ಕಾನೂನು ಅರಿವು-ನೆರವು ಕಾರ್ಯಕ್ರಮ
ಕಾನೂನು ಪಾಲಿಸಿ ರಕ್ಷಣೆ ಪಡೆಯಿರಿ : ಸಿ ಎಸ್. ಜಿತೇಂದ್ರಸ್ವಾಮಿ
1 min read
ಚಿತ್ರದುರ್ಗ,ಮಾರ್ಚ್02:
ನಾವು ಎಲ್ಲ ವಿಷಯಗಳಲ್ಲಿ ಕಾನೂನು ಪಾಲಿಸಿದರೆ ಕಾನೂನು ನಮ್ಮನ್ನು ರಕ್ಷಿಸುತ್ತದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಎಸ್. ಜಿತೇಂದ್ರಸ್ವಾಮಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ (ಸ್ವಾಯತ್ತ) ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಇವರುಗಳ ಸಂಯುಕ್ತಾಶ್ರಯದಲ್ಲಿ “ಮಾನಸಿಕ ಅಸ್ವಸ್ಥ ಮತ್ತು ಅಂಗವಿಕಲರಿಗೆ ಕಾನೂನು ಸೇವೆಗಳು ಯೋಜನೆ-2015 ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ವಿದ್ಯಾರ್ಥಿಗಳು ಕಾನೂನನ್ನು ತಪ್ಪದೇ ಪಾಲಿಸುವುದರ ಜೊತೆಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
20-30 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದ ಕಾಯಿಲೆ ಸಮಾಜದಲ್ಲಿ ತುಂಬ ಹೆಚ್ಚಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಕಾಯಿಲೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಿರುದರಿಂದ ಕಾಯಿಲೆ ಕಡಿಮೆಯಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ ಗಿರೀಶ್ ಮಾತನಾಡಿ, ಕಾನೂನು ಎಲ್ಲರಿಗೂ ತಲುಪಬೇಕು ಮತ್ತು ಕಾನೂನಿಂದ ಯಾರು ವಂಚಿತರಾಗಬಾರದು ಎನ್ನುವುದು ಸಂವಿಧಾನದ ಆಶಯವಾಗಿದೆ. ಸಂವಿಧಾನ ಆಶಯದಂತೆ ಯಾರಿಗೆ ಕಾನೂನಿನ ಅವಶ್ಯಕತೆ ಇದೆಯೋ ಅವರಿಗೆ ಕಾನೂನಿನ ತಿಳುವಳಿಕೆ ಮತ್ತು ಅರಿವು ಮೂಡಿಸುವುದು ಕಾನೂನು ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಪ್ರೊ..ಟಿ.ಎಲ್.ಸುಧಾಕರ್ ಮಾತನಾಡಿ, ವಿದ್ಯಾರ್ಥಿ ಮಿತ್ರರು ಕಾನೂನಿನ ವಿರುದ್ಧವಾಗಿ ಯಾರು ಹೋಗಬೇಡಿ ಎಂದು ಮನವಿ ಮಾಡಿದ ಅವರು, ಅವಿದ್ಯಾವಂತರಿಗೆ ಕಾನೂನಿನ ಕುರಿತು ಅರಿವು ಮೂಡಿಸುವುದು ವಿದ್ಯಾರ್ಥಿಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.
ಅಂಗವಿಕಲ ವಿದ್ಯಾರ್ಥಿಗಳಿಗೆ ಸರ್ಕಾರವು ಎಲ್ಲ ಕಾಲೇಜಿಗಳಲ್ಲಿಯೂ ರ್ಯಾಂಪ್ ವ್ಯವಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವಿಲ್‍ಚೇರ್‍ಗಳ ವ್ಯವಸ್ಥೆ ಮಾಡುಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಐಕ್ಯೂಎಸಿ ಕೋ-ಆರ್ಡಿನೇಟರ್ ಪ್ರೊ. ಜಿ.ಡಿ. ಸುರೇಶ್, ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಎಲ್. ನಾಗರಾಜಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಎಂ.ಜೆ. ಸಾಧಿಕ್, ಸಹಾಯಕ ಪ್ರಾಧ್ಯಾಪಕ ಪ್ರೊ. ಸಿ. ಚಿತ್ತಯ್ಯ, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಲೇಪಾಕ್ಷ, ಸಮಾಜ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶರಣಪ್ಪ, ಹಾಗೂ ಸಹಾಯಕ ಪ್ರಾಧ್ಯಾಪಕ ರಂಗಸ್ವಾಮಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.