ಥೇಟ್ ಶಾಲಾ ಶಿಕ್ಷಕಿಯರ ಅನುಭವ ಪಡೆದ SSLC ಮಕ್ಕಳು.
1 min read ಚಿತ್ರದುರ್ಗ: ಸಿರಿಗೆರೆ ಸಮೀಪದ ಕಡ್ಲೇಗುದ್ದು ಪ್ರೌಢಶಾಲೆ ಸದಾ ಹೊಸತನ ಹಾಗೂ ಕ್ರಿಯಾಶೀಲ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಮಾದರಿ ಶಾಲೆಯಾಗಿದೆ.
ಇಂದು ಸಹಾ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ವಿದ್ಯಾರ್ಥಿನಿಯರನ್ನೇ ಶಿಕ್ಷಕರನ್ನಾಗಿಸಿ ಗ್ರಾಮೀಣ ಭಾಗದ ಹಿಂದುಳಿದ ಜನಾಂಗದ ಬಾಲಕಿಯರಲ್ಲಿ ಆತ್ಮವಿಶ್ವಾಸ, ವಿದ್ಯಾಭ್ಯಾಸದಿಂದ ಏನು ಬೇಕಾದರೂ ಸಾಧಿಸುವ ಛಲ ಮೂಡಿಸುವ ನಿಟ್ಟಿನಲ್ಲಿ ಅವರ ಮನೋಸ್ಥೈರ್ಯ ಹೆಚ್ಚಿಸುವ ಹಿನ್ನೆಲೆಯಲ್ಲಿ ವಿನೂತನ ಕಾರ್ಯಕ್ರಮಕ್ಕೆ ಶಾಲೆಯು ಸಾಕ್ಷಿಯಾಗಿದೆ.
ಬೆಳಿಗ್ಗೆ 9.40 ರಾದರೂ ಶಾಲೆಯ ಮುಖ್ಯಶಿಕ್ಷಕರಾಗಲಿ, ಸಹಶಿಕ್ಷಕರಾಗಲಿ ಶಾಲಾವರಣದಲ್ಲಿ ಕಾಣಿಸದೇ ಪೋಷಕರು, ವಿದ್ಯಾರ್ಥಿಗಳಲ್ಲಿ ಗಾಬರಿ, ಆತಂಕ ಮನೆಮಾಡಿ ಗೊಂದಲದ ವಾತಾವರಣ ಮೂಡಿತು. ಏನು ಮಾಡಬೇಕೆಂದು ದಿಕ್ಕುತೋಚದೆ ಸುಮ್ಮನೇ ಕುಳಿತಿದ್ದರು. ಸರಿಯಾಗಿ 9.50 ಕ್ಕೆ ಕಾರಿನಲ್ಲಿ ಬಂದಿಳಿದ ಹೊಸಶಿಕ್ಷಕಿಯರು ಮುಖ್ಯಶಿಕ್ಷಕರ ಕೊಠಡಿ ತೆರೆದು ಶಿಕ್ಷಕರ ಸಭೆಯನ್ನು ನಡೆಸಿ ಬೆಲ್ ಮಾಡಿಸಿ ಪ್ರಾರ್ಥನೆ ಮಾಡಿಸಿದ್ದನ್ನು ನೋಡಿ ನೆರೆದಿದ್ದವರಲ್ಲಿ ಸೋಜಿಗವನ್ನು ಉಂಟುಮಾಡಿತು.
ಸುಮಾರು 194 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಇಡೀ ಶಾಲೆಯ ನಿರ್ವಹಣೆಯನ್ನು 10ನೇ ತರಗತಿಯ ಬಾಲಕಿಯರು ದಿನವಿಡೀ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಎಲ್ಲರಾ ಗಮನ ಸೆಳೆದಿದ್ದಾರೆ.
ಶಿಕ್ಷಕರ ಪದವಿ ಪೂರೈಸಿದರೂ ಶಾಲಾಡಳಿತವನ್ನು ನಿರ್ವಹಿಸಲು ಹಿಂಜರಿಯುವ ಕಾಲಘಟ್ಟವಿದೆ. ಇಂತಹ ವಿಷಮ ಪರಿಸ್ಥಿಯಲ್ಲಿ ಮುಂಚಿತವಾಗಿ ಮುಖ್ಯಶಿಕ್ಷಕರು ಕೆಲವೊಂದು ಮಾನದಂಡಗಳಡಿಯಲ್ಲಿ ಎಂಟು ವಿದ್ಯಾರ್ಥಿನಿಯರನ್ನು ಆಯ್ಕೆಮಾಡಿದ್ದರು. ಈ ವಿದ್ಯಾರ್ಥಿನಿಯರು ಯಾವುದೇ ಅಳುಕಿಲ್ಲದೇ, ಆತ್ಮವಿಶ್ವಾಸದಿಂದ, ಯಾರಿಗೂ ಅಂಜದೆ ಮಹಿಳಾ ದಿನಾಚರಣೆಯ ಅಂಗವಾಗಿ ಇಡೀ ತಮ್ಮ ಶಾಲೆಯನ್ನೇ ತಾವೇ ನಿರ್ವಹಿಸಿ ನಾವೂ ಅಬಲೆಯರಲ್ಲ ಸಬಲೆಯರು, ತೊಟ್ಟಿಲು ತೂಗುವ ಕೈ ಚುಕ್ಕಾಣಿಯನ್ನು ಹಿಡಿಯಬಲ್ಲದು ಎಂಬುದನ್ನು ನಿರೂಪಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೊರಗುಳಿದಿದ್ದ ಖಾಯಂ ಶಿಕ್ಷಕರು : ಶಾಲಾ ವೇಳೆಗೆ ಬೆಲ್ ಮಾಡಿಸಿದ ಶಿಕ್ಷಕಿಯರ ತಂಡ ತಮ್ಮ ಮುಖ್ಯಶಿಕ್ಷಕರಂತೆ ದಿನಚರಿಯಂತೆ ಪ್ರಾರ್ಥನೆ ಮಾಡಿಸಿ ದಿನಪತ್ರಿಕೆಗಳ ಮುಖ್ಯಾಂಶಗಳನ್ನು ಓದಿಸಿ, ಸುಭಾಷಿತ ಹೇಳಿಸದರು. ತದನಂತರ ದೈಹಿಕ ಶಿಕ್ಷಕಿ ಚಂದನಾ ಪಥಸಂಚಲನ ಮಾಡಿಸಿ, ಏರೋಬಿಕ್ಸ್ ಕಲಿಸಿದರು. ಮೊದಲೇ ನಿರ್ಧರಿಸಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಮುಖ್ಯಶಿಕ್ಷಕರ ಸೂಚನೆಯಂತೆ ಹೊರಗಡೆ ಇತರೆ ವಿದ್ಯಾರ್ಥಿಗಳಿಗೆ ತಿಳಿಯದಂತೆ ವೀಕ್ಷಿಸುತ್ತಿದ್ದಾರೆ. ಇದ ತಿಳಿಯದ ವಿದ್ಯಾರ್ಥಿಗಳು ಆತಂಕದಲ್ಲಿದ್ದರು.
ಪಥಸಂಚಲನ ಹಾಗೂ ಏರೋಬಿಕ್ಸ್ ನಂತರ ಶಾಲಾವೇಳಾಪಟ್ಟಿಯಂತೆ ಬಾಲಕಿಯರೇ 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ಪಾಠ ಬೋಧನೆ ಮಾಡಿ ಆತ್ಮವಿಶ್ವಾಸದ ಹೆಜ್ಜೆ ಹಿಟ್ಟು ಹೊಸ ಮನ್ವಂತರ ಮೂಡಿಸಿದ್ದಾರೆ.
ಶಿಕ್ಷಕರ ಸಭೆ : ಇಡೀ ದಿನದ ಪಾಠ ಬೋಧನೆಯ ನಂತರ ಮುಖ್ಯಶಿಕ್ಷಕಿ ಜವಬ್ದಾರಿ ಹೊತ್ತಿದ್ದ ಬಾಲಕಿ ಪವಿತ್ರಾ ಮುಖ್ಯಶಿಕ್ಷಕರ ಆಸನದಲ್ಲೇ ಕುಳಿತು ಶಿಕ್ಷಕಿಯರಾಗಿ ಕಾರ್ಯನಿರ್ವಹಿಸಿದ ಗೆಳತಿಯನ್ನು ಕರೆದು ಶಾಲೆಯ ಪ್ರಗತಿಯ ಬಗ್ಗೆ ಅನುಷ್ಟಾನದ ಬಗ್ಗೆ ಚರ್ಚೆ ನೆಡೆಸಿದ್ದು ಗಮನ ಸೆಳೆದಿದೆ.
ಶಾಲಾ ವಿರಾಮದಲ್ಲಿ ಊಟದ ವೇಳೆಯಲ್ಲಿ ತಾವೂ ಸಹ ಜೊತೆಯಲ್ಲಿಯೇ ಕುಳಿತು ಸಹಭೋಜನ ಮಾಡಿದ ಪರಿಗೆ ಖಾಯಂ ಶಿಕ್ಷಕರು ಮೂಕವಿಸ್ಮಿತರಾದರು.
ಶಾಲಾ ಮುಖ್ಯಶಿಕ್ಷಕಿಯಾಗಿ ಪವಿತ್ರಾ, ವಿಜ್ಞಾನ ಶಿಕ್ಷಕಿಯಾಗಿ ಕಾವ್ಯ, ಕನ್ನಡ ಶಿಕ್ಷಕಿಯಾಗಿ ಸೃಷ್ಟಿ, ಇಂಗ್ಲೀಷ್ ಶಿಕ್ಷಕಿಯಾಗಿ ದೀಕ್ಷಿತಾ, ಹಿಂದಿ ಶಿಕ್ಷಕಿಯಾಗಿ ಸುಜಾತ, ಗಣಿತ ಶಿಕ್ಷಕಿಯಾಗಿ ಅನು, ಸಮಾಜ ಶಿಕ್ಷಕಿಯಾಗಿ ಸುಚಿತ್ರಾ ಹಾಗೂ ದೈಹಿಕ ಶಿಕ್ಷಕರಾಗಿ ಚಂದನಾ ಶಾಲೆಯ ಚುಕ್ಕಾಣಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು ಎಲ್ಲರಾ ಕಣ್ಣು ತೆರಸಿದೆ. ಹೆಣ್ಣುಮಕ್ಕಳಿಗೆ ಅವಕಾಶ ನೀಡದೆ ಸತಾಯಿಸುವ ಈ ವ್ಯವಸ್ಥಯಲ್ಲಿ ಗ್ರಾಮೀಣ ಭಾಗದ ಶಾಲೆಯ ಈ ನವೀನ ಪ್ರಯೋಗವು ಮನಸೂರೆಗೊಂಡಿದೆ.
ಕಾರ್ಯಕ್ರಮವನ್ನು ವೀಕ್ಷಿಸಿದ ಗ್ರಾಮಪಂಚಾಯತಿ ಸದಸ್ಯರಾದ ಕುಮಾರ್, ಮಾರುತಿ, ತಿಪ್ಪೇಸ್ವಾಮಿ,ಸತೀಶ್‍ರವರು ಶಾಲಾ ಮುಖ್ಯಶಿಕ್ಷಕರ ಈ ಕಾರ್ಯಕ್ಕೆ ಹಾಗೂ ವಿದ್ಯಾರ್ಥಿನಿಯರು ಕಾರ್ಯನಿರ್ವಹಿಸಿದ್ದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ವಿದ್ಯಾರ್ಥಿಜೀವನದಲ್ಲಿ ಮರೆಯಲಾಗದ ಕ್ಷಣ. ಮುಖ್ಯಶಿಕ್ಷಕರ ಆಸನದಲ್ಲಿ ಕುಳಿತುಕೊಳ್ಳಲು ಭಯವಾಗುತ್ತಿತ್ತು. ಆದರೂ ನಮ್ಮ ಮುಖ್ಯಶಿಕ್ಷಕರು ನಮ್ಮಲ್ಲಿ ನಂಬಿಕೆ ಇಟ್ಟು ನಮಗೆ ನೀಡಿದ್ದ ಜವಬ್ದಾರಿ ನಿರ್ವಹಿಸಲು ನಮ್ಮೆಲ್ಲಾ ಗೆಳತಿಯರು ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿದ್ದರು. ಇಂತಹ ಸುವರ್ಣಾವಕಾಶ ನೀಡಿದ ನಮ್ಮ ಶಿಕ್ಷಕರಿಗೆ ಧನ್ಯವಾದಗಳು
ಪವಿತ್ರಾ ಮುಖ್ಯಶಿಕ್ಷಕಿಯಾಗಿದ್ದ ವಿದ್ಯಾರ್ಥಿ
ಪ್ರಧಾನ ಮಂತ್ರಿಯವರ ‘ಭೇಟಿ ಪಡಾವೋ-ಭೇಟಿ ಬಚಾವೋ’ ಆಶಯದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಲು ಪೋಷಕರಲ್ಲಿ ಜಾಗೃತಿ ಮೂಡಿಸಲು ಮಹಿಳಾ ದಿನಾಚರಣೆಯಂದು ಶಾಲೆಯ ವಿದ್ಯಾರ್ಥಿನಿಯರಿಗೆ ಚುಕ್ಕಾಣಿ ನೀಡಲು ಮಹಿಳಾ ದಿನಾಚರಣೆ ಸ್ಪೂರ್ತಿಯಾಗಿದೆ. ನಮ್ಮ ವಿದ್ಯಾರ್ಥಿನಿಯರು ನಮ್ಮ ಹೆಮ್ಮೆ ಅವರು ಕಾರ್ಯ ನಿರ್ವಹಿಸಿದ ಪರಿ ಶ್ಲಾಘನೀಯ
ಮಹೇಶ್ ಮುಖ್ಯ ಶಿಕ್ಷಕರು