May 29, 2024

Chitradurga hoysala

Kannada news portal

ಎರಡನೆ ಹಂತದ ಕೋವಿಡ್ ಬಗ್ಗೆ ಜನರಲ್ಲಿ ಎಚ್ಚರವಿರಲಿ: ಪಂಡಿತಾರಾಧ್ಯ ಶ್ರೀ

1 min read

ಎರಡನೆ ಹಂತದ ಕೋವಿಡ್ ಬಗ್ಗೆ ಜನರಲ್ಲಿ ಎಚ್ಚರವಿರಲಿ: ಪಂಡಿತಾರಾಧ್ಯ ಶ್ರೀ
ಈಗ ಎರಡನೆಯ ಹಂತದ ಕೋವಿಡ್ ರೋಗ ತುಂಬಾ ವೇಗವಾಗಿ ಹಬ್ಬುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇದರಿಂದ ರಕ್ಷಿಸಿಕೊಳ್ಳಲು ಜನರು ಜಾಗೃತರಾಗಿರಬೇಕು. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಎಚ್ಚರಿಕೆಯಲ್ಲಿ ತಾವಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆಯಿಂದ ಹೊರಬಂದಾಗ ಮೂಗು, ಮುಖ ಮುಚ್ಚಿಕೊಳ್ಳುವ ಹಾಗೆ ಮಾಸ್ಕ್ ಧರಿಸಬೇಕು ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಹೇಳಿದರು.
ಸಿರಿಗೆರೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ವಿರುದ್ಧದ ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಶ್ರೀಗಳು ಚುಚ್ಚುಮದ್ದು ಪಡೆದುಕೊಂಡ ಬಗ್ಗೆ ತಮ್ಮ ಅನುಭವವನ್ನು ವಿವರಿಸಿದರು. ಎಲ್ಲ ರೋಗಗಳಿಗೆ ನೀಡುವಂತೆಯೇ ಈ ಚುಚ್ಚುಮದ್ದು ನೀಡಲಾಗುತ್ತಿದ್ದು ನಾಗರಿಕರು ಗಾಬರಿಗೊಳ್ಳದೆ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದರು.
ರೋಗಕ್ಕಾಗಿ ಹೆದರದೆ ಸರ್ಕಾರ ನೀಡುತ್ತಿರುವ ಎಚ್ಚರಿಕೆಯನ್ನು ಪರಿಪಾಲಿಸಿ ನಮ್ಮ ನಮ್ಮ ಕಾಯಕ ಮಾಡುತ್ತಿರಬೇಕು. ಗ್ರಾಮೀಣ ಪ್ರದೇಶದ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಹಾಗಂತ ಆರೋಗ್ಯದ ಬಗ್ಗೆ ಉದಾಸೀನ ಮಾಡಬಾರದು. ದುಶ್ಚಟಗಳಿಗೆ ಬಲಿಯಾಗದೆ ಸತ್ವಯುತ ಆಹಾರ ಸೇವನೆ ಮಾಡಿ ಕಾಯಕಶೀಲರಾದರೆ ರೋಗವನ್ನು ಎದುರಿಸುವ ಶಕ್ತ ಬರುತ್ತದೆ ಎಂದು ಧೈರ್ಯ ತುಂಬಿದರು. ೬೦ ವಯಸ್ಸು ಮೇಲ್ಪಟ್ಟವರು ಆರೋಗ್ಯವಾಗಿದ್ದರೂ ಕೊವಿಡ್‌ಗೆ ಸಂಬAಧಿಸಿದ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕೆಂದು ಕರೆಕೊಟ್ಟರು. ಈಗ ಸರ್ಕಾರ ಎಲ್ಲ ಸರ್ಕಾರಿ ಆಸ್ಪತ್ರೆ ಗಳಲ್ಲೂ ಚುಚ್ಚುಮದ್ದು ಹಾಕಿಸಲು ವ್ಯವಸ್ಥೆ ಮಾಡಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ಸಹ ಅಭಿನಂದಿಸಿದರು. ಕೋವಿಡ್ ಶುಶ್ರೂಷೆ ನೀಡುತ್ತಿರುವ ವೈದ್ಯರು, ಸಿಬ್ಬಂದಿಯವರನ್ನು ಈ ಸಂದರ್ಭದಲ್ಲಿ ಶ್ರೀಗಳು ಅಭಿನಂದಿಸಿದರು.
ಆಸ್ಪತ್ರೆಯ ವೀಕ್ಷಣೆ:
ಚುಚ್ಚುಮದ್ದು ಪಡೆದುಕೊಂಡ ನಂತರ ಶ್ರೀಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಆಸಕ್ತಿಯಿಂದ ವೀಕ್ಷಿಸಿದರು. ಕೋವಿಡ್ ಸಂದರ್ಭದಲ್ಲಿ ಗಂಟಲು ದ್ರವ್ಯ ತೆಗೆಯಲು ಸಜ್ಜುಗೊಳಿಸಲಾಗಿದ್ದ ಪ್ರಯೋಗಾಲಯಕ್ಕೂ ಭೇಟಿ ನೀಡಿದರು. ಸಮುದಾಯ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿಕೊಂಡಿರುವುದರ ಬಗ್ಗೆ ಶ್ರೀಗಳು ಸಂತೋಷ ವ್ಯಕ್ತಪಡಿಸಿ ಇಲ್ಲಿ ದೊರೆಯುತ್ತಿರುವ ಚಿಕಿತ್ಸೆಗಳನ್ನು ಸುತ್ತಲಿನ ನಾಗರಿಕರು ಬಳಸಿಕೊಳ್ಳುವಂತಾಗಲಿ ಎಂದರು.
ಸಿರಿಗೆರೆ ಹಾಲು ಸಹಕಾರ ಸಂಘದ ಅಧ್ಯಕ್ಷ ಬಿ.ಎನ್. ಯೋಗಿಶ್ ಶ್ರೀಗಳವರ ಸಂಗಡ ಇದ್ದರು. ಸಮುದಾಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಶ್ರೀಗಳಿಗೆ ಈಗ ನೀಡಲಾಗುತ್ತಿರುವ ಚುಚ್ಚುಮದ್ದಿನ ಕುರಿತು ವಿವರಣೆ ನೀಡಿದರು.
ಚಿತ್ರ:
ಸಿರಿಗೆರೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಕೋವಾಶೀಲ್ಡ್ ಚುಚ್ಚುಮದ್ದು ಪಡೆದುಕೊಂಡರು.

About The Author

Leave a Reply

Your email address will not be published. Required fields are marked *