ಅಲೆಮಾರಿ/ಅರೆಅಲೆಮಾರಿ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯ ರೂಪಿಸಿ
1 min readಚಿತ್ರದುರ್ಗ ಮಾ. ೧೭
ಅಲೆಮಾರಿ /ಅರೆಅಲೆಮಾರಿ ಜನಾಂಗದ ಕುಂದು ಕೊರೆತೆಗಳು ಮತ್ತು ಅಭಿವೃದ್ಧಿ ನಿಗಮದ ಮೂಲಭೂತ ಸೌಕರ್ಯಗಳ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾಡುಗೊಲ್ಲರ ಕ್ಷೇಮಾಭೀವೃದ್ದಿ ಸಂಘದ ರಾಜ್ಯಾಧ್ಯಕ್ಷ ಶಿವುಯಾದವ್ ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ನಿಗಮ ನಿಯಮಿತದ ಅಧ್ಯಕ್ಷರಾದ ರವೀಂದ್ರಶೆಟ್ಟಿಯವರಿಗೆ ಮನವಿ ಮಾಡಿದ ಶಿವುಯಾದವ್, ಕರ್ನಾಟಕ ಸರ್ಕಾರವು ಕಾಡುಗೊಲ್ಲರನ್ನು ಅಧಿಕೃತ ಜಾತಿ ಪಟ್ಟಿಗೆ ಸೇರಿದ್ದು, ಸದರಿ ಕಾಡುಗೊಲ್ಲ ಪದವನ್ನು ಅಲೆಮಾರಿ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು. ಅಲೆಮಾರಿ / ಅರೆಅಲೆಮಾರಿ ಅಭಿವೃದ್ಧಿ ನಿಗಮದಿಂದ ವಸತಿ ಯೋಜನೆಯಡಿ ಒಂದು ಮನೆಗೆ ರೂ.೧,೨೦,೦೦೦/-ಗಳನ್ನು ನೀಡುತ್ತಿರುವುದು ದುರಾದೃಷ್ಠಕರ ಈ ಮೊತ್ತವನ್ನು ಇತರೆ ಯೋಜನೆಯಡಿ ನೀಡುವ ಮನೆಗಳಿಗೆ ನೀಡುವಂತೆ ಸಮನಾಗಿ ನೀಡಬೇಕು. ರೂ.೧,೨೦,೦೦೦/-ಕ್ಕೆ ಮನೆಯ ತಳಪಾಯವನ್ನು ಹಾಕಲು ಸಾಧ್ಯವಾಗುವುದಿಲ್ಲ ಆದ್ದರಿಂದ ಹಣವನ್ನು ರೂ.೫,೦೦,೦೦೦/-ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಅಲೆಮಾರಿ / ಅರೆಅಲೆಮಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿವೆ ಮತ್ತು ಮಂಜೂರಾದ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸದೇ ಅಧಿಕಾರಿಗಳು ತಮಗೆ ಸರಿಕಂಡ ಸ್ಥಳದಲ್ಲಿ ಕಾಮಗಾರಿ ಮಾಡಿರುತ್ತಾರೆ. ಮತ್ತೆ ಕೆಲವು ಕಾಮಗಾರಿಗಳನ್ನು ಮಾಡದೆ ಹಣವನ್ನು ಪಡೆದಿರುತ್ತಾರೆ. ಇಂತಹ ಭ್ರಷ್ಟ ಅಧಿಕಾರಿಗಳು ಮತ್ತು ಕಾಮಗಾರಿ ಗುತ್ತಿಗೆ ಪಡೆದವರ ವಿರುದ್ಧ ಸೂಕ್ತ ಕೈಗೊಳ್ಳಬೇಕು. ರಾಜ್ಯದಲ್ಲಿ ಅಲೆಮಾರಿ / ಅರೆಅಲೆಮಾರಿ ವಸತಿ ಸಮಚಯಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಅಲೆಮಾರಿ / ಅರೆಅಲೆಮಾರಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಅಲೆಮಾರಿ / ಅರೆಅಲೆಮಾರಿ ವಸತಿ ಸಮಚಯಗಳನ್ನು ಗುರುತಿಸಿ ಅಂಗನವಾಡಿ, ಕಿರಿಯ ಮತ್ತು ಹಿರಿಯ ಪ್ರಾಥಮಿಕಗಳನ್ನು ಮಂಜೂರು ಮಾಡಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜ್ಯದಲ್ಲಿರುವ ಅಲೆಮಾರಿ / ಅರೆಅಲೆಮಾರಿ ಜನಾಂಗಗಳ ಜನಗಣತಿ ಮಾಡಿ ಸದರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯಕವಿರುವಂತಹ ಕಾರ್ಯಗಳನ್ನು ರೂಪಿಸಿ ಜಾರಿ ಮಾಡಬೇಕು ಎಂದು ನಿಗಮದ ಅಧ್ಯಕ್ಷರನ್ನು ಒತ್ತಾಯಿಸಿದರು.