February 26, 2024

Chitradurga hoysala

Kannada news portal

ಆಸೆ-ಆಮಿಷಕ್ಕೆ ಒಳಗಾಗದೇ ಮತದಾನದ ಹಕ್ಕು ಚಲಾಯಿಸಿ:ನ್ಯಾಯಾಧೀಶರಾದ ಎಂ.ಮನಗೂಳಿ ಪ್ರೇಮಾವತಿ

1 min read

ರಾಷ್ಟ್ರೀಯ ಮತದಾರರ ದಿನಾಚರಣೆ
*****
ಚಿತ್ರದುರ್ಗ,ಜನವರಿ25:
ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಆಗಿದೆ. ಮತದಾನದ ಹಕ್ಕನ್ನು ಸಂವಿಧಾನ ನೀಡಿದ್ದು, ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೇ ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಮನಗೂಳಿ ಪ್ರೇಮಾವತಿ ಯುವ ಮತದಾರರಿಗೆ ಕರೆ ನೀಡಿದರು.
ನಗರದ ತರಾಸು ರಂಗಮಂದಿರದಲ್ಲಿ  ಸೋಮವಾರ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 2011ರ ಜನವರಿ 25ರಿಂದ ರಾಷ್ಟ್ರೀಯ ಮತದಾರರ ದಿನಾಚಣೆಯನ್ನು ಆಚರಣೆ ಮಾಡಲಾಗುತ್ತಿದೆ. ಶೇ.100ರಷ್ಟು ಮತದಾನವಾಗಬೇಕು ಎಂಬುದು ಮತದಾರರ ದಿನಾಚರಣೆಯ ಉದ್ದೇಶವಾಗಿದೆ ಎಂದರು.  
 18 ವರ್ಷ ತುಂಬಿದ ಯುವಕ ಮತ್ತು ಯುವತಿಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು, ಚುನಾವಣೆ ಸಂದರ್ಭದಲ್ಲಿ ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೇ ಮತಚಲಾಚಣೆ ಮಾಡುವುದರ ಮೂಲಕ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
 ಯಾವುದೇ ಜಾತಿ, ಧರ್ಮ, ಜನಾಂಗವನ್ನು ಗಣನೆಗೆ ತೆಗೆದುಕೊಳ್ಳದೇ, ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜನರ ಹಿತ ಕಾಯುವರಿಗೆ ಮತ ಹಾಕಿದಾಗ ಮಾತ್ರ ಉತ್ತಮ ದೇಶ ನಿರ್ಮಾಣವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿ ದೇವಿ ಮಾತನಾಡಿ, 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಚುನಾವಣೆಯಲ್ಲಿ ನಿಮ್ಮ ಹಕ್ಕನ್ನು ಚಲಾಯಿಸಿ ಎಂದರು.
 ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಭಿತ್ತಿ ಪತ್ರ ಹಾಗೂ ಕೊಲಾಜ್ ಮೇಕಿಂಗ್ ಸ್ಪರ್ಧೆಗಳನ್ನು ಆಯೋಜಿಸಿ ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಮಾತನಾಡಿ, ಮತದಾನದ ಹಕ್ಕು ಅಮೂಲ್ಯವಾದದ್ದು, ಯಾವುದೇ ಕಾರಣಕ್ಕೂ ಮತದಾನದ ಹಕ್ಕನ್ನು ಮಾರಿಕೊಳ್ಳಬಾರದು. ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಮತದಾರರ ದಿನ ಆಚರಣೆ ಮಾಡಲಾಗುತ್ತಿದೆ ಎಂದರು.
 ನಮ್ಮ ಮತದಾರರನ್ನು ಅಧಿಕಾರಯುಕ್ತ, ಜಾಗರೂಕ, ಸುರಕ್ಷಿತ ಮತ್ತು ಮಾಹಿತಿಯುಕ್ತರನ್ನಾಗಿ ಮಾಡುವುದು ಇದು ಪ್ರಸಕ್ತ ಸಾಲಿನ ರಾಷ್ಟ್ರೀಯ ಮತದಾರರ ದಿನದ ಘೋಷ ವಾಕ್ಯವಾಗಿದೆ. ಫೆಬ್ರುವರಿ 1ರಿಂದ ಇ-ಎಪಿಕ್ (ಇ-ಇPIಅ) ಕಾರ್ಡ್‍ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇನ್ಮುಂದೆ ಮೊಬೈಲ್‍ನಲ್ಲಿಯೇ ಶೇಖರಿಸಿಕೊಳ್ಳಬಹುದು ಎಂದರು.
 ಚಿತ್ರದುರ್ಗ ಜಿಲ್ಲೆಯಲ್ಲಿ  ಒಟ್ಟು 13,71,454 ಮತದಾರರಿದ್ದಾರೆ. ಇದರಲ್ಲಿ 6,88,585 ಪುರುಷ, 6,82,886 ಮಹಿಳೆಯರು, 83 ಇತರೆ ಮತದಾರರು ಹಾಗೂ 10,942 ಮಂದಿ  ಯುವ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
 ಇದೇ ಸಂದರ್ಭದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಮಾದರಿಯಾಗಿ ಕಾರ್ಯ ನಿರ್ವಹಿಸಿದ ಬಿಎಲ್‍ಒಗಳಿಗೆ ಜಿಲ್ಲಾಡಳಿತ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
  ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ಉಪವಿಭಾಗಾಧಿಕಾರಿ ಡಾ. ನಾಗರಾಜ್, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ನಗರಸಭೆ ಪೌರಾಯುಕ್ತ ಜೆ.ಟಿ.ಹನುಂತರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *