ಪರಿಷ್ಕೃತ ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಟಾನ ಒತ್ತಾಯ: ವ.ಚ.ಚನ್ನೇಗೌಡ
1 min readಚಿತ್ರದುರ್ಗ ಮಾ. ೪
ಯುವ ಬರಹಗಾರರಿಗೆ ಹಾಗೂ ಮಹಿಳಾ ಸಾಹಿತಿಗಳಿಗೆ ಪರಿಷತ್ತಿನ ವೇದಿಕೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು. ಆಸಕ್ತ ಸಾಹಿತಿಗಳು ಹಾಗೂ ಕಲಾವಿದರುಗಳಿಗೆ ಆರೋಗ್ಯ ವಿಮೆ ಜಾರಿಗೆ ತರುವುದು. ಪರಿಷ್ಕೃತ ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಟಾನಗೊಳಿಸಲು ಅದಕ್ಕೆ ಆಂಧ್ರ ರಾಜ್ಯ ಮಾದರಿಯಲ್ಲಿ ಕಾನೂನು ಶಕ್ತಿ ತುಂಬಲು ಸರ್ಕಾರದ ಮೇಲೆ ಒತ್ತಡ ಹೇರುವುದು ಸೇರಿದಂತೆ ಇತರೆ ವಿವಿಧ ಕಾರ್ಯಕ್ರಮಗಳನ್ನು ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದರೆ ಜಾರಿ ಮಾಡುವುದಾಗಿ ವ.ಚ.ಚನ್ನೇಗೌಡ ತಿಳಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಎಲ್ಲಾ ರಂಗಗಳಲ್ಲೂ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು. ಅದಕ್ಕಾಗಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಆಯಾ ಭಾಷೆಗೆ ಪ್ರಾಮುಖ್ಯತೆಯನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಧಾನಿ ಮೇಲೆ ಒತ್ತಡ ಹೇರಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆ ಸಬಲೀಕರಣ ಸಮಿತಿಯ ವರದಿ ಅನುಷ್ಟಾನ, ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ಗುರಿಯಿಟ್ಟುಕೊಂಡು ಮೇ.೯ ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಮತದಾರರು ಆಶೀರ್ವದಿಸುವಂತೆ ವ.ಚ.ಚನ್ನೇಗೌಡ ವಿನಂತಿಸಿದರು.
ಮಹತ್ವವಾದ ಕನ್ನಡ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದಿಸಿ ಮುದ್ರಿಸುವುದು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯುವುದು, ಪುಸ್ತಕ ಖರೀಧಿ ಸೇರಿದಂತೆ ಪರಿಷತ್ತಿನ ಎಲ್ಲಾ ಚಟುವಟಿಕೆಗಳು ಅಂರ್ತಜಾಲದ ಮೂಲಕ ನಡೆಯುವಂತೆ ನೋಡಿಕೊಳ್ಳುವುದು. ಯುವ ಬರಹಗಾರರಿಗೆ ಹಾಗೂ ಮಹಿಳಾ ಸಾಹಿತಿಗಳಿಗೆ ಪರಿಷತ್ತಿನ ವೇದಿಕೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು. ಆಸಕ್ತ ಸಾಹಿತಿಗಳು ಹಾಗೂ ಕಲಾವಿದರುಗಳಿಗೆ ಆರೋಗ್ಯ ವಿಮೆ ಜಾರಿಗೆ ತರುವುದು. ಪರಿಷ್ಕೃತ ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಟಾನಗೊಳಿಸಲು ಅದಕ್ಕೆ ಆಂಧ್ರ ರಾಜ್ಯ ಮಾದರಿಯಲ್ಲಿ ಕಾನೂನು ಶಕ್ತಿ ತುಂಬಲು ಸರ್ಕಾರದ ಮೇಲೆ ಒತ್ತಡ ಹೇರುವುದು. ರಾಜ್ಯದ ಗಡಿಭಾಗಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಉಳಿವಿಗಾಗಿ ನಿರ್ಧಿಷ್ಟ ಕಾರ್ಯಯೋಜನೆ ರೂಪಿಸಿ ಹೊರರಾಜ್ಯಗಳಲ್ಲಿ ಕನ್ನಡ ಸಮಾವೇಶಗಳನ್ನು ನಡೆಸಿ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಉದ್ದೇಶವಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಸೆಯಿಟ್ಟುಕೊಂಡಿದ್ದೇನೆ. ಅದಕ್ಕೆ ಕಸಾಪ ಮತದಾರರ ಬೆಂಬಲ ಬೇಕು ಎಂದು ಕೋರಿದರು.
ಬಾಬುರಾವ್, ನಟರಾಜ್, ರಾಮಣ್ಣ, ಶಿವಕುಮಾರ್, ದುರ್ಗಾವರ ತಿಪ್ಪೇಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.