ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ
ಪೊಲೀಸರ ಕೆಲಸ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಎಂ.ಪ್ರೇಮಾತಿ ಮನಗೂಳಿ
1 min read
ಚಿತ್ರದುರ್ಗ,ಮಾರ್ಚ್05:
ಸದಾ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಕೆಲಸದ ಒತ್ತಡ ನಿವಾರಣೆಗೆ ಕ್ರೀಡಾಕೂಟಗಳು ಸಹಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಪ್ರೇಮಾವತಿ ಮನಗೂಳಿ ಹೇಳಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಿಂದ ದೈಹಿಕ ಸಾಮಥ್ರ್ಯ ಹೆಚ್ಚಾಗುತ್ತದೆ ಜೊತೆಗೆ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ. ಕ್ರೀಡೆಯು ದೇಹಕ್ಕೆ ಯಾವುದೇ ರೋಗ-ರುಜನಗಳು ಹರಡದಂತೆ ದೂರಮಾಡುತ್ತದೆ. ಕ್ರೀಡೆಗಳಿಂದ ಮನುಷ್ಯನ ಏಕಾಗ್ರತೆ ಹೆಚ್ಚಾಗುತ್ತದೆ. ಕ್ರೀಡೆಯಿಂದ ಉತ್ತಮ ನಾಯಕತ್ವ ಗುಣ ಬೆಳೆಯುತ್ತದೆ ಎಂದು ತಿಳಿಸಿದರು.
ಪೊಲೀಸರು ಕೆಲಸದ ಒತ್ತಡದ ನಡುವೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಜಾತ್ರೆ, ಹಬ್ಬ, ಸಂಭ್ರಮಗಳಲ್ಲಿ ತಮ್ಮ ಕುಟುಂಬಗಳನ್ನು ಬಿಟ್ಟು ಕರ್ತವ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಒತ್ತಡದಲ್ಲಿಯೂ ಬಿಡುವಿಲ್ಲದೆ ಕೆಲಸ ನಿರ್ವಹಿಸುತ್ತಾರೆ ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ವಾರ್ಷಿಕ ಕ್ರೀಡಾಕೂಟಗಳು ತುಂಬಾ ಅವಶ್ಯಕ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಗೆಲುವು ಸಾಧಿಸಿದ ವಿಜೇತರಿಗೆ ಬಹುಮಾನ ಸಿಗುತ್ತದೆ. ಆದರೆ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ, ಕ್ರೀಡೆ ವೀಕ್ಷಣೆ ಮಾಡುವ ಎಲ್ಲರಿಗೂ ಬಹುಮಾನ ಪಡೆದಷ್ಟೇ ಸಂತಸವಾಗುತ್ತದೆ. ಪೊಲೀಸ್ ಇಲಾಖೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡತ್ತಾ ಬಂದಿದೆ ಎಂದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಂತೋಷದಿಂದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ, ಯಾವುದೇ ಅಹಿತಕರ ಘಟನೆಗೆ ಅನುವು ಮಾಡಿಕೊಡದೆ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಕ್ರೀಡಾಕೂಟದಲ್ಲಿ ಒಟ್ಟು ಐದು ತಂಡಗಳು ಮತ್ತು ಒಂದು ವಾದ್ಯವೃಂದ ಪಥಸಂಚಲನದಲ್ಲಿ ಭಾಗವಹಿಸಿದ್ದವು. ಆರ್.ಎಸ್.ಐ ವಿನೋದ್ ರಾಜ್ ನೇತೃತ್ವದ ಡಿ.ಎ.ಆರ್ ಚಿತ್ರದುರ್ಗ ತಂಡ, ಪಿಎಸ್.ಐ ಸುರೇಶ್ ನೇತೃತ್ವದ ಚಿತ್ರದುರ್ಗ ಉಪವಿಭಾಗ ತಂಡ, ಪಿಎಸ್.ಐ ಟಿ.ಎಂ ನಾಗರಾಜು ನೇತೃತ್ವದ ಹಿರಿಯೂರು ಉಪವಿಭಾಗ ತಂಡ, ಪಿಎಸ್.ಐ ಹೆಚ್. ಮಾರುತಿ ನೇತೃತ್ವದ ಚಳ್ಳಕರೆ ಉಪವಿಭಾಗ ತಂಡ, ಪಿ.ಎಸ್.ಐ ರುಕ್ಕಮ್ಮ ಮಹಿಳಾ ತುಕಡಿ ತಂಡ ಹಾಗೂ ಎ.ಹೆಚ್.ಸಿ ಬ್ಯಾಂಡ್ ಮಾಸ್ಟರ್ ಸಿ ಪಾಂಡುರಂಗ ನೇತೃತ್ವದ ವಾದ್ಯ ವೃಂದ ಪಥಸಂಚಲನದಲ್ಲಿ ಭಾಗವಹಿಸಿದ್ದವು.
ಕ್ರೀಡಾಕೂಟದಲ್ಲಿ ಪುರುಷ ಸಿಬ್ಬಂದಿಗಳಿಗೆ 1500 ಮೀಟರ್ ಓಟ, ಉದ್ದ ಜಿಗಿತ, ಗುಂಡು ಎಸೆತ, ಡಿಸ್ಕಸ್ ಥ್ರೋ, ಎತ್ತರ ಜಿಗಿತ, 400 ಮೀಟರ್ ಓಟ, 100 ಮೀಟರ್ ಓಟ ಸ್ಪರ್ಧೆಗಳು ನಡೆದವು.
ಮಹಿಳಾ ಸಿಬ್ಬಂದಿಗಳಿಗೆ ಉದ್ದ ಜಿಗಿತ, ಗುಂಡು ಎಸೆತ, 200 ಮೀಟರ್ ಓಟ, 400 ಮೀಟರ್ ವೇಗದ ನಡಿಗೆ, ಪಿಎಸ್‍ಐ ಅಧಿಕಾರಿಗಳಿಗೆ ಗುಂಡು ಎಸೆತ, 100 ಮೀಟರ್ ಓಟ, 400 ಮೀ ಓಟ, ಉದ್ದ ಜಿಗಿತ, ಡಿಸ್ಕಸ್ ಥ್ರೋ, ಸಿಪಿಐ ಅಧಿಕಾರಿಗಳಿಗೆ 100 ಮೀಟರ್ ಓಟ, 200 ಮೀಟರ್ ಓಟ, ಗುಂಡು ಎಸೆತ, ಸ್ಲೋ ಸೈಕ್ಲಿಂಗ್ ಹಾಗೂ ಡಿವೈಎಸ್‍ಪಿ ಅಧಿಕಾರಿಗಳಿಗೆ ಕಾರ್ಕ್‍ಬಾಲ್‍ಥ್ರೋ, ಗುಂಡು ಎಸೆತ, 100 ಮೀಟರ್ ಓಟ, ಮತ್ತು ಪುರುಷ ಸಿಬ್ಬಂದಿಗಳಿಗೆ ಕಬ್ಬಡಿ, ಟಗ್ ಆಫ್ ವಾರ್, ವಾಲಿಬಾಲ್ ಪಂದ್ಯಾವಳಿಗಳು ನಡೆದವು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ ನಂದಗಾವಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಾಪಣ್ಣ, ಹಿರಿಯೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ರೋಷನ್‍ಜಮೀರ್, ಎಪಿಸಿ ನಾಗರಾಜು, ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.