March 3, 2024

Chitradurga hoysala

Kannada news portal

ತರಳಬಾಳು ಪಂಡಿತಾರಾಧ್ಯ ಶ್ರೀ ಭೇಟಿ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಕಾಂಕ್ಷಿ ಚಿಕ್ಕಪ್ಪನಹಳ್ಳಿ ಷಣ್ಮುಖ.

1 min read

ಸಿರಿಗೆರೆ: ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಮ್ಮತದ ಆಯ್ಕೆಗೆ ಪಂಡಿತಾರಾಧ್ಯ ಶ್ರೀ ಆಶಯ ವ್ಯಕ್ತಪಡಿಸಿದರು
ಮುಂದಿನ ಮೇ ತಿಂಗಳಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ಒಮ್ಮತದ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡುವುದು ಸೂಕ್ತವೆಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಲಿಚ್ಚಿಸಿರುವ ನೀರಾವರಿ ಹೋರಾಟಗಾರ, ಪತ್ರಕರ್ತ, ಸಾಮಾಜಿಕ ಹೋರಾಟಗಾರ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರು ಇಂದು ಸಿರಿಗೆರೆಯಲ್ಲಿ ಶ್ರೀಗಳವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಸ್ವಾಮೀಜಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಕ್ಕೆ ಚುನಾವಣೆಯ ಮೂಲಕ ಗೆದ್ದು ಬರುವಂತಹ ಪ್ರವೃತ್ತಿ ಅಷ್ಟು ಒಳ್ಳೆಯದಲ್ಲ. ಸಾಹಿತ್ಯ ಮತ್ತು ಸಂಘಟನೆಯ ಕೆಲಸವನ್ನು ನೈಜವಾಗಿ ಮಾಡುವಂತಹ ಸೂಕ್ತ ಅಭ್ಯರ್ಥಿಯನ್ನು ಸಾಹಿತ್ಯಾಸಕ್ತರೆಲ್ಲ ಸೇರಿ ಒಮ್ಮತದಿಂದ ಆಯ್ಕೆ ಮಾಡಬೇಕು. ಇನ್ನಿತರ ಕ್ಷೇತ್ರಗಳಲ್ಲಿ ನಡೆಯುವಂತಹ ಚುನಾವಣೆ ಸಾಹಿತ್ಯ ಪರಿಷತ್ ವಿಚಾರದಲ್ಲಿ ನಡೆಯಬಾರದು ಎಂದರು.
ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ರೂಪಿಸುವುದು, ಅವುಗಳನ್ನು ಸಾಹಿತ್ಯಾಸಕ್ತರ ಬಳಿಗೆ ಕೊಂಡೊಯ್ಯುವುದು ಮುಖ್ಯವಾಗಬೇಕು. ಆದರೆ ಕರ‍್ಯಕ್ರಮಗಳ ವಿವರಗಳನ್ನು ಸದಸ್ಯರುಗಳಿಗೆ ತಲುಪಿಸಲು ಹೆಚ್ಚು ಹಣವನ್ನು ಅಂಚೆವೆಚ್ಚಕ್ಕಾಗಿಯೇ ಭರಿಸಬೇಕಾದ ಸಂದರ್ಭ ಬಂದಿದೆ ಎಂದರು.
ಉಳಿದ ಕ್ಷೇತ್ರಗಳಲ್ಲಿರುವಂತೆಯೇ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿಯೂ ಹಣದ ಪ್ರಭಾವ ಕೆಲಸ ಮಾಡುತ್ತಿರುವುದನ್ನು ಪ್ರಸ್ತಾಪಿಸಿದ ಶ್ರೀಗಳು ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಹಣಕ್ಕೆ ಕೆಲಸವೇ ಇರಬಾರದು. ಈಗಾಗಲೇ ಹಲವು ಸ್ಪರ್ಧಿಗಳು ತಮ್ಮನ್ನು ಭೇಟಿ ಮಾಡಿದ್ದಾರೆ. ಎಲ್ಲರಲ್ಲಿಯೂ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇವೆ. ಇನ್ನೂ ಕಾಲವಿರುವುದರಿಂದ ಸಾಹಿತ್ಯದ ಗಂಭೀರ ಆಸಕ್ತರು ಚಿಂತಿಸಿ ಒಮ್ಮತದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದರು.
ರೈತ ಸಂಘದ ಮುಖಂಡ ನುಲೇನೂರು ಟಿ. ಶಂಕರಪ್ಪ, ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಯಾದವರೆಡ್ಡಿ, ಕೋಗುಂಡೆ ದಯಾನಂದ್ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *