ಸಂಗೀತದಿಂದ ಒತ್ತಡ ಮುಕ್ತವಾಗಲು ಸಹಕಾರಿ:ಎಡಿಸಿ ಬಾಲಕೃಷ್ಣಪ್ಪ
1 min readಚಿತ್ರದುರ್ಗ,ಮಾ,೪: ಸಂಗೀತದ ಮಹತ್ವವನ್ನು ಕೇವಲ ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಸ್ವತಃ ಅದನ್ನು ಆಲಿಸುವ ಮೂಲಕ ಆತಂಕ, ಒತ್ತಡಕ್ಕೆ ಸ್ವಲ್ಪವಾದರೂ ಕಡಿವಾಣ ಹಾಕಲು ಸಾಧ್ಯವಿದೆ.ಇಂತಹ ಸತ್ವಯುತವಾದ ಪರಂಪರೆಗೆ ಪ್ರೇರಣೆ ನೀಡಿದವರು ಪಂಡಿತ್ ಪಂಚಾಕ್ಷರ ಗವಾಯಿಗಳವರು ಹಾಗೂ ಡಾ. ಪಂ. ಪುಟ್ಟರಾಜ ಕವಿ ಗವಾಯಿ ಗಳವರು ಎಂದು ಚಿತ್ರದುರ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಇ.ಬಾಲಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಬೆಂಗಳೂರು ಹಾಗೂ ಜಿಲ್ಲಾ ಘಟಕ ಚಿತ್ರದುರ್ಗ ಇವರ ವತಿಯಿಂದ ಇಲ್ಲಿನ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಪಂಡಿತ್ ಪಂಚಾಕ್ಷರ ಗವಾಯಿಗಳವರ ಹಾಗೂ ಡಾ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಜಯಂತೋತ್ಸವದ ಉದ್ಘಾಟನೆ ನೆರವೇರಿಸಿ ಮಾತಾಡುತ್ತಾ ಇಂತಹ ಆದರ್ಶದ ಹಾದಿ ತೋರಿದ ಮಹನೀಯರ ನಡೆಯನ್ನ ಮುಂದಿನ ಪೀಳಿಗೆಗೆ ಪರಿಚಯಿಸುವ ತುರ್ತು ತುಂಬಾ ಇದೆ ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಮಂಜುನಾಥ ಅವರು ಅಂಧತ್ವ ಸಾಧನೆಗೆ ಅಡ್ಡಿ ಬಾರದು ಎನ್ನುವ ಮಹತ್ ಸಾಧನೆ ಮಾಡಿದವರು ಈ ಇಬ್ಬರು ಪುಣ್ಯ ಪುರುಷರಾಗಿದ್ದಾರೆ.ಇವರ ಸಾಧನೆ ಇಂದು ಉಳಿದಿದೆಯೆಂದರೆ ಅದು ಕಲಾವಿದರುಗಳಿಂದ ಎಂದ ಅವರು ಕಲಾವಿದರ ಬದುಕಿಗೆ ನೆರವಾಗುವಂತಹ ಕಾರ್ಯವಾಗಬೇಕಿದೆ ಎಂದರು.
ಶರಣ ಸಾಹಿತ್ಯ ಪರಿಷತ್ತ್ ಅಧ್ಯಕ್ಷರಾದ ಕೆ.ಎಂ.ವೀರೇಶ್ ಮಾತನಾಡಿ ಇದೊಂದು ಅರ್ಥ ಪೂರ್ಣ ಕಾರ್ಯಕ್ರಮ ಇದರ ಸಾರಥ್ಯ ವಹಿಸಿಕೊಂಡಿರುವವರು ನಮ್ಮ ಮತ್ತು ರಾಜ್ಯಕ್ಕೆ ಚಿರಪರಿಚಿತ ಹೆಸರು ಪಂಡಿತ್ ತೋಟಪ್ಪ ಉತ್ತಂಗಿ ಅವರು. ಅವರಿಂದ ಮುಂದಿನ ದಿನಗಳಲ್ಲಿ ಸಾಹಿತ್ಯ ಸಂಗೀತ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡುವ ಕೆಲಸ ಆಗುತ್ತದೆ. ನಮ್ಮ ಸಹಕಾರ, ಬೆಂಬಲ ಇದ್ದೇ ಇರುತ್ತದೆ. ತೋಟಪ್ಪ ಸಾಧನೆಗೆ ಪ್ರಶಸ್ತಿ ಪುರಸ್ಕಾರಗಳು ಲಭಿಸಲಿ ಎಂದು ಆಶಿಸುತ್ತೇನೆಂದರು.