ಸಾಮಾನ್ಯ ಜನರಿಗೆ ತೊಂದರೆಯಾದರೆ ಸುಮ್ಮನಿರಲ್ಲ:ಮಲ್ಲಿಕಾರ್ಜುನ ಖರ್ಗೆ
1 min readತಿರುವನಂತಪುರಂ: ‘ಸರ್ಕಾರವನ್ನು ವಿನಾ ಕಾರಣ ವಿರೋಧಿಸುವುದು ನನ್ನ ಕಾರ್ಯ ವಿಧಾನವಲ್ಲ. ಆದರೆ, ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವಂಥ ಯಾವುದೇ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ‘ ಎಂದು ರಾಜ್ಯಸಭೆ ವಿರೋಧ ಪಕ್ಷದ ನೂತನ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು.
‘ನಾವು ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ಸರ್ಕಾರದ ತಪ್ಪು ನೀತಿಗಳನ್ನು ವಿರೋಧಿಸುತ್ತೇವೆ. ಅದೇ ರೀತಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಸರ್ಕಾರ, ಈ ವಿವಾದಾತ್ಮಕ ಕಾಯ್ದೆಗಳನ್ನು ಆದಷ್ಟು ಬೇಗ ರದ್ದುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.
ಕೇರಳದ ಕೊಲ್ಲಂನಲ್ಲಿ ಶುಕ್ರವಾರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಯೋಜಿಸಿದ್ದ ‘ಐಶ್ವರ್ಯ ಕೇರಳ ಯಾತ್ರೆ’ಯನ್ನುದ್ಧೇಶಿಸಿ ಮಾತನಾಡಿದ ಖರ್ಗೆ ಅವರು, ‘ಈ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಬಳಿಕ ಸರ್ಕಾರ ಹೊಸ ಪ್ರಸ್ತಾವ ತರಬೇಕು. ಅದನ್ನು ಸಂಸದೀಯ ಸ್ಥಾಯಿ ಸಮಿತಿಯೊಂದಿಗೆ ಚರ್ಚಿಸಬೇಕು’ ಎಂದರು.
‘ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಬಡ ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಸೂಚಿಸಿದ್ದಾರೆ. ಆ ಕಾರ್ಯವನ್ನು ಮಾಡುತ್ತೇನೆ’ ಎಂದು ಅವರು ಹೇಳಿದರು.
ಹೆಚ್ಚುತ್ತಿರುವ ಇಂಧನ ಬೆಲೆ ಕುರಿತು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇಂಧನ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ‘ದೊಡ್ಡ ಅನ್ಯಾಯ’ ಮಾಡುತ್ತಿದೆ ಎಂದು ದೂರಿದರು.
ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಆಗಿರುವ ಸಂದರ್ಭದಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಬೆಲೆಗಳನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರಿಗೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಅವರು ಟೀಕಿಸಿದರು.