ಗಣರಾಜ್ಯದ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ ಬಲಿಷ್ಠವಾಗಬೇಕು:ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
1 min readಚಿತ್ರದುರ್ಗ: ಐಕ್ಯತೆ ಔಪಚಾರಿಕವಾಗದೆ, ಔದಾರ್ಯದಿಂದ ಕೂಡಿರುವುದರಿಂದ ಭಾರತ ಸದೃಡ ಗಣರಾಜ್ಯವಾಗಿದೆ. ಸಂವಿಧಾನದ ಸಂಕಲ್ಪ ಸಾಕಾರಮಾಡಿಕೊಂಡ ಸತ್ಸಮಯ ದಿನವಿದು. ನಮ್ಮ ಹಕ್ಕು ಮತ್ತು ಅಧಿಕಾರ ಸದುಪಯೋಗ ಮಾಡಿಕೊಂಡರೆ ಮಾತ್ರ ಸಮಬಾಳು ಸಮಪಾಲಿನ ಸಶಕ್ತ ಭಾರತ ನಿರ್ಮಾಣವಾಗುತ್ತದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಎಸ್.ಜೆ.ಎಸ್ ಸಮೂಹ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು
ಭಗವಂತನ ಹಣೆಬರಹ ಓದಿದವರು ಯಾರು ಇಲ್ಲ, ಭಾರತದ ಹಣೆಬರಹ ಸಂವಿಧಾನದಲ್ಲಿದೆ. ಅರಿತರೆ ನಮಗೆ ನಾವೇ ಪ್ರಭುಗಳು ಮರೆತರೆ ನಾವೇ ಗುಲಾಮರು. ಶಿಕ್ಷಣದಿಂದ ಬದುಕು ಸುಧಾರಣೆಯಾಗುವಾಗೇ, ಗಣರಾಜ್ಯದ ಸುಧಾರಣೆ ಸಂವಿಧಾನದಲ್ಲಿದೆ. ಅನ್ನ, ಅರಿವು, ಆರೋಗ್ಯ, ಹಿಳೆ, ಇನ್ನಿತರೆ ವಿಚಾರಗಳು ರಾಷ್ಟ್ರೀಕರಣವಾಗದೆ ಸಮಬಾಳು ಸಮಪಾಲು ಸಾಧ್ಯವಾಗದು. ದೇಶದ ಜನರ ಸರ್ವತೋಮುಖ ಅಭಿವೃದ್ಧಿಗಾಗಿ, ಶಾಂತಿ ಸುವ್ಯವಸ್ಥೆಯನ್ನು ಮನಸ್ಸಿನಲ್ಲಿಟ್ಟುಕೊಂಡ ಸಮಗ್ರ ಏಳಿಗೆಗಾಗಿ ಸಂವಿಧಾನ ನೀಡಿದ್ದಾರೆ.
ಪ್ರಜಾಪ್ರಭುತ್ವದ ಕನಸು ಕಂಡು, ಈ ದೇಶಕ್ಕಾಗಿ ಬೃಹತ್ ಸಂವಿಧಾನ ರಚಿಸಿದ ಸಂವಿಧಾನದ ಅಂಬೇಡ್ಕರ್ ತಂಡ, ಮನೆ ಒಡೆಯನಿಗೆ ಇರುವ ಅಧಿಕಾರ ದೇಶದ ಪ್ರಜೆಗೆ ಕೊಟ್ಟಿದ್ದಾರೆ. ಇದರ ಮಹತ್ವ ಅರಿತು, ದಾರಿ ತಪ್ಪದೇ ಸರಿ ದಾರಿಯಲ್ಲಿ ಸಾಗುವಂತಾಗಬೇಕು.ನಮ್ಮ ದೇಶವನ್ನು “ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಬೇಕಾದರೆ ಸಂವಿಧಾನದ ಮೂಲ ಆಶಯಗಳು ಜಾರಿಯಲ್ಲಿಡಬೇಕು.
ಗಣರಾಜ್ಯದ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ ಬಲಿಷ್ಠವಾಗಬೇಕು. ಭ್ರಷ್ಟಾಚಾರ ಮುಕ್ತ ಗಣರಾಜ್ಯ ನಮ್ಮದಾಗಬೇಕು, ಮೊದಲು ಮತದಾರ ಭ್ರಷ್ಟಾಚಾರ ಮುಕ್ತನಾದರೆ, ಬಡತನ ಮುಕ್ತ, ಹಸಿವು ಮುಕ್ತ, ಸರ್ವಾಂಗೀಣ ಅಭಿವೃದ್ಧಿ, ಸಂಪದ್ಭರಿತ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾಜಿ ನಗರಸಭೆ ಸದಸ್ಯ ಈ ಮಂಜುನಾಥ, ಭೋವಿ ಗುರುಪೀಠದ ಕಾರ್ಯನಿರ್ವಾಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ಸಿದ್ಧರಾಮೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ಶಾರದ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ, ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉಮೇಶ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿಯಿದ್ದರು.