ಭಯದ ವಾತಾವರಣ ಪ್ರಜಾಪ್ರಭುತ್ವಕ್ಕೆ ವಿಷದಂತೆ”
1 min readನವದೆಹಲಿ, ಜನವರಿ 30: ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಜಕಾರಣಿ ಹಾಗೂ ಪತ್ರಕರ್ತರು ಸೇರಿ ಏಳು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಪತ್ರಕರ್ತ ರಾಜ್ ದೀಪ್ ಸರ್ ದೇಸಾಯಿ, ಆರು ಮಂದಿ ಪತ್ರಕರ್ತರ ವಿರುದ್ಧ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ದೇಶದ್ರೋಹದ ಪ್ರಕರಣ ಹಾಗೂ ಇತರೆ ಪ್ರಕರಣಗಳನ್ನು ದಾಖಲಿಸಿದ್ದರು. ಹಿಂಸಾಚಾರಕ್ಕೆ ಈ ವ್ಯಕ್ತಿಗಳ ಡಿಜಿಟಲ್ ಪ್ರಸಾರ ಹಾಗೂ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳೇ ಕಾರಣ ಎಂದು ನೋಯ್ಡಾ ನಿವಾಸಿಯೊಬ್ಬರು ಸೆಕ್ಷನ್ 20 ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ ಗಾಂಧಿ, “ಎಫ್ ಐಆರ್ ದಾಖಲಿಸುವ ಮೂಲಕ ಪತ್ರಕರ್ತರು ಹಾಗೂ ಸಾರ್ವಜನಿಕ ಪ್ರತಿನಿಧಿಗಳಿಗೆ ಬೆದರಿಕೆ ಹಾಕುತ್ತಿರುವ ಬಿಜೆಪಿ ಸರ್ಕಾರದ ರೀತಿ ಅಪಾಯಕಾರಿ. ಪ್ರಜಾಪ್ರಭುತ್ವಕ್ಕೆ ಗೌರವ ನೀಡುವುದು ಸರ್ಕಾರದ ಇಚ್ಛೆಯಲ್ಲ, ಜವಾಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕು. ಭಯದ ವಾತಾವರಣ ಪ್ರಜಾಪ್ರಭುತ್ವಕ್ಕೆ ವಿಷದಂತೆ” ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವದ ಘನತೆಯನ್ನು ನಾಶಪಡಿಸಲು ನೋಡುತ್ತಿದೆ ಎಂದು ಆರೋಪಿಸಿದ್ದಾರೆ.