March 3, 2024

Chitradurga hoysala

Kannada news portal

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಟಾನಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ.

1 min read

ಚಿತ್ರದುರ್ಗ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಟಾನಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಎನ್.ಮೂರ್ತಿ ಸ್ಥಾಪಿತ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಪರಿಶಿಷ್ಟ ಜಾತಿಗೆ ನೀಡಲಾಗಿರುವ ಶೇ.೧೫ ರಷ್ಟು ಮೀಸಲಾತಿ ೧೦೧ ಅಸ್ಪೃಶ್ಯ ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗಿಲ್ಲ. ಅದಕ್ಕಾಗಿ ಮೂರು ದಶಕಗಳಿಂದಲೂ ಹೋರಾಟ ನಡೆಯುತ್ತಿದ್ದು, ೨೦೦೪ ರಲ್ಲಿ ನೇಮಕವಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂಟು ವರ್ಷ ಕಳೆದರೂ ಇನ್ನು ಯತಾವಥಾವತ್ತಾಗಿ ಜಾರಿಗೊಳಿಸಿಲ್ಲ. ರಾಜ್ಯ ಸರ್ಕಾರ ವರದಿಯನ್ನು ಅಂಗೀಕರಿಸಿ ಅನುಷ್ಟಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.ಹಿಂದುಳಿದ ಆಯೋಗದ ಕಾಂತರಾಜ್ ವರದಿಯನ್ನು ಬಹಿರಂಗಗೊಳಿಸಿ ಜಾತಿವಾರು ಮೀಸಲಾತಿ ವಿಂಗಡಣೆಯಾಗಲಿ. ರಾಜ್ಯ ಸರ್ಕಾರ ಮೀಸಲಾತಿಯನ್ನು ಶೇ.೫೦ ರಿಂದ ೭೦ ಕ್ಕೇರಿಸಿ ಸಂವಿಧಾನದ ೯ ನೇ ಷೆಡ್ಯೂಲ್‌ಗೆ ಸೇರಿಸಬೇಕು. ಎಸ್ಸಿಪಿ ಮತ್ತು ಟಿಎಸ್ಪಿ ಕಾಯ್ದೆಯ ಕಲಂ ೭(ಡಿ)ಯನ್ನು ರದ್ದು ಮಾಡುವ ಮೂಲಕ ಪರಿಶಿಷ್ಟರ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸುವುದು ನಿಲ್ಲಬೇಕು.ಆದಿಜಾಂಬವ ಅಭಿವೃದ್ದಿ ನಿಗಮಕ್ಕೆ ಪ್ರತ್ಯೇಕ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಬೇಕು.ಸುಪ್ರೀಂಕೋರ್ಟ್ ತೀರ್ಪಿನಿಂದ ಪರಿಶಿಷ್ಟರ ಭೂ ಪರಬಾರೆ ಕಾಯ್ದೆಯ ಆಶಯಕ್ಕೆ ಧಕ್ಕೆ ಉಂಟಾಗಿರುವುದರಿಂದ ರಾಜ್ಯ ಸರ್ಕಾರ ಪಿ.ಟಿ.ಸಿ.ಎಲ್. ಕಾಯ್ದೆಗೆ ಸಮಗ್ರ ತಿದ್ದುಪಡಿ ತಂದು ಭೂಮಿ ಕಳೆದುಕೊಳ್ಳುತ್ತಿರುವ ಪರಿಶಿಷ್ಟರಿಗೆ ಕಾನೂನು ರಕ್ಷಣೆ ಒದಗಿಸಬೇಕು.ರಾಜ್ಯಾದ್ಯಂತ ಸರ್ಕಾರಿ ಜಮೀನಿನಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಭೂರಹಿತರ ಭೂಮಿ ಸಕ್ರಮಗೊಳಿಸಿ ಹಕ್ಕುಪತ್ರಗಳನ್ನು ನೀಡಬೇಕು.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಮೂರು ಕರಾಳ ಕಾಯಿದೆಗಳನ್ನು ಹಿಂದಕ್ಕೆ ಪಡೆಯಬೇಕು.೨೦೨೦-೨೧ ರ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಜನಸಂಖ್ಯೆ ಆಧರಿಸಿ ಅಭಿವೃದ್ದಿ ಹೆಚ್ಚು ಹಣ ಮಂಜೂರು ಮಾಡುವಂತೆ ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಿ.ಹೆಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಯಣ್ಣ ಸಾಗಲಗಟ್ಟೆ, ಬೆಂಗಳೂರು ವಿಭಾಗೀಯ ಸಮಿತಿ ಕಾರ್ಯಾಧ್ಯಕ್ಷ ನೇಹ ಮಲ್ಲೇಶ್, ಹೆಚ್.ಭೀಮಣ್ಣ, ಹೆಚ್.ಚನ್ನಿಗರಾಮಯ್ಯ, ರಂಗಸ್ವಾಮಿ, ಕೆ.ರಾಜಣ್ಣ ಸೇರಿದಂತೆ ಇತರೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *