ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಅರ್ಜಿ ಆಹ್ವಾನ
1 min readಚಿತ್ರದುರ್ಗ,ಜನವರಿ31:
ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ (Pಒಈಒಇ) ಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2020-21ನೇ ಸಾಲಿನಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ, ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಉತ್ಪಾದಕ ಸಹಕಾರಿ ಸಂಘಗಳಿಗೆ ಆಹಾರ ಸಂಸ್ಕರಣೆಯಲ್ಲಿ ಉತ್ತೇಜನ ನೀಡುವುದಾಗಿದೆ.
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಶೇಂಗಾ ಬೆಳೆಯು ಆಯ್ಕೆಯಾಗಿದ್ದು, ಶೇಂಗಾ ಉತ್ಪನ್ನಗಳ ಸಂಸ್ಕರಣೆಯನ್ನು ಕಾರ್ಯ ನಿರ್ವಹಿಸುತ್ತಿರುವ ವೈಯಕ್ತಿಕ ಕಿರು ಉದ್ದಿಮೆಗಳ, ರೈತ ಉತ್ಪಾದಕ ಸಂಸ್ಥೆಗಳ, ಉತ್ಪಾದಕ ಸೊಸೈಟಿ, ಸ್ವಸಹಾಯ ಸಂಘಗಳು ಹಾಗೂ ಆಯ್ಕೆಯಾದ ಫಲಾನುಭವಿಗಳಿಗೆ ಯೋಜನಾ ವೆಚ್ಚಕ್ಕೆ ಅನುಗುಣವಾಗಿ ಸಾಲ ಸಂಪರ್ಕವಿರುವ ಸಹಾಯಧನ ಹಾಗೂ ಬ್ಯಾಂಕಿನ ಸಾಲ ಪಡೆಯುವ ಅವಕಾಶವಿರುತ್ತದೆ. ಹಾಗೂ ಆಹಾರ ಉತ್ಪನ್ನಗಳ ಪ್ಯಾಕೇಜಿಂಗ್, ಬ್ರಾಂಡಿಂಗ್, ಮಾರ್ಕೆಟಿಂಗ್, ಸಾಮಾನ್ಯ ಸಂಸ್ಕರಣಾ ಸೌಲಭ್ಯಗಳಂತಹ ಸೇವೆಗಳ ಜೊತೆಗೆ ಆಹಾರ ಸಂಸ್ಕರಣಾ ವಲಯದಲ್ಲಿ ತರಬೇತಿಗಳನ್ನು ನೀಡಲಾಗುವುದು. ಬಂಡವಾಳ ಹೂಡಿಕೆಗಾಗಿ ಹಾಲಿ ಇರುವ ವೈಯಕ್ತಿಕ ಕಿರು ಘಟಕಗಳಿಗೆ ಬೆಂಬಲ ಒದಗಿಸುವುದಕ್ಕೆ ಸಂಬಂಧಪಟ್ಟಂತೆ ಒಡಿಒಪಿ(ಒಂದು ಜಿಲ್ಲೆ ಒಂದು ಉತ್ಪನ್ನ) ಉತ್ಪನ್ನಗಳನ್ನು ಉತ್ಪಾದಿಸುತ್ತಿರುವಂತಹ ಘಟಕಗಳಿಗೆ ಆದ್ಯತೆಯನ್ನು ನೀಡಲಾಗುವುದು. ಸಮೂಹಗಳಿಂದ ಬಂಡವಾಳ ಹೂಡಿಕೆಯ ವಿಷಯದಲ್ಲಿ ಒಡಿಒಪಿ ಉತ್ಪನ್ನಗಳನ್ನು ಒಳಗೊಂಡಿರುವಂತಹ ಘಟಕಗಳಿಗೆ ಆದ್ಯತೆಯ ಮೇರೆಗೆ ಬೆಂಬಲ ಒದಗಿಸಲಾಗುವುದು.
ವೈಯಕ್ತಿಕ ಕಿರು ಉದ್ದಿಮೆಗಳಿಗೆ ಸಹಾಯಧನ: ಪ್ರತಿ ಘಟಕಕ್ಕೆ ರೂ.10.00 ಲಕ್ಷದ ಗರಿಷ್ಠ ಮಿತಿಯೊಂದಿಗೆ ಅರ್ಹ ಯೋಜನಾ ವೆಚ್ಚದ ಶೇ.35ರಷ್ಟು ಸಾಲ ಸಂಪರ್ಕವಿರುವ ಸಹಾಯಧನ ಒದಗಿಸಲಾಗುವುದು. ಫಲಾನುಭವಿ ವಂತಿಕೆ ಶೇ.10ರಷ್ಟು, ಉಳಿದಿದ್ದು ಬ್ಯಾಂಕ್ ಸಾಲ
ಅರ್ಹತಾ ಮಾನದಂಡಗಳು: ಕಳೆದ ಮೂರು ವರ್ಷಗಳಿಂದ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರು ಉದ್ದಿಮೆ ಹಾಗೂ ಕನಿಷ್ಠ ವಾರ್ಷಿಕ ರೂ.5.00 ಲಕ್ಷ ವಾರ್ಷಿಕ ವಾಹಿವಾಟು ಹೊಂದಿರಬೇಕು. ಅಸಂಘಟಿತ ಉದ್ದಿಮೆಯಾಗಿರಬೇಕು ಹಾಗೂ ಹತ್ತಕ್ಕಿಂತ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರಬೇಕು. ಅರ್ಜಿದಾರರು ಉದ್ಯಮದ ಮಾಲೀಕತ್ವ ಹೊಂದಿರಬೇಕು. ಉದ್ಯಮವು ಮಾಲೀಕತ್ವ ಅಥವಾ ಪಾಲುದಾರಿಕೆ ಸಂಸ್ಥೆಯಾಗಿರಬೇಕು. ಒಂದು ಜಿಲ್ಲೆಗೆ ಒಂದು ಉತ್ಪನ್ನವಾಗಿ (ಒಡಿಒಪಿ) ಗುರುತಿಸಿರುವ ಉದ್ದಿಮೆಗಳಿಗೆ ಆದ್ಯತೆ, ಆದರೆ ಕಾರ್ಯಾಚರಣೆಯಲ್ಲಿರುವ ಇತರೆ ಕಿರು ಉದ್ಯಮಗಳನ್ನು ಪರಿಗಣಿಸಬಹುದು. ಅರ್ಜಿದಾರರು 18 ವರ್ಷಗಳನ್ನು ಪೂರೈಸಿರಬೇಕು ಹಾಗೂ ಕನಿಷ್ಠ 8ನೇ ತರಗತಿಯ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಹಣಕಾಸಿನ ನೆರವನ್ನು ಪಡೆಯಲು ಒಂದು ಕುಟುಂಬದಿಂದ ಕೇವಲ ಓರ್ವ ವ್ಯಕ್ತಿ ಅರ್ಹತೆಯನ್ನು ಹೊಂದಿರುತ್ತಾರೆ. ಇಲ್ಲಿ ಕುಟುಂಬ ಎಂದರೆ ಸ್ವಯಂ, ಪತ್ನಿ ಹಾಗೂ ಮಕ್ಕಳು ಒಳಗೊಂಡಿರುತ್ತಾರೆ. ಯೋಜನಾ ವೆಚ್ಚದ ಶೇ.10ರಷ್ಟು ಹೂಡಿಕೆ ಮಾಡುವಂತಿರಬೇಕು ಹಾಗೂ ಬ್ಯಾಂಕಿನಿಂದ ಸಾಲ ಪಡೆಯಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಯೋಜನೆಯ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.