Recent Posts

October 17, 2021

Chitradurga hoysala

Kannada news portal

ಕಣ್ಮನ ಸೆಳೆಯುವ ವಿಶೇಷ ಕೈಮಗ್ಗ ಮೇಳ: ನವನವೀನ ವಿನ್ಯಾಸವುಳ್ಳ ವಸ್ತ್ರಾಂಜಲಿ ವೈವಿಧ್ಯ..

1 min read

ಉಮಾಪತಿ ಕಲ್ಯಾಣ ಮಂಟಪದಲ್ಲಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ, ಶೇ.20 ರಿಯಾಯಿತಿ ದರದಲ್ಲಿ ಮಾರಾಟ, ಖರೀದಿಗೆ ಎರಡು ದಿನ ಮಾತ್ರ ಬಾಕಿ
ಕಣ್ಮನ ಸೆಳೆಯುವ ವಿಶೇಷ ಕೈಮಗ್ಗ ಮೇಳ: ನವನವೀನ ವಿನ್ಯಾಸವುಳ್ಳ ವಸ್ತ್ರಾಂಜಲಿ ವೈವಿಧ್ಯ
*******
ಚಿತ್ರದುರ್ಗ,ಏಪ್ರಿಲ್08:
ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ಮನಮೋಹಕ ಮತ್ತು ಆಕರ್ಷಕ ಬಣ್ಣಗಳಿಂದ ಕೂಡಿದ ವೈವಿಧ್ಯಮಯ ನವ ನವೀನ ವಿನ್ಯಾಸಗಳುಳ್ಳ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು, ನೈಪುಣ್ಯತೆಯುಳ್ಳ ರಮಣೀಯ ಮೊಳಕಾಲ್ಮುರು ಅಪ್ಪಟ ರೇಷ್ಮೆ ಸೀರೆಗಳು, ಇಳಕಲ್ ಸೀರೆಗಳು, ಡ್ರೆಸ್ ಮೆಟಿರಿಯಲ್ಸ್, ಶಾಲುಗಳು, ಅಂಗಿ, ಕುರ್ತಾ, ಅಂದದ ಕಾಟನ್ ಸೀರೆಗಳು….
ಇವು ನಗರದ ವಿ.ಪಿ.ಬಡಾವಣೆಯ ಅರಣ್ಯ ಇಲಾಖೆಯ ಎದುರಿನ ಕಾಟಮ್ಮ ವೀರನಾಗಪ್ಪ ಸಮುದಾಯ ಭವನದಲ್ಲಿ ನಡೆಯುತ್ತಿರುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ “ವಸ್ತ್ರಾಂಜಲಿ” ವಿಶೇಷ ಕೈಮಗ್ಗ ಮೇಳದಲ್ಲಿ ಕಂಡುಬಂದ ವೈವಿದ್ಯಮಯ ಉತ್ಪನ್ನಗಳು.
ಕೇಂದ್ರ ಪುರಸ್ಕøತ ನ್ಯಾಷನಲ್ ಹ್ಯಾಂಡ್‍ಲೂಮ್ ಡೆವಲೆಪ್‍ಮೆಂಟ್ ಕಾರ್ಯಕ್ರಮದಡಿಯಲ್ಲಿ ಯುಗಾದಿ ಹಬ್ಬದ ಅಂಗವಾಗಿ ಮಾರ್ಚ್ 28 ರಿಂದ ಏಪ್ರಿಲ್ 10 ರವರೆಗೆ ಜಿಲ್ಲಾ ಕೈಮಗ್ಗ ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೈಮಗ್ಗ ನೇಕಾರರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ಉದ್ದೇಶದಿಂದ, ನೇರವಾಗಿ ನೇಕಾರರಿಂದ ಗ್ರಾಹಕರಿಗೆ ಕೈಮಗ್ಗ ಉತ್ಪನ್ನಗಳನ್ನು ತಲುಪಿಸಲು ಮೇಳ ಆಯೋಜಿಸಲಾಗಿದ್ದು, ಕೈಮಗ್ಗ ಉತ್ಪನ್ನಗಳ ಮಾರಾಟಗಾರರಿಗೆ ಒಟ್ಟು 44 ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಮಾರಾಟ ಮೇಳದಲ್ಲಿ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಚಾಮರಾಜನಗರ, ರಾಮನಗರ, ಬಳ್ಳಾರಿ, ಕಲಬುರಗಿ, ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ 16 ಜಿಲ್ಲೆಗಳ ಕೈಮಗ್ಗ ಉತ್ಪನ್ನಗಳ ಮಾರಾಟಗಾರರು ಆಗಮಿಸಿದ್ದಾರೆ.
ಕೋವಿಡ್-19 ಹಿನ್ನಲೆಯಲ್ಲಿ ಕಳೆದ ವರ್ಷ ಮಾರ್ಚ್‍ನಲ್ಲಿ ವಿಶೇಷ ಕೈಮಗ್ಗ ಮೇಳ ಆಯೋಜಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಕೋವಿಡ್-19 ಮುಂಜಾಗ್ರತಾ ಕ್ರಮಗಳಾದ ಮುಖಗವಸು, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಮಾಡಿಕೊಂಡು ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ರಾಜ್ಯ ಸರ್ಕಾರಿಂದ ಶೇ.20ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ರೂ.48 ಲಕ್ಷ ವಹಿವಾಟು: ವಿಶೇಷ ಕೈಮಗ್ಗ ಮೇಳಕ್ಕೆ ಚಾಲನೆ ನೀಡಿದಾಗಿನಿಂದಲೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಮಾರ್ಚ್ 28 ರಿಂದ ಇಲ್ಲಿಯವರೆಗೆ ರೂ.48 ಲಕ್ಷ ವಹಿವಾಟು ನಡೆದಿದೆ. ಮೇಳದಲ್ಲಿ ರಂಗು-ರಂಗಿನ ರೇಷ್ಮೆ ಸೀರೆಗಳಿವೆ. ಸುಮಾರು ರೂ.10,000/-ಗಳ ವರೆಗೂ ರೇಷ್ಮೆ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದೆ. ಹಬ್ಬಗಳು ಇರುವುದರಿಂದ ಟವಲ್, ಬೆಡ್ ಶೀಟ್, ಕರವಸ್ತ್ರ ಸೇರಿದಂತೆ ಕೂರ್ತಾ ಹಾಗೂ ಸೀರೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಸಿಗೆ ಕಾಲವಾಗಿರುವುದರಿಂದ ಕಾಟನ್ ಐಟಂಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.
ಗ್ರಾಹಕರಿಂದ ಉತ್ತಮ ಸ್ಪಂದನೆ: ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಕೈಮಗ್ಗ ನೇಕಾರ ಸಹಕಾರ ಸಂಘಗಳ ನೇಕಾರರಿಂದ ಉತ್ಪಾದಿಸಲ್ಪಟ್ಟ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಕೈಮಗ್ಗ ಜವಳಿ ಇಲಾಖೆ ಉಪನಿರ್ದೇಶಕ ಡಾ.ಶಿವರಾಜ್ ಆರ್. ಕುಲಕರ್ಣಿ ಹೇಳಿದರು.
14 ದಿನಗಳ ವಿಶೇಷ ಕೈಮಗ್ಗ ಮೇಳ-ವಸ್ತ್ರಾಂಜಲಿಗೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡುತ್ತಿದ್ದು, ಇದರಿಂದ ಕೈಮಗ್ಗ ನೇಕಾರರಿಗೆ ಅನುಕೂಲವಾಗಿದೆ. ಕೈಮಗ್ಗ ಉತ್ಪನ್ನಗಳು ನೇಕಾರ ಸಹಕಾರ ಸಂಘಗಳಿಂದ ನೇರವಾಗಿ ಗ್ರಾಹಕರಿಗೆ ಲಭ್ಯವಾಗುತ್ತಿವೆ ಎನ್ನುತ್ತಾರೆ ಅವರು.
ಯುಗಾದಿ ಸಂಭ್ರಮದ ಮೆರಗು: ಯುಗಾದಿ ಹಬ್ಬ ಸಮೀಪಿಸುತ್ತಿರುವುದರಿಂದ ವಿಶೇಷ ಕೈಮಗ್ಗ ಮೇಳಕ್ಕೆ ಸಂಭ್ರಮದ ಮೆರಗು ಬಂದಿದೆ. ಯುಗಾದಿ ಹಬ್ಬದ ಅಂಗವಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಏಪ್ರಿಲ್ 10ರೊಳಗೆ ಇನ್ನೂ ಹೆಚ್ಚಿನ ವ್ಯಾಪಾರ ವಹಿವಾಟುವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಪ್ರವರ್ಧನಾಧಿಕಾರಿ ತಿಪ್ಪೇಸ್ವಾಮಿ.
ವಿಶೇಷ ಕೈಮಗ್ಗ ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೆ ತೆರೆದಿರುತ್ತದೆ. ಗ್ರಾಹಕರು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಲು ಕೇವಲ ಇನ್ನೂ ಎರಡು ದಿನ ಮಾತ್ರ ಬಾಕಿ ಇದೆ.

Leave a Reply

Your email address will not be published. Required fields are marked *

You may have missed