ಪ್ರಾಮಾಣಿಕತೆಯ“ಅನುಭವ ಮಂಟಪ” ಶೈಕ್ಷಣಿಕ ಸಾಮಗ್ರಿಗಳ ಮಳಿಗೆಯ ಉದ್ಘಾಟನೆ
1 min readಚಿತ್ರದುರ್ಗ: ತಾಲೂಕಿನ ಕಡ್ಲೇಗುದ್ದಿನ ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಸಾಮಗ್ರಿಗಳ ವಿನೂತನವಾದ ಪ್ರಾಮಾಣಿಕತೆಯ “ಅನುಭವ ಮಂಟಪ” ಮಳಿಗೆಯನ್ನು ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಬ್ರಹ್ಮಕುಮಾರಿ ದಿವ್ಯ ಅಕ್ಕನವರು ಹಾಗೂ ಸಿದ್ದನಗುಂಡಿ ಪುಣ್ಯ ಕ್ಷೇತ್ರದ ಪಂಚಾಕ್ಷರಿ ಮಹಾಸ್ವಾಮಿಗಳು ಇಂದು ಉದ್ಘಾಟಿಸಿದರು.
ಪ್ರಾಮಾಣಿಕತೆಯ “ಅನುಭವ ಮಂಟಪ” ಮಳಿಗೆಯ ವಿಶೇಷತೆಗಳು :
ಮಕ್ಕಳು ಬಳಸುವ ಪೆನ್ನು, ಪೆನ್ಸಿಲ್, ನೋಟ್ ಬುಕ್, ಡ್ರಾಯಿಂಗ್ ಶೀಟ್ಸ್, ಜೆರಾಕ್ಸ್ ಹಾಳೆ,ಗಮ್ ಬಾಟಲ್, ಸ್ಕೆಚ್ ಪೆನ್, ಬಫಸ ಶೀಟ್ ಹೀಗೆ ಮುಂತಾದ ಶೈಕ್ಷಣಿಕ ಸಾಮಗ್ರಿಗಳನ್ನು ತೆರೆದ ಮಳಿಗೆಯಲ್ಲಿ ಜೋಡಿಸಲಾಗುತ್ತದೆ. ಪ್ರತಿ ವಸ್ತುವಿನ ದರಪಟ್ಟಿಯನ್ನು ಕೂಡಾ ಹಾಕಲಾಗಿರುತ್ತದೆ. ಹಣ ಹಾಕಿಡುವ ತೆರೆದ ಡಬ್ಬಿಯನ್ನು ಕೂಡಾ ಇಟ್ಟಿರಲಾಗುತ್ತದೆ. ಈ ಮಳಿಗೆಗೆ ಯಾರೂ ಮಾಲಿಕರಾಗಲಿ ನಿರ್ವಹಿಸುವವರಾಗಲಿ ಇರುವುದಿಲ್ಲ. ಮಕ್ಕಳೆ ದರಪಟ್ಟಿಯನ್ನು ಗಮನಿಸಿ ಆ ವಸ್ತುವಿನ ಬೆಲೆಯ ಹಣವನ್ನು ಹಣದ ಡಬ್ಬಿಗೆ ಹಾಕೀ ವಸ್ತುವನ್ನು ಅವರೇ ಪಡೆದುಕೊಳ್ಳುತ್ತಾರೆ. ಯಾರೂ ನೋಡುವವರು ಇರುವುದಿಲ್ಲ,ಗಮನಿಸುವವರು ಇರುವುದಿಲ್ಲ.
ಯಾರೂ ನಮ್ಮನ್ನು ಗಮನಿಸುವವರು ಇಲ್ಲದಿದ್ದಾಗ ತಪ್ಪು ಮಾಡಲು ಪೂರ್ಣ ಅವಕಾಶಗಳು ಇದ್ದಾಗಲೂ ಸಹಜ ಪ್ರಾಮಾಣಿಕತೆಯಿಂದ ನಡೆದುಕೊಳ್ಳಬಲ್ಲೆವು ಎಂಬ ಅರಿವು ವಿಶ್ವಾಸವನ್ನು ಮಕ್ಕಳು ಹೊಂದಲು ಮುಕ್ತವಾದ ಅವಕಾಶ ಕಲ್ಪಿಸುವುದು ಈ ಮಳಿಗೆಯ ಆಶಯವಾಗಿದೆ ಆದರೆ ಮಕ್ಕಳ ಪ್ರಾಮಾಣಿಕತೆಯನ್ನು ಪರೀಕ್ಷಿಸುವುದಲ್ಲಾ ಎಂದು ಮುಖ್ಯಶಿಕ್ಷಕರಾದ ಮಹೇಶ್ ತಿಳಿಸಿದರು.
ಸತ್ಯದ ಹಾದಿಯಲ್ಲಿ ನಡೆಯುವುದರಿಂದ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಪ್ರಾಮಾಣೀಕತೆಯ ಗುಣವನ್ನು ಮಕ್ಕಳಲ್ಲಿ ಮೂಡಿಸಲು, ಇಂತಹ ಮಳಿಗೆ ತೆರೆದಿರುವುದು ಉತ್ತಮ ಕಾರ್ಯವಾಗಿದೆಯೆಂದು ಬ್ರಹ್ಮಕುಮಾರಿ ದಿವ್ಯ ಅಕ್ಕನವರು ಆಶೀರ್ವಚನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುನಾಥ್, ನಟರಾಜ್, ನಾಗರಾಜ್, ಕರಿಬಸಪ್ಪ, ಮಂಜಪ್ಪ ಹಾಗೂ ಮಹಾಂತೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು.