ಹೆತ್ತವರಿಂದಲೇ ತನ್ನ ಇಬ್ಬರು ಪುತ್ರಿಯರನ ಬಲಿ ಏಕೆ ಗೊತ್ತೆ:
1 min readಚಿತ್ತೂರು: ಜ.25: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲೆ ಎಂಬಲ್ಲಿನ ಶಿವನಗರ್ ಪ್ರದೇಶದ ನಿವಾಸಿಗಳಾಗಿರುವ ದಂಪತಿ ಮೂಢನಂಬಿಕೆಗೆ ಬಲಿ ಬಿದ್ದು ರವಿವಾರ ತಡ ರಾತ್ರಿ ತಮ್ಮ ಇಬ್ಬರು ಯುವ ಪುತ್ರಿಯರನ್ನು ಹೊಡೆದು ಸಾಯಿಸಿದ್ದಾರೆ.
ಆರೋಪಿ ದಂಪತಿಯನ್ನು ಪದ್ಮಜಾ ಹಾಗೂ ಪುರುಷೋತ್ತಮ್ ನಾಯ್ಡು ಎಂದು ಗುರುತಿಸಲಾಗಿದೆ. ಪದ್ಮಜಾ ಖಾಸಗಿ ಶಾಲೆಯೊಂದರ ಸಂಚಾಲಕಿಯಾಗಿದ್ದರೆ, ನಾಯ್ಡು ನಗರದ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲನಾಗಿದ್ದಾನೆ.
ಹೆತ್ತವರ ಕೈಯ್ಯಲ್ಲಿಯೇ ದುರಂತ ಅಂತ್ಯ ಕಂಡ ಪುತ್ರಿಯರನ್ನು ಅಲೇಖ್ಯ (27) ಹಾಗೂ ಸಾಯಿ ದಿವ್ಯಾ (22) ಎಂದು ಗುರುತಿಸಲಾಗಿದೆ. ಅವರನ್ನು ಡಂಬೆಲ್ ಬಳಸಿ ಸಾಯಿಸಲಾಗಿದೆ ಎಂದು ಶಂಕಿಸಲಾಗಿದೆ. ಅಲೇಖ್ಯಾ ಭೋಪಾಲದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದರೆ ಸಾಯಿ ದಿವ್ಯಾ ಬಿಬಿಎ ಮುಗಿಸಿ ಮುಂಬೈಯ ಎ.ಆರ್ ರೆಹಮಾನ್ ಮ್ಯೂಸಿಕ್ ಸ್ಕೂಲ್‍ನಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ನಂತರ ಇಬ್ಬರು ಯುವತಿಯರೂ ಮನೆಯಲ್ಲಿಯೇ ಇದ್ದರು.
ಈ ಕುಟುಂಬ ಸಾಂಕ್ರಾಮಿಕ ಸಂದರ್ಭ ವಿಚಿತ್ರವಾಗಿ ವರ್ತಿಸುತ್ತಿತ್ತು ಹಾಗೂ ಸದಸ್ಯರು ಹೆಚ್ಚಾಗಿ ಮನೆಯೊಳಗಡೆಯೇ ಇದ್ದರು ಎಂದು ಪೊಲೀಸರು ಹೇಳಿದ್ದಾರೆ. ಅವರ ಮನೆಯಿಂದ ವಿಚಿತ್ರ ಸದ್ದು ಕೇಳುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಆರಂಭದಲ್ಲಿ ಪೊಲೀಸರಿಗೆ ಮನೆಯೊಳಗೆ ಪ್ರವೇಶಿಸಲು ದಂಪತಿ ಅನುಮತಿಸಿರಲಿಲ್ಲ. ಆದರೆ ನಂತರ ಮನೆ ಪ್ರವೇಶಿಸಿದ ಪೊಲೀಸರಿಗೆ ಒಬ್ಬಳು ಯುವತಿ ದೇವರ ಕೋಣೆಯಲ್ಲಿ ಶವವಾಗಿ ಬಿದಿದ್ದು ಕಂಡರೆ ಇನ್ನೊಬ್ಬಳ ಮೃತದೇಹ ಇನ್ನೊಂದು ಕೊಠಡಿಯಲ್ಲಿ ಕಂಡು ಬಂದಿತ್ತು. ಆಕೆಯ ದೇಹವನ್ನು ಕೆಂಪು ಬಟ್ಟೆಯಿಂದ ಮುಚ್ಚಲಾಗಿತ್ತಲ್ಲದೆ ಹತ್ತಿರದಲ್ಲಿ ಪೂಜಾ ಸಾಮಗ್ರಿ ಇರಿಸಲಾಗಿತ್ತು.
ತಮ್ಮ ಪುತ್ರಿಯರು ಮತ್ತೆ ಜೀವಂತವಾಗುತ್ತಾರೆ ಎಂದು ಈ ದಂಪತಿ ನಂಬಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಕಾಳಿಯುಗ ಇಂದು ರಾತ್ರಿ ಕೊನೆಗೊಳ್ಳುವುದರಿಂದ ಪುತ್ರಿಯರನ್ನು ಬಲಿ ನೀಡುವಂತೆ ದೈವೀ ಸಂದೇಶ ಬಂದಿತ್ತು. ನಾಳೆ ಸತ್ಯ ಯುಗ ಆರಂಭಗೊಳ್ಳಲಿರುವುದರಿಂದ ಅವರು ಬದುಕಿ ಬರುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಯನ್ನು ಬಂಧಿಸಲಾಗಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.