಮಿತಿಗಳನ್ನು ರಚನೆ ಮಾಡಿ, ತರಬೇತಾರ್ಥಿಗಳನ್ನು ಗುರುತಿಸುವಿಕೆ ಮತ್ತು ಸಮಾಲೋಚನೆ ಉಪಸಮಿತಿ, ತರಬೇತಿ ಗುಣಮಟ್ಟ, ಕೈಗಾರಿಕಾ ಸಂಪರ್ಕ, ಉಪಸಮಿತಿ, ಸ್ವಯಂ ಉದ್ಯೋಗ, ಗ್ರಾಮ ಪಂಚಾಯತ್ ಸಮನ್ವಯ, ಕೃಷಿ ಉಪಸಮಿತಿ, ಸಾಮಥ್ರ್ಯ ವೃದ್ಧಿ ಹಾಗೂ ಮೇಲ್ವಿಚಾರಣೆ ಉಪಸಮಿತಿಗಳಿಗೆ ಕಾರ್ಯಭಾರ ಹಾಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು. ಜಿಲ್ಲೆಯ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ
ದೊರಕಿಸಿಕೊಡುವ ನಿಟ್ಟಿನಲ್ಲಿ ಯೋಜನೆಯ ಅನುಷ್ಠಾನದ ಗುಣಮಟ್ಟ ತರಬೇತಿ, ಮೂಲಸೌಕರ್ಯ, ಅಭ್ಯರ್ಥಿಗಳಿಗೆ ಉದ್ಯೋಗ ನಿಯುಕ್ತಿ ಇತ್ಯಾದಿ ವಿಷಯಗಳ ಕುರಿತು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಉಪ ಸಮಿತಿಗಳು ನೀಡುವ ವರದಿಯ ಅನುಗುಣವಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಯೋಜನೆ ತಯಾರಿ ಮಾಡಿ ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಇದರಿಂದ ಜಿಲ್ಲೆಗೆ ಬೇಕಾದ ಕೌಶಲ್ಯಗಳ ತರಬೇತಿ ನೀಡಲು ಸರ್ಕಾರ ವ್ಯವಸ್ಥೆ ಮಾಡಲಿದೆ. ತರಬೇತಿ ಪಡೆದವರಿಗೆ ಇದರಿಂದ ಜಿಲ್ಲೆಯಲ್ಲಿಯೇ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಸತೀಶ್ ರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.