ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ತಿಂಗಳೊಳಗೆ ನೀರು ಬಿಡುಗಡೆ: ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್
1 min readಚಿತ್ರದುರ್ಗ,ಫೆಬ್ರವರಿ08:
ವಿವಿಸಾಗರ ಜಲಾಶಯದ ನೀರನ್ನು ಫೆಬ್ರವರಿ ತಿಂಗಳ ಒಳಗಾಗಿ ಒಂದು ತಿಂಗಳ ಕಾಲ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯೂರು ಶಾಸಕರಾದ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿವಿ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ವಿವಿ ಸಾಗರ ಜಲಾಶಯದ ನೀರಿನ ಮಟ್ಟ 105.60 ಅಡಿ ತಲುಪಿದ್ದು, ಇದರಲ್ಲಿ 13.71 ಟಿಎಂ ಸಿ ನೀರು ಇದೆ. ಇದರಲ್ಲಿ ಎಂ.ಡಿ.ಡಿ.ಎಲ್. ಮಟ್ಟದಿಂದ (ಅಂದರೆ 60.00 ಅಡಿ ಮೇಲ್ಮಟ್ಟದಿಂದ) 11.80 ಟಿ.ಎಂ.ಸಿ ನೀರು ಬಳಕೆಗೆ ಬರುತ್ತದೆ. ಈ ವರ್ಷದಲ್ಲಿ ಜಲಾಶಯಕ್ಕೆ ಒಳಹರಿವು ಬಂದಿದೆ. ಹೀಗಾಗಿ ನೀರಿನ ಲಭ್ಯತೆ ಮತ್ತು ಕುಡಿಯುವ ನೀರಿನ ಒದಗಿಸುವ ಆದ್ಯತೆಯನ್ನು ಗಮನದಲ್ಲಿಟ್ಟುಗೊಂಡು ನೀರನ್ನು ಬಿಡಲಾಗುತ್ತಿದೆ. 2020-2021ನೇ ಸಾಲಿನಲ್ಲಿ ವಾಣಿ ವಿಲಾಸ ಜಲಾಶಯದ ಅಚ್ಚುಕಟ್ಟು ಪ್ರದೇಶದ ಹಾಲಿ ತೋಟಗಾರಿಕಾ ಬೆಳೆಗಳಿಗೆ ಬೇಸಿಗೆ ಹಂಗಾಮಿನ ನೀರು ಬಿಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು
ನೀರು ಹರಿಸಿದ ನಂತರ ನೀರು ವ್ಯರ್ಥವಾಗದಂತೆ ಮತ್ತು ನೀರು ಸಮರ್ಪಕವಾಗಿ ರೈತರಿಗೆ ತಲುಪತ್ತಿದೆಯಾ ಅಥವಾ ಉಪಯೋಗವನ್ನು ಗಮನಿಸಿ ಎರಡನೇ ಹಂತದಲ್ಲಿ ನೀರನ್ನು ಬಿಡಲಾಗುವುದು. ಯಾವುದೇ ಕಾರಣಕ್ಕೂ ನೀರನ್ನು ವ್ಯರ್ಥ ಮಾಡದೇ ಉಪಯುಕ್ತವಾಗಿ ಬಳಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಿವಿ ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶವು ಒಟ್ಟು 12135.00 ಹೆಕ್ಟೇರ್ ಪ್ರದೇಶವಿದ್ದು, ನೀರು ಬಿಡುವುದರಿಂದ ಹಿರಿಯೂರು ತಾಲ್ಲೂಕಿನ ಒಟ್ಟು 42 ಗ್ರಾಮಗಳಿಗೆ ಉಪಯುಕ್ತವಾಗಲಿದೆ. ಮೇಲ್ಮಟ್ಟದ ಅಚ್ಚುಕಟ್ಟು ಪ್ರದೇಶ 531 ಹೆಕ್ಟೇರ್ ಇದೆ ಹಾಗೂ ಬಲನಾಲ ಅಚ್ಚುಕಟ್ಟು ಪ್ರದೇಶ 5766 ಹೆಕ್ಟೇರ್ ಮತ್ತು ಎಡನಾಲ ಅಚ್ಚುಕಟ್ಟು ಪ್ರದೇಶ 5838 ಹೆಕ್ಟೇರ್ ಪ್ರದೇಶವಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ವಿವಿ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸದಸ್ಯರಾದ ಚಂದ್ರಣ್ಣ, ಸಿ.ಎನ್ ಸುಂದರಂ, ಗಂಗಾಧರಪ್ಪ, ಎಸ್. ವೀರಣ್ಣ, ಮತ್ತು ಚಿಕ್ಕಣ್ಣ ಹಾಗೂ , ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಇಂಜಿನಿಯರ್, ವಿಶ್ವೇಶ್ವರಯ್ಯ ಜಲ ನಿಗಮ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್‍ಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.