May 19, 2024

Chitradurga hoysala

Kannada news portal

ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

1 min read

ಚಿತ್ರದುರ್ಗ, ಮಾರ್ಚ್02:
ಚಿತ್ರದುರ್ಗ ತಾಲ್ಲೂಕಿನ ವಿವಿಧೆಡೆ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಮಂಗಳವಾರ ಚಾಲನೆ ನೀಡಿದರು.
ನಬಾರ್ಡ್ ಹಾಗೂ ಡಿಎಂಎಫ್ ಅನುದಾನದಲ್ಲಿ ಚಿತ್ರದುರ್ಗ ತಾಲ್ಲೂಕಿನ ಗೊಡಬನಾಳ್, ಅನ್ನೇಹಾಳ್, ಜಂಪಣ್ಣನಹಟ್ಟಿ ಹಾಗೂ ಕಕ್ಕೇಹರವು ಗ್ರಾಮದಲ್ಲಿ ಒಟ್ಟು ರೂ.1 ಕೋಟಿ 14 ಲಕ್ಷ ವೆಚ್ಚದಲ್ಲಿ ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಹಾಗೂ ಜಂಪಣ್ಣನಹಟ್ಟಿ ಹಾಗೂ ಅನ್ನೇಹಾಳು ಗ್ರಾಮದಲ್ಲಿ

ನೂತನ ಶಾಲಾ ಕಟ್ಟಡ ಉದ್ಘಾಟನೆ

ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು.
 ನಂತರ ಮಾತನಾಡಿದ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ನಬಾರ್ಡ್ ಹಾಗೂ ಜಿಲ್ಲಾ ಖನಿಜಾ ಪ್ರತಿಷ್ಠಾನ ನಿಧಿ (ಡಿಎಂಎಫ್)ಯಿಂದ ಒಟ್ಟು ರೂ.17 ಕೋಟಿ ರೂಪಾಯಿಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುತ್ತಿಲ್ಲ. ಇದರಿಂದ ಬಡ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು, ಕೋವಿಡ್-19 ಸಾಂಕ್ರಾಮಿಕ ರೋಗದ ಹರಡದಂತೆ ಪ್ರತಿಯೊಬ್ಬರು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ದೊಡ್ಡಪುರ ಕಕ್ಕೇಹರವು, ಜಂಪಣ್ಣನಹಟ್ಟಿ, ಅನ್ನೇಹಾಳು ಗ್ರಾಮಗಳು ನಗರಕ್ಕೆ ದೂರ ಇರುವ ಗ್ರಾಮಗಳಾಗಿವೆ. ನಗರ ಪ್ರದೇಶಕ್ಕೆ ದೂರ ಇರುವುದರಿಂದ 25 ವರ್ಷಗಳ ಹಿಂದೆಯೇ ಪ್ರೌಢಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಸೇರಿದಂತೆ ಹಾಸ್ಟೇಲ್ ಸೌಲಭ್ಯ ವ್ಯವಸ್ಥೆ ಸೇರಿದಂತೆ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇತ್ತೀಚೆಗೆ ಜಂಪಣ್ಣನಹಟ್ಟಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪಿಸಲಾಗಿದ್ದು, ಸಾಕಾಷ್ಟು ಅನುದಾನಗಳನ್ನು ನೀಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ಸೇರಿದಂತೆ ಗ್ರಾಮಗಳ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಚೆಕ್‍ಡ್ಯಾಂ ನಿರ್ಮಾಣಕ್ಕೆ ಈ ಭಾಗದಲ್ಲಿ ವಿಶೇಷ ಗಮನಹರಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಪ್ರತಿಭಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *