September 16, 2024

Chitradurga hoysala

Kannada news portal

ಶೇಷಪ್ಪನಹಳ್ಳಿಗೆ ಅಧಿಕಾರಿಗಳ ದಂಡು
ಸರ್ಕಾರದ ಸೌಲಭ್ಯ ಜನರ ಬಳಿಗೆ:ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

1 min read

ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ
*****
ಚಿತ್ರದುರ್ಗ, ಮಾರ್ಚ್20:
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಸರ್ಕಾರದ ವಿನೂತನ ಕಾರ್ಯಕ್ರಮವಾಗಿದ್ದು, ಗ್ರಾಮಸ್ಥರೆಲ್ಲರೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು, ಸರ್ಕಾರದ ಶ್ರಮ ಫಲಪ್ರದವಾಗಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಜಿಲ್ಲಾಡಳಿತ, ಹಿರಿಯೂರು ತಾಲ್ಲೂಕು ಆಡಳಿತ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಶನಿವಾರ ಹಮ್ಮಿಕೊಂಡಿದ್ದ ಹಿರಿಯೂರು ತಾಲ್ಲೂಕಿನ ಶೇಷಪ್ಪನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಪೌತಿಖಾತೆ, ಪಹಣಿ ತಿದ್ದುಪಡಿ, ಪಿಂಚಣಿ ಯೋಜನೆ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ 10 ದಿನಗಳ ಮುಂಚಿತವಾಗಿಯೇ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 83 ಅರ್ಜಿಗಳು ಹಾಗೂ ಇತರೆ ಇಲಾಖೆಗೆ ಸಂಬಂಧಪಟ್ಟಂತೆ 03 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸ್ವೀಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ, ಇತ್ಯಾರ್ಥಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್-19 ಸಾಂಕಾಮ್ರಿಕ ರೋಗ ತಡೆಗಟ್ಟುವ ಉದ್ದೇಶದಿಂದ ಕೋವಿಡ್-19 ಲಸಿಕೆ ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟ ನಾಗರೀಕರು ಹಾಗೂ 45 ರಿಂದ 59 ವರ್ಷದ ಒಳಗಿನ ವಿವಿಧ ರೋಗಗಳಿಂದ ಬಳಲುತ್ತಿರುವವವರಿಗೆ ಲಸಿಕೆ ನೀಡಲಾಗುತ್ತಿದೆ. ಪ್ರತಿಯೊಬ್ಬರು ಲಸಿಕೆಯನ್ನು ಪಡೆಯುವಂತೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ, ಈಗಾಗಲೇ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು, ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುತ್ತದೆ. ಗ್ರಾಮದ ಪ್ರತಿಯೊಬ್ಬರೂ ಕೂಡ ವೈಯಕ್ತಿಕ ಶೌಚಾಲಯ ನಿರ್ಮಾಮಿಸಲು ಅವಕಾಶವಿದ್ದು, ಶೌಚಾಲಯವಿಲ್ಲದವರು ಅರ್ಜಿ ಸಲ್ಲಿಸಬೇಕು ಎಂದರು.  ಮುಂಬರುವ ದಿನಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ದುಡಿಯೋಣ ಬಾ ಅಭಿಯಾನ  ಆಯೋಜಿಸಲಾಗುತ್ತಿದ್ದು, ಎಲ್ಲರೂ ಜಾಬ್ ಕಾರ್ಡ್ ಪಡೆಯುವಂತೆ ಸಲಹೆ ನೀಡಿದರು.
ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಬದುನಿರ್ಮಾಣ, ದನದ ಕೊಟ್ಟಿಗೆ ಸೇರಿದಂತೆ  ವೈಯಕ್ತಿಕ ಕಾಮಗಾರಿಗಳಿಗೆ ಅವಕಾಶವಿದೆ. ಸಮುದಾಯ ಕಾಮಗಾರಿಗಳಾದ ಕೆರೆ ಹೂಳೆತ್ತುವುದು, ಶಾಲೆ ಕಾಂಪೌಂಡ್ ನಿರ್ಮಾಣ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ  ಸಂಬಂಧಪಟ್ಟಂತೆ ಬೇಡಿಕೆಗಳನ್ನು ಸಲ್ಲಿಸಿ ಎಂದರು.
ಯಲ್ಲದಕೆರೆ ಗ್ರಾಮ ಪಂಚಾಯತಿ ಸದಸ್ಯ ಶ್ರೀರಂಗ ಮಾತನಾಡಿ, ಯಲ್ಲದಕೆರೆ ಗ್ರಾಮ ಪಂಚಾಯಿತಿಗೆ 18 ಹಳ್ಳಿಗಳು ಸೇರಿವೆ . ಹಾಗಾಗಿ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ಈ ಪಂಚಾಯಿತಿಗೆ ಗ್ರಾಮೀಣ ಅಥವಾ ವಾಣಿಜ್ಯ ಬ್ಯಾಂಕ್ ಶಾಖೆಯನ್ನು ಪ್ರಾರಂಭಿಸಬೇಕು ಮತ್ತು ಹಾಲುಮಾದೇನºಳ್ಳಿ ಗ್ರಾಮವನ್ನು ಹೊಸ ಗ್ರಾಮ ಪಂಚಾಯಿತಿಯನ್ನಾಗಿ ಮಾಡಬೇಕು ಎಂದು ಯಲ್ಲದಕೆರೆ ಗ್ರಾಮ ಪಂಚಾಯಿತಿ ಸಾರ್ವಜನಿಕರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಗ್ರಾಮದಲ್ಲಿಯೇ ಪಡಿತರ ವಿತರಣೆಗೆ ಕ್ರಮ: ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿಯೇ ಪಡಿತರ ವಿತರಣೆಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈ ಮೊದಲು ಶೇಷಪ್ಪನಹಳ್ಳಿ ಗ್ರಾಮಸ್ಥರು ಪಡಿತರ ಪಡೆಯಲು ಹಾಲಮಾದೇನಹಳ್ಳಿ ಗ್ರಾಮಕ್ಕೆ ತೆರಳಿ ಪಡೆತರ ಪಡೆಯಬೇಕಿತ್ತು. ಇದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿತ್ತು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ  ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಗ್ರಾಮದಲ್ಲಿಯೇ  ಪಡಿತರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಹಣಿ ತಿದ್ದುಪಡಿ, ಖಾತೆ ಬದಲಾವಣೆ, ಆಕಾರ ಬಂಧ್ ಪಹಣಿ ಜೋಡಣೆ, ವಿದ್ಯುತ್ ಸಂಪರ್ಕ, ಸಿಸಿ ರಸ್ತೆ ನಿರ್ಮಾಣ, ಕುಡಿಯುವ ನೀರು ಸೇರಿದಂತೆ ವಿವಿಧ ಅರ್ಜಿಗಳನ್ನು ಸ್ವೀಕರಿಸಲಾಯಿತು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 450 ಕ್ಕಿಂತಲೂ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದು ಇಲಾಖೆವಾರು ಹಂಚಿಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಹಿರಿಯೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಿ, ಯಲ್ಲದಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಾಂದಮ್ಮ, ಉಪಾಧ್ಯಕ್ಷ ಜಯಣ್ಣ, ನಗರ ಸಭೆ ಅಧ್ಯಕ್ಷೆ ಶಂಸುನ್ನಿಸ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕರಿಯಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದ್ದರು.

About The Author

Leave a Reply

Your email address will not be published. Required fields are marked *