April 20, 2024

Chitradurga hoysala

Kannada news portal

ಬೆಳಗ್ಗೆ 6 ರಿಂದ 10 ರವರಗೆ ಶಬ್ದ ನಂತರ ಸ್ತಬ್ಧ.

1 min read

ಅಗತ್ಯ ವಸ್ತುಗಳಿಗೆ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅವಕಾಶ
ವಾರಾಂತ್ಯ ಕಫ್ರ್ಯೂ: ಸಂಪೂರ್ಣ ಸ್ತಬ್ಧ
*****
ಚಿತ್ರದುರ್ಗ, ಏಪ್ರಿಲ್23:
ಕೋವಿಡ್-19 ಸಾಂಕ್ರಾಮಿಕ ರೋಗದ ಸೋಂಕಿನ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ರಾತ್ರಿ ಮತ್ತು ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿದ್ದು, ವಾರಾಂತ್ಯದ ಕಫ್ರ್ಯೂ ವೇಳೆ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ನಿಯಂತ್ರಣದ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಗತ್ಯವಸ್ತುಗಳಾದ ಪಡಿತರ ಅಂಗಡಿ ಹಾಗೂ ದಿನಸಿ, ಹಣ್ಣು, ತರಕಾರಿ, ಹಾಲಿನ ಬೂತ್, ಮೀನು, ಮಾಂಸ, ಪಶು ಆಹಾರ ಅಂಗಡಿಗಳ ಸೇವೆಗೆ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಇದ್ದು, ಮೆಡಿಕಲ್ ಸ್ಟೋರ್‍ಗಳು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸೌಕರ್ಯಗಳು ಲಭ್ಯವಿರುತ್ತವೆ ಎಂದರು.
ವಾರಾಂತ್ಯದ ಕಫ್ರ್ಯೂ ವೇಳೆ ಕೋವಿಡ್ ಲಸಿಕೆ ಪಡೆಯುವವರಿಗೆ ಅವಕಾಶ ಕಲ್ಪಿಸಲಾಗಿದ್ದು, ಲಸಿಕೆ ಪಡೆದುಕೊಂಡು ಬರಲು ಮಾತ್ರ ಅನುಮತಿ ನೀಡಿದ್ದು, ಆಧಾರ್ ಕಾರ್ಡ್ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸಬೇಕು. ಮದುವೆಗೆ 50 ಜನ ಹಾಗೂ ಅಂತ್ಯಕ್ರಿಯೆಗೆ 20 ಜನ ಮೀರುವಂತಿಲ್ಲ. ಮದುವೆಗೆ ತೆರಳುವವರು ಆಹ್ವಾನ ಪತ್ರಿಕೆ ಹಾಜರುಪಡಿಸಬೇಕು ಎಂದರು.
ವಾರದ ದಿನಗಳಾದ ಸೋಮವಾರದಿಂದ ಶುಕ್ರವಾರದವೆಗೆ ಪ್ರತಿ ದಿನ ಬೆಳಿಗ್ಗೆ  6 ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳು  ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ಬಟ್ಟೆ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳು ಅಲ್ಲದ ಅಂಗಡಿಗಳು ಇರುವುದಿಲ್ಲ. ಸಲೂನ್‍ಗಳು, ಬ್ಯೂಟಿಪಾರ್ಲರ್‍ಗಳು ಕೋವಿಡ್ ಮಾರ್ಗಸೂಚಿಯನ್ವಯ ವಾರದ ದಿನಗಳಲ್ಲಿ ಮಾತ್ರ ತೆರೆದಿರುತ್ತವೆ ಎಂದು ಹೇಳಿದರು.
ನಿರ್ಮಾಣ ಸಾಮಾಗ್ರಿಗಳಿಗೆ ಸಂಬಂಧಿಸಿದ ಅಂಗಡಿಗಳು, ವಾರದ ದಿನಗಳಲ್ಲಿ ತೆರೆದಿರುತ್ತವೆ ಮತ್ತು ಕೃಷಿ ಚಟುವಟಿಕೆಗಳಿಗೆ ಸಂಬಂಧಸಿದ ಹಾಗೂ ಇದಕ್ಕೆ ಪೂರಕವಾಗಿರುವ ಅಂಗಡಿಗಳು, ದಾಸ್ತಾನು ಮಳಿಗೆ, ಕೃಷಿ ಯಂತ್ರಗಾರಿಕೆಗೆ ವಾರದ ದಿನಗಳಲ್ಲಿ ಅವಕಾಶವಿರುತ್ತದೆ. ಇ-ಕಾಮರ್ಸ್‍ಗೆ ಅವಕಾಶವಿದ್ದು, ದಿನಸಿಗಳ ಮನೆಬಾಗಿಲಿಗೆ ಪಾರ್ಸೆಲ್ ಪಡೆಯಲು ಅವಕಾಶವಿರುತ್ತದೆ. ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್ ಸೇವೆಗೆ ಅವಕಾಶವಿರುತ್ತದೆ. ಲಾಡ್ಜ್‍ಗಳಲ್ಲಿ ವಾಸ್ತವ್ಯ ಹೂಡುವವರಿಗೆ ಅತಿಥಿ ಸೇವೆಗೆ ಮಾತ್ರ ಅವಕಾಶವಿದೆ ಎಂದರು.
ಧಾರ್ಮಿಕ ಸಮಾರಂಭ, ಜಾತ್ರೆ ನಿಷೇಧಿಸಲಾಗಿದ್ದು, ಪಂಡರಹಳ್ಳಿ ಹಾಗೂ ದುಮ್ಮಿಯಲ್ಲಿ ಜಾತ್ರೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ. ಪೂಜಾಸ್ಥಳ, ಪೂಜೆಗೆ ಮಾತ್ರ ಸೀಮಿತಗೊಳಿಸಿ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಒಂದು ವೇಳೆ ಯಾರಾದರೂ ಉಲ್ಲಂಘಟನೆ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಸಾರ್ವಜನಿಕರು ಅನಾಗತ್ಯವಾಗಿ ಸಂಚಾರ ಮಾಡದೇ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.  
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ 795, ಖಾಸಗಿಯಲ್ಲಿ ಆಸ್ಪತ್ರೆಯಲ್ಲಿ 247 ಕೋವಿಡ್ ಬೆಡ್‍ಗಳನ್ನು ಮೀಸಲಿರಿಸಲಾಗಿದೆ. ಸರ್ಕಾರಿಯಲ್ಲಿ 55 ಆಕ್ಸಿನೇಟೆಡ್ ಬೆಡ್ ಹಾಗೂ ಖಾಸಗಿಯಲ್ಲಿ 50 ಬೆಡ್‍ಗಳಿವೆ. ಸರ್ಕಾರಿ ಐಸಿಯು 41, ಖಾಸಗಿ 50 ಐಸಿಯುಗಳಿವೆ ಮತ್ತು ವೆಂಟಿಲೇಟರ್‍ಗಳು ಖಾಸಗಿ 30, ಸರ್ಕಾರಿ 31 ಇವೆ. ಹಾಗೂ ಇದಕ್ಕೆ ಸಂಬಂಧಿಸಿದ ಔಷಧಿಯು ದಾಸ್ತಾನು ಇರುತ್ತದೆ. ಒಂದು ವೇಳೆ ಇನ್ನೂ ಹೆಚ್ಚಾದಲ್ಲಿ ಹಾಸ್ಟೆಲ್‍ಗಳಲ್ಲಿ ಕೋವಿಡ್‍ಗೆ ಚಿಕಿತ್ಸೆಗಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೋವಿಡ್‍ಗೆ ಸಂಬಂಧಿಸಿದಂತೆ ಯಾವುದೇ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳು ಕೋವಿಡ್‍ಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಕೆಪಿಎಂ ಕಾಯ್ದೆ ಅನ್ವಯ ಯಾರಾದರೂ ಅನುಮತಿ ಪಡೆಯದೇ ಚಿಕಿತ್ಸೆ ನೀಡುತ್ತಿದ್ದರೆ ಅಂತಹ ಆಸ್ಪತ್ರೆ, ಕ್ಲಿನಿಕ್‍ಗಳ ಮೇಲೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ ಇದ್ದರು.

About The Author

Leave a Reply

Your email address will not be published. Required fields are marked *