ಅವರವರ ಕ್ಷೇತ್ರಕ್ಕೆ ಅಲ್ಲಿನ ನಾಯಕರೇ ಸುಪ್ರೀಂ: ಸತೀಶ್ ಜಾರಕಿಹೊಳಿ
1 min readಬೆಳಗಾವಿ, ಫೆಬ್ರವರಿ 22: ಕ್ಷೇತ್ರವಾರು ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಅವರವರ ಕ್ಷೇತ್ರದ ವಿಚಾರ ಬಂದಾಗ ಅಲ್ಲಿನ ನಾಯಕರೇ ಸುಪ್ರೀಂ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಿವೆ ಎಂದು ಮಾಧ್ಯಮದವರ ಪ್ರಶ್ನೆಗೆ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಎಲ್ಲರೂ ಒಂದೇ ಎಂದರು.
”ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆ ತರುತ್ತೇವೆ; ಪುನಃ ಪಕ್ಷ ಸಂಘಟಿಸುತ್ತೇವೆ”
ಚಿಕ್ಕೋಡಿ ಭಾಗಕ್ಕೆ ಪ್ರಕಾಶ ಹುಕ್ಕೇರಿ ಅವರೇ ಬಾಸ್, ಬೇರೆ ಬೇರೆ ವಿಷಯಗಳಿಗೆ ಮನಸ್ತಾಪವಿರಬಹುದು, ಆದರೆ ಪಕ್ಷದ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಬೈಲಹೊಂಗಲಕ್ಕೆ ಮಹಾಂತೇಶ, ಬೆಳಗಾವಿ ಗ್ರಾಮೀಣಕ್ಕೆ ಹೆಬ್ಬಾಳ್ಕರ್, ಬೆಳಗಾವಿ ಉತ್ತರಕ್ಕೆ ಫೀರೋಜ್ ಸೇಠ್ ಹೀಗೆ ಅವರವರ ಕ್ಷೇತ್ರಕ್ಕೆ ಅವರೇ ಸುಪ್ರೀಂ ಎಂದು ತಿಳಿಸಿದರು.
ಪಕ್ಷ ಅಂತಾ ಬಂದಾಗ ನಾವೆಲ್ಲರೂ ಒಂದೇ
ಕ್ಷೇತ್ರ ವಿಚಾರ ಬಂದಾಗ ಅಲ್ಲಿನ ನಾಯಕರೇ ಸುಪ್ರೀಂ ಇರುತ್ತಾರೆ. ಅಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಜಿಲ್ಲೆಯ ವಿಚಾರಕ್ಕೆ ಬಂದಾಗ ಪೈಪೋಟಿ ಇರುತ್ತದೆ. ಬೆಂಗಳೂರಿನಿಂದ ದಿಲ್ಲಿಯವರೆಗೂ ನೆಚ್ಚಿನ ನಾಯಕರಿರುತ್ತಾರೆ. ಚೈನ್ ಸಿಸ್ಟಮ್ ಇರುತ್ತೆ ಅದು ಬೇರೆ, ಪಕ್ಷ ಅಂತಾ ಬಂದಾಗ ನಾವೆಲ್ಲರೂ ಒಂದೇ ಎಂದು ಸ್ಪಷ್ಟಪಡಿಸಿದರು.
ಎಲ್ಲರೂ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ
ರಾಮ ಮಂದಿರಕ್ಕೆ ದೇಣಿಗೆ ನೀಡಲು ಕಾಂಗ್ರೆಸ್ ನಾಯಕರು ನಾಟಕ ಮಾಡುತ್ತಿದ್ದಾರೆ ಎಂಬ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಮ ಮಂದಿರ ಕೇವಲ ಬಿಜೆಪಿಯವರ ಆಸ್ತಿಯಲ್ಲ. ಅದು ದೇಶದ ಆಸ್ತಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೀಗೆ ಎಲ್ಲರೂ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.