September 16, 2024

Chitradurga hoysala

Kannada news portal

ಅಂತರ್ಜಲ ಹೆಚ್ಚಿಸಲು ಶ್ರಮಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ

1 min read

ಚಿತ್ರದುರ್ಗ,ಮಾರ್ಚ್05:
ಮಳೆ ಬಿದ್ದ ಸಂದರ್ಭದಲ್ಲಿ ಮಳೆ ನೀರು ಸಂಗ್ರಹಿಸುವುದರ ಮೂಲಕ ಪ್ರತಿಯೊಬ್ಬರು ನಿತ್ಯದ ಬಳಕೆಗೆ ಮಳೆ ನೀರು ಬಳಕೆ ಮಾಡಿ ಮಳೆ ನೀರು ಇಂಗಿಸುವ ಮೂಲಕ ಅಂತರ್ಜಲ ಹೆಚ್ಚಿಸಿ  ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
 ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಯುವ ಕಾರ್ಯಕ್ರಮಗಳ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರು ಅತ್ಯಮೂಲ್ಯ ವಸ್ತುವಾಗಿದೆ.  ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಮಳೆ ನೀರು ಸಂಗ್ರಹದ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಿ, ದಿನ ನಿತ್ಯದ ಬಳಕೆಗೆ ಮಳೆ ನೀರು ಬಳಸಬೇಕು ಎಂದು ತಿಳಿಸಿದರು.
 ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಪುನಶ್ವೇತನಗೊಳಿಸಲು ಇಂಗುಗುಂಡಿ, ಬಾವಿಗಳ ಅಥವಾ ಕೊಳವೆಬಾವಿಗಳ ಮೂಲಕ ಭೂಮಿಯಲ್ಲಿ ಮಳೆ ನೀರು ಇಂಗುವಂತೆ ಮಾಡಬೇಕು ಎಂದು ಸಲಹೆ ನೀಡಿದ ಅವರು, ಅಂತರ್ಜಲ ಮಟ್ಟ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನೆಹರು ಯುವಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ಎನ್.ಸುಹಾಸ್ ಮಾತನಾಡಿ, ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ರಾಷ್ಟ್ರೀಯ ಜಲಮಿಷನ್, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ಕ್ಯಾಚ್ ದಿ ರೈನ್ ಅಭಿಯಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಡಿಸೆಂಬರ್ 21ರಂದು ಅಭಿಯಾನ ಪ್ರಾರಂಭವಾಗಿದೆ ಎಂದರು.
 ಜನರಲ್ಲಿ ಜಲಸಂರಕ್ಷಣೆ, ನೀರಿನ ಮಿತ ಬಳಕೆ, ಮಳೆ ನೀರು ಕೊಯ್ಲುವಿನ ಬಗ್ಗೆ, ಮಳೆ ನೀರಿನ ಮಹತ್ವದ ಹಾಗೂ ಅದರ ಅನುಕೂಲ, ಹಸರೀಕರಣ ಕುರಿತು ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಹಾಗೂ ಮಳೆ ಬಂದಾಗ ಮಳೆ ನೀರು ಸಂಗ್ರಹಿಸುವ ಸಲುವಾಗಿ ಚೆಕ್‍ಡ್ಯಾಂಗಳ ನಿರ್ಮಾಣ ಮಾಡುವುದು, ಇಂಗುಗುಂಡಿಗಳ ನಿರ್ಮಾಣ, ಕೆರೆಕಟ್ಟೆಗಳ ಒತ್ತುವರಿ ತೆರವು ಮಾಡುವುದು ಆಮೂಲಕ ನೀರು ಸಂಗ್ರಹಣೆಗೆ ಪ್ರೋತ್ಸಾಹ ನೀಡುವುದು, ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಈ ಅಭಿಯಾನ ಕುರಿತು ಯುವ ಜನರಲ್ಲಿ ಜಲ ಸಂರಕ್ಷಣೆ ಹಾಗೂ ಮಳೆ ನೀರು ಕೊಯ್ಲು ಕುರಿತು ಶಿಕ್ಷಣ ನೀಡುವುದು ಸೇರಿದಂತೆ ಗೋಡೆ ಬರಹ, ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಚಿತ್ರಕಲೆ, ರಸಪ್ರಶ್ನೇ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.    
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಮಳೆ ನೀರು ಸಂಗ್ರಹಕ್ಕಾಗಿ ಯುವಕರಲ್ಲಿ ಅರಿವು ಮೂಡಿಸುವ ಕ್ಯಾಚ್ ದಿ ರೈನ್, ವೇರ್ ಇಟ್ ಫಾಲ್ಸ್, ವೆನ್ ಇಟ್ ಫಾಲ್ಸ್ ಅಭಿಯಾನದ ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಿದರು.
 ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ, ರೆಡ್‍ಕ್ರಾಸ್‍ನ ಕಾರ್ಯದರ್ಶಿ ಮಜರುಲ್ಲಾ, ನಿವಾಸಿ ವೈದ್ಯಾಧಿಕಾರಿ ಆನಂದ ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *