September 17, 2024

Chitradurga hoysala

Kannada news portal

ಕಣ್ಮನ ಸೆಳೆದ ಪಥ ಸಂಚಲನ,
ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಸಲಹೆ

1 min read

ಪಥ ಸಂಚಲನ
ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಸಲಹೆ
ಚಿತ್ರದುರ್ಗ, ಜನವರಿ30:
 ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುವ ಜೊತೆಗೆ ಅವರೊಂದಿಗೆ ಪ್ರೀತಿಯಿಂದ  ಮಾತನಾಡಬೇಕು. ತಮ್ಮ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರು (ತರಬೇತಿ) ಪದಮ್ ಕುಮಾರ್ ಗರ್ಗ್ ಸಲಹೆ ನೀಡಿದರು.  
  ಐಮಂಗಲ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಶನಿವಾರ 5ನೇ ತಂಡದ ಸಿಪಿಸಿ ಮತ್ತು 2ನೇ ತಂಡದ ಎಪಿಸಿ ಮತ್ತು ಕೆಎಸ್‍ಐಎಸ್‍ಎಫ್ ಪೊಲೀಸ್ ಕಾನ್ಸ್‍ಟೆಬಲ್‍ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಉತ್ತಮವಾದ ರೀತಿಯಲ್ಲಿ ತರಬೇತಿಯನ್ನು ನೀಡಲಾಗಿದೆ. ಉತ್ತಮ ಆರಕ್ಷಕರಾಗಲು ತರಬೇತಿ ಒಂದೇ ಸಾಕಾಗುವುದಿಲ್ಲ. ಇದರ ಜೊತೆಗೆ ಇನ್ನೂ ಎರಡು ಗುಣಗಳು ಬಹಳ ಮುಖ್ಯವಾಗಿವೆ. ಸಾರ್ವಜನಿಕರ ಸುಖ, ದುಃಖಗಳಿಗೆ ಸ್ಪಂದಿಸುವ ಸಂವೇದನೆ ಹಾಗೂ ಸಾಮಾನ್ಯ ಜ್ಞಾನ ಉಪಯೋಗಿಸಬೇಕು ಎಂದು ಹೇಳಿದರು.


  ಪ್ರಶಿಕ್ಷಣಾರ್ಥಿಗಳು ಪೊಲೀಸ್ ಸೇವೆಗೆ ಸೇರಿದ ನಂತರ ದೇಶದ ಶೇ.3ರಷ್ಟು ಇರುವ ವಿಶಿಷ್ಟ ವ್ಯಕ್ತಿಗಳಲ್ಲಿ ತಾವು ಸೇರಿಕೊಳ್ಳಲಿದ್ದು, ತಮಗೆ ಇಲಾಖೆ ವತಿಯಿಂದ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಾಗಾಗಿ ತಾವು ಕೂಡ ಇಲಾಖೆಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು.
  ನಿರ್ಗಮನ ಪಥ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ತೆಗೆದುಕೊಂಡಿರುವ ಪ್ರತಿಜ್ಞೆ ಸ್ವೀಕಾರ ಕೇವಲ ಶಬ್ದವಲ್ಲ. ಪ್ರತಿಜ್ಞಾ ಸ್ವೀಕಾರದ ಪ್ರತಿ ಪದವನ್ನು ಯೋಜಿಸಿ, ಅರ್ಥ ಮಾಡಿಕೊಂಡು ತಮ್ಮ ವೃತ್ತಿ ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದರು.
  ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಿ.ಪಾಪಣ್ಣ ಮಾತನಾಡಿ, ಪೊಲೀಸ್ ತರಬೇತಿ ಶಾಲೆ ಖಾಯಂ ತರಬೇತಿ ಶಾಲೆ ಕಾರ್ಯಾರಂಭಗೊಂಡ ನಂತರದಿಂದ ಒಟ್ಟು 4 ತಂಡಗಳಲ್ಲಿ 1317 ನಾಗರೀಕ ಪೊಲೀಸ್ ಕಾನ್ಸ್‍ಟೆಬಲ್‍ಗಳಿಗೆ ಮತ್ತು 1ನೇ ತಂಡದಲ್ಲಿ 363 ಸಶಸ್ತ್ರ ಪೊಲೀಸ್ ಕಾನ್ಸ್‍ಟೆಬಲ್‍ಗಳಿಗೆ ವೃತ್ತಿ ಬುನಾದಿ ತರಬೇತಿ ಯಶಸ್ವಿಯಾಗಿ ನೀಡಲಾಗಿದೆ. ಪ್ರಸ್ತುತ 280 ಪ್ರಶಿಕ್ಷಣಾರ್ಥಿಗಳಿಗೆ 8 ತಿಂಗಳ ಕಾಲ ಎಲ್ಲರೂ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಕೊರೊನಾ ಭಯದ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳ ಆರೋಗ್ಯ ದೃಷ್ಠಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಯಾವ ಪ್ರಶಿಕ್ಷಣಾರ್ಥಿಗೂ ಕೋವಿಡ್ ರೋಗ ಲಕ್ಷಣಗಳು ಬರದಂತೆ ನೋಡಿಕೊಳ್ಳಲಾಗಿದೆ. ಇಲ್ಲಿಯವರೆಗೆ ಒಟ್ಟು 1960 ಪ್ರಶಿಕ್ಷಣಾರ್ಥಿಗಳಿಗೆ ವೃತ್ತಿ ಬುನಾದಿ ತರಬೇತಿಯನ್ನು ನೀಡಲಾಗಿದೆ ಎಂದರು.
 ಒಳಾಂಗಣ ವಿಷಯಕ್ಕೆ ಸಂಬಂಧಿಸಿದಂತೆ ಈ ಘಟಕದಲ್ಲಿರುವ ಅಧಿಕಾರಿಗಳೊಗೊಂಡಂತೆ ಹೊರಗಿನ ಅತಿಥಿ ಉಪನ್ಯಾಸಕರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿಕೊಂಡು ಬೋಧನೆ ನೀಡಲಾಗಿದೆ. ಹೊರಾಂಗಣ ವಿಷಯಗಳಿಗೆ ಸಂಬಂಧಿಸಿದಂತೆ ಕೋವಿಡ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಯೋಗ, ಧ್ಯಾನ, ಕರಾಟೆ, ಶಾರೀರಿಕ ವ್ಯಾಯಾಮ, ಒನ್ ಮಿನಿಟ್ ಡ್ರಿಲ್, ರೋಡ್ ವಾಕ್ ಅಂಡ್ ರನ್, ಅಡೆತಡೆಗಳ ಜಿಗಿತ, ಅಯುಧಗಲ ಜೊತೆ ಕವಾಯತು, ಅಯುಧಗಳ ಇಲ್ಲದೆ ಮಾಡುವ ಕವಾಯತು, ಫೈರಿಂಗ್ ಅಭ್ಯಾಸ, ಕ್ರೌಡ್ ಕಂಟೋಲ್, ಫೈರಿಂಗ್ ಹಾಗೂ ಅಶ್ರುವಾಯುಗಳ ಬಗ್ಗೆ ಬೋಧನೆ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಪ್ರಶಿಕ್ಷಣಾರ್ಥಿಗಳಿಗೆ ಮನೋರಂಜನೆ ಮತ್ತು ಮನೋವಿಕಾಸಕ್ಕಾಗಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು  ತರಬೇತಿ ಬಿಡುವಿನ ಸಮಯದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
280 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ: ಬೆಂಗಳೂರು ನಗರ ಸಶಸ್ತ್ರ ಪಡೆಗೆ ಹಾಗೂ ಡಿಎಆರ್ ಘಟಕ ರಾಯಚೂರು, ಯಾದಗಿರಿ, ಮಂಗಳೂರು, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಆಯ್ಕೆಯಾಗಿರುವ 280 ಜನ ಪ್ರಶಿಕ್ಷಣಾರ್ಥಿಗಳು ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ನಿರ್ಗಮಿಸಿದರು. 280 ಪ್ರಶಿಕ್ಷಣಾರ್ಥಿಗಳಲ್ಲಿ 271 ಮಂದಿ ಗ್ರಾಮಾಂತರ ಪ್ರದೇಶದವರು, 09 ಮಂದಿ ನಗರ ಪ್ರದೇಶದವರು ಇದ್ದಾರೆ. ಎಂಜಿನಿಯರಿಂಗ್ ಪದವೀಧರರು 16, ಸ್ನಾತಕೋತ್ತರ ಪದವೀಧರರು 28, ಪದವೀಧರರು 140, ಎಲ್‍ಎಲ್‍ಬಿ 02, ಬಿಎಡ್, ಡಿಎಡ್, ಬಿಪಿಎಡ್ 15, ಐಟಿಐ, ಡಿಪ್ಲೊಮೊ 57, ಪಿಯುಸಿ 57, ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆವುಳ್ಳವರು 08 ಇದ್ದಾರೆ. ಇದರಲ್ಲಿ 21 ಜನ ಮಾಜಿ ಸೈನಿಕ ಪ್ರಶಿಕ್ಷಣಾರ್ಥಿಗಳು ಇದ್ದಾರೆ.
 ಬಹುಮಾನ ವಿತರಣೆ: ಒಳಾಂಗಣ ವಿಷಯ ಹಾಗೂ ಹೊರಾಂಗಣ ವಿಷಯ ಹಾಗೂ ಫೈರಿಂಗ್ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ, ತೃತೀಯ ಸ್ಥಾನ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಪ್ರಕಾಶ್ ರಂಗಪ್ಪ ಗೌಡ ಅವರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ಪೊಲೀಸ್ ಮಹಾನಿರ್ದೇಶಕರಾದ (ತರಬೇತಿ) ಪದಮ್ ಕುಮಾರ್ ಗರ್ಗ್ ಹಾಗೂ ಪೊಲೀಸ್ ಮಹಾ ನಿರೀಕ್ಷಕರಾದ ಪಿ.ಹರಿಶೇಖರನ್ ವಿತರಿಸಿದರು.  
ಪಥ ಸಂಚಲನ ವೀಕ್ಷಣೆಗೆ ಬಂದಿದ್ದ ಪ್ರಶಿಕ್ಷಣಾರ್ಥಿಗಳ ತಾಯಿ, ತಂದೆ, ಸಂಬಂಧಿಕರು ತಮ್ಮ ಮಕ್ಕಳನ್ನು ತಬ್ಬಿಕೊಂಡು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರೀಕ್ಷಕ (ತರಬೇತಿ) ಪಿ.ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಿ.ಪಾಪಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *