April 23, 2024

Chitradurga hoysala

Kannada news portal

ಜಲಜೀವನ್ ಮಿಷನ್ ಯೋಜನೆಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚನೆ

1 min read

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚನೆ
ಜಲಜೀವನ್ ಮಿಷನ್ ಯೋಜನೆಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ
***
ಚಿತ್ರದುರ್ಗ,ಮೇ.30:
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿದ್ದು, ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಲಜೀವನ್ ಮಿಷನ್ ಅಡಿ ಕೈಗೊಂಡಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಆಗಿರುವುದರಿಂದ  ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ  ಪಾತ್ರ ಮಹತ್ವದಾಗಿದೆ. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳ ಜನರಿಗೆ ಕುಡಿಯುವ ನೀರು ಒದಗಿಸುವ ಪ್ರಾಥಮಿಕ ಜವಾಬ್ದಾರಿಯಿಂದ ಹೊಂದಿದ್ದಾರೆ.  ಈ ನಿಟ್ಟಿನಲ್ಲಿ ಬಹಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜೆಜೆಎಂ ಯೋಜನೆಯಡಿಯಲ್ಲಿ ಶೇ.40ರಷ್ಟು ಟೆಕ್ನಿಕಲ್ ವರ್ಕ್ ಹಾಗೂ ಶೇ.60 ರಷ್ಟು ಸಮುದಾಯದ ಅಭಿವೃದ್ಧಿ ಕಾರ್ಯಗಳನ್ನು ಒಳಗೊಂಡಿದೆ. ಜೆಜೆಎಂ ಅಡಿ ಕಾಮಗಾರಿ ಕೈಗೊಳ್ಳಲು ಸರ್ವೇ ಮಾಡುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಕ್ರಿಯವಾಗಿ  ಪಾಲ್ಗೊಳ್ಳಬೇಕು ಎಂದು ತಾಕೀತು ಮಾಡಿದರು.
 ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪಿ.ಎಸ್.ಜ್ಞಾನೇಶ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ 100 ದಿನಗಳ ಸಾಧನೆಯಡಿ ಶಾಲೆ, ಅಂಗನವಾಡಿ, ಕಾಲೇಜು, ಹಾಸ್ಟೆಲ್‍ಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಶಾಲೆಗಳಿಗೆ ಸಂಬಂಧಿಸಿದಂತೆ 244 ಕಾಮಗಾರಿಗಳಲ್ಲಿ 225 ಪೂರ್ಣಗೊಂಡಿವೆ. 1395 ಅಂಗನವಾಡಿ ಕಾಮಗಾರಿಗಳಲ್ಲಿ 1296 ಪೂರ್ಣಗೊಂಡಿವೆ. ಆಶ್ರಮ ಶಾಲೆಯ 6 ಕಾಮಗಾರಿಗಳಲ್ಲಿ 4 ಪೂರ್ಣಗೊಂಡಿವೆ ಹಾಗೂ ಪಿಯು ಕಾಲೇಜಿನ 13 ಕಾಮಗಾರಿಗಳಲ್ಲಿ 6 ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ ಅವರು, ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನಗಳ ಪ್ರಗತಿಯ ವಿವರವನ್ನು ತಿಳಿಸಿದರು.
 ವಿವಿಸಾಗರ ಜಲಮೂಲದಿಂದ ಹಿರಿಯೂರು ತಾಲ್ಲೂಕು ವ್ಯಾಪ್ತಿಯ 38 ಗ್ರಾಮಗಳು ಐಮಂಗಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಜುಲೈ ಅಂತ್ಯದೊಳಗೆ ಟ್ರಯಲ್ ರನ್ ಮುಕ್ತಾಯವಾಗಲಿದ್ದು, ಆಗಸ್ಟ್ ತಿಂಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣ ಕುರಿತ ಸಭೆ:  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿ 6578 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಈಗಾಗಲೇ 22  ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. 392 ಡಿಸಿಎಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 792 ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 246 ಮಂದಿ ಇದ್ದಾರೆ. ಉಳಿದಂತೆ 4874 ಮಂದಿ ಹೋಂ ಐಸೋಲೇಷನ್‍ನಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.
 ಜಿಲ್ಲೆಯಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಹೋಂ ಐಸೋಲೇಷನ್‍ನಲ್ಲಿರುವವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದರು.
 ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಹೋಂ ಐಸೋಲೇಷನ್‍ನಲ್ಲಿರುವವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಕರೆತರುವ ಕೆಲಸ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ಗ್ರಾಮಗಳಲ್ಲಿ ಅಧಿಕಾರಿಗಳ ಕ್ರಮಕ್ಕೆ ಅಡ್ಡಿಪಡಿಸದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೋವಿಡ್ ಕೇರ್ ಸೆಂಟರ್‍ಗೆ ಬಾರದವರ ಮನೆಯನ್ನು ಸೀಲ್‍ಡೌನ್ ಮಾಡಲಾಗುತ್ತಿದೆ ಎಂದು ಹೇಳಿದರು.
834 ಹಳ್ಳಿಗಳು ಕೋವಿಡ್ ಮುಕ್ತ: ಜಿಲ್ಲೆಯ 1360 ಗ್ರಾಮಗಳಲ್ಲಿ 834 ಹಳ್ಳಿಗಳು ಕೋವಿಡ್ ಮುಕ್ತ ಹಳ್ಳಿಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ತಿಳಿಸಿದರು.
 ಜಿಲ್ಲೆಯ 22 ಹಳ್ಳಿಗಳನ್ನು ಕೋವಿಡ್ ಹಾಟ್‍ಸ್ಪಾಟ್ ಹಳ್ಳಿಗಳೆಂದು ಗುರುತಿಸಲಾಗಿದೆ. ಇಂತಹ ಹಳ್ಳಿಗಳಿಗೆ ಜಿಲ್ಲಾಡಳಿತ ಹಳ್ಳಿಗಳಿಗೆ ಭೇಟಿ ನೀಡಿ ಕೋವಿಡ್ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
 ಜಿಲ್ಲೆಯ ಗ್ರಾಮೀಣ ಪ್ರದೇಶಗಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕಾರ್ಯಪಡೆ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು. ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
 

About The Author

Leave a Reply

Your email address will not be published. Required fields are marked *