ಕೊಟ್ಟ ಮಾತು ತಪ್ಪಲಿಲ್ಲ ಡಿಸಿ ಕವಿತಾ ಎಸ್.ಮನ್ನಿಕೇರಿ
ಕಣಕುಪ್ಪೆ ಗ್ರಾಮಕ್ಕೆ ಬಸ್ ಸೌಲಭ್ಯ.
1 min read
ಭರವಸೆ ಈಡೇರಿಸಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
ಕಣಕುಪ್ಪೆ ಗ್ರಾಮಕ್ಕೆ ಬಸ್ ಸೌಲಭ್ಯ
ಚಿತ್ರದುರ್ಗ, ಮಾರ್ಚ್.05:
ಮೊಳಕಾಲ್ಮುರು ತಾಲ್ಲೂಕಿನ ಗಡಿಗ್ರಾಮ ಕಣಕುಪ್ಪೆ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, ತಹಶೀಲ್ದಾರ್ ಹಾಗೂ ಪ್ರೊಬೇಷನರಿ ಎ.ಸಿ.ಮಾರುತಿ ಬ್ಯಾಕೋಡ್ ಅವರು ಶುಕ್ರವಾರ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಸರ್ಕಾರದ ನಿರ್ದೇಶನದಂತೆ ಈಚೆಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಕಣಕುಪ್ಪೆ ಗ್ರಾಮದಲ್ಲಿ ಮೊದಲ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮದ ಬಹುಮುಖ್ಯ ಬೇಡಿಕೆಯಾದ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳು ಮಾರ್ಚ್ ಮಾಹೆಯಿಂದ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಈಗ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಬೇಡಿಕೆ ಈಡೇರಿಸಿದ್ದಾರೆ.
ಕಣಕುಪ್ಪೆ ಟು ಬಳ್ಳಾರಿ: ಗಡಿಭಾಗದ ಕಣಕುಪ್ಪೆ ಗ್ರಾಮದಿಂದ ಡಿ.ಹಿರೇಹಾಳ್, ಓಬಳಾಪುರಂ, ರಾಯದುರ್ಗ ಚೆಕ್‍ಫೋಸ್ಟ್, ಹಲಕುಂದಿ, ಮುಂಡರಗಿ ಮಾರ್ಗವಾಗಿ ಬಳ್ಳಾರಿ ತಲುಪಲಿದೆ. ವಿದ್ಯಾರ್ಥಿಗಳ, ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಪ್ರತಿ ನಿತ್ಯವೂ ಮುಂಜಾನೆ ಹಾಗೂ ಮಧ್ಯಾಹ್ನದ ವೇಳೆ ಎರಡು ಬಾರಿ ಬಸ್ ಸಂಚಾರ ಮಾಡಲಿದೆ.
ಕಣಕುಪ್ಪೆ ಗ್ರಾಮಕ್ಕೆ ಯಾವುದೇ ಬಸ್‍ಗಳು ಬಾರದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಈಗ ಈ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಾರ್ಚ್ 5 ರಂದು ಗ್ರಾಮಕ್ಕೆ ಬಂದ ಬಸ್‍ಗೆ ತಳಿರು ತೋರಣಗಳಿಂದ ಸಿಂಗರಿಸಿ, ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮೊಳಕಾಲ್ಮುರು ತಹಶೀಲ್ದಾರ್ ಹಾಗೂ ಪ್ರೊಬೇಷನರಿ ಎ.ಸಿ ಮಾರುತಿ ಬ್ಯಾಕೋಡ್, ಡಿಪೋ ಮ್ಯಾನೇಜರ್ ಶಿವಪ್ರಕಾಶ್, ಟಿ.ಸಿ. ಯರ್ರಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಪ್ಪ, ಕಣಕುಪ್ಪೆ ಗ್ರಾಮದ ಮುಖಂಡರಾದ ನರಸಣ್ಣ, ನಾಗರಾರ್ಜುನ, ರಾಜಾ, ಸಣ್ಣಜೋಗಪ್ಪ ಹಾಗೂ ಗ್ರಾಮಸ್ಥರು, ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.