March 29, 2024

Chitradurga hoysala

Kannada news portal

ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ*

1 min read

*ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ*

( ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು, ರಾಷ್ಟ್ರಪತಿಗೆ ಪತ್ರ ಬರೆದ ರಾಜ್ಯ ರೈತ ಸಂಘ) ಚಿತ್ರದುರ್ಗ :

ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆಯುವುದರ ಮೂಲಕ ಮನವಿ ಮಾಡಿದ್ದಾರೆ.

ಭಾರತೀಯ ಸಮಾಜವು ನಮ್ಮನ್ನು ಅಂದರೆ ರೈತರನ್ನು `ಅನ್ನದಾತರು” ಎಂದು ಕರೆಯುತ್ತದೆ. ಕಳೆದ 74 ವರ್ಷಗಳಲ್ಲಿ, ನಾವು ಯಾವಾಗಲೂ ವಹಿಸುವಂತೆ ಸಾಕಷ್ಟು ಶ್ರಮ ವಹಿಸಿದ್ದೇವೆ ಮತ್ತು ನಾವು ನಮ್ಮ ಜವಾಬ್ದಾರಿಯನ್ನು ಪೂರೈಸುವ ಯಾವುದೇ ಅವಕಾಶಕ್ಕೆ ಬೆನ್ನು ತಿರುಗಿಸಲಿಲ್ಲ. ಭಾರತ ಸ್ವತಂತ್ರವಾದಾಗ, ನಾವು ದೇಶದಲ್ಲಿ 33 ಕೋಟಿ ನಾಗರಿಕರಿಗೆ ಅಹಾರವನ್ನು ನೀಡುತ್ತಿದ್ದೆವು ಇಂದು, ಅದೇ ಪ್ರಮಾಣದ ಭೂಮಿಯಲ್ಲಿ, ನಾವು ಸುಮಾರು 140 ಕೋಟಿ ಭಾರತೀಯರಿಗೆ ಆಹಾರವನ್ನು ನೀಡುತ್ತಿದ್ದೇವೆ. ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ, ಅರ್ಥಿಕತೆಯ ಇತರ ಕ್ಷೇತ್ರಗಳು ಕ್ಷೀಣಿಸಿದವು ಮತ್ತು ಕುಸಿದವು ಅದರೂ ನಾವು ಕೃಷಿಯಲ್ಲಿ ದಾಖಲೆಯ ಉತ್ಪಾದನೆಯನ್ನು ಸಾಧಿಸಿದ್ದೇವೆ. ನಮ್ಮ ಜೀವವನ್ನೇ ಪಣಕ್ಕಿಟ್ಟು ಧಾನ್ಯಗಳು ಗೋದಾಮುಗಳಲ್ಲಿ ತುಂಬಿ ಹರಿಯುವುದನ್ನು ಖಾತ್ರಿಪಡಿಸಿದ್ದೇವೆ ಎಂದಿದ್ದಾರೆ.

ನಾವು ಇಡೀ ದೇಶಕ್ಕೆ ಒದಗಿಸಿದ ಈ ರೀತಿಯ ಸೇವೆಗೆ ಪ್ರತಿಯಾಗಿ, ನಿಮ್ಮ ಒಪ್ಪಿಗೆಯ ಮುದ್ರೆ ಮೇಲೆ ನಡೆಸಲ್ಪಡುವ ಭಾರತ ಸರ್ಕಾರವು ನಮ್ಮ ಮೇಲೆ ಮೂರು ರೈತ ವಿರೋಧಿ ಕರಾಳ ಕಾನೂನುಗಳನ್ನು ಹೇರಿದೆ, ಅವುಗಳು ನಮ್ಮ ಕೃಷಿಯನ್ನು ಮತ್ತು ನಮ್ಮ ಮುಂದಿನ ಪೀಳಿಗೆಗಳನ್ನು ನಾಶಪಡಿಸುತ್ತವೆ. ಇವು ಕೃಷಿಯನ್ನು ನಮ್ಮ ಕೈಯಿಂದ ಕಸಿದುಕೊಂಡು ದೊಡ್ಡ ಕಾರ್ಪೋರೇಟ್ ಸಂಸ್ಥೆಗಳಿಗೆ ಹಸ್ತಾಂತರಿಸುವ ಕಾನೂನುಗಳು. ಇದಲ್ಲದೆ ಇತರ ಕೆಲವು ಕಾನೂನಿನ ಕತ್ತಿಗಳು ನಮ್ಮ ತಲೆಯ ಮೇಲೆ ತೂಗುತ್ತಿವೆ. ದೆಹಲಿಯ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಹೊಸ ಸುಗ್ರೀವಾಜ್ಞೆಯಲ್ಲಿ ಹಲ್ಲನ್ನು ಸುಡುವುದಕ್ಕಾಗಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ-2020 ರ ಮೂಲಕ ಸಬ್ಸಿಡಿ ಹಿಂಪಡೆಯಲಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

ಮೂರೂ ಕೇಂದ್ರ ಕೃಷಿ ಕಾನೂನುಗಳು ಅಸಂವಿಧಾನಿಕ, ಏಕೆಂದರೆ (ಕೃಷಿ) ಮಾರುಕಟ್ಟೆಗಳ ವಿಷಯದಲ್ಲಿ ಶಾಸನ ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಈ ಶಾಸನಗಳು ಪ್ರಜಾಪ್ರಭುತ್ವ ವಿರೋಧಿ, ಅಂತಹ ಕಾನೂನುಗಳನ್ನು ರಚಿಸುವ ಮೊದಲು, ರೈತರೊಂದಿಗೆ ಯಾವುದೇ ಸಮಾಲೋಚನೆ ಮತ್ತು ಸಂವಾದಗಳನ್ನು ನಡೆಸಲಾಗಿಲ್ಲ. ಸರಿಯಾದ ಕಾರಣವನ್ನು ಕೇಳದೆ ಮತ್ತು ವಿವರಣೆ ನೀಡದೆ, ಇವುಗಳನ್ನು ರಹಸ್ಯವಾಗಿ ಸುಗ್ರೀವಾಜ್ಞೆ ರೂಪದಲ್ಲಿ ತರಲಾಯಿತು. ಸಂಸತ್ತಿನಲ್ಲಿ ಮಂಡಿಸಿದ ನಂತರ ಈ ಮಸೂದೆಗಳನ್ನು ಹೆಚ್ಚಿನ ಅಧ್ಯಯನ ಮತ್ತು ಚರ್ಚೆಗಳಿಗಾಗಿ ಸಮಿತಿಗಳಿಗೆ ಕಳುಹಿಸಲಾಗಿಲ್ಲ. ಈ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುವಾಗ, ರಾಜ್ಯಸಭೆಯಲ್ಲಿ ಮತ ವಿಭಜನೆಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಕಠಿಣ ಪರಿಶ್ರಮ ಮತ್ತು ಶ್ರಮಕ್ಕಾಗಿ ನಾವು ಕೇವಲ ನ್ಯಾಯಯುತ ಮತ್ತು ಲಾಭದಾಯಕ ಆದಾಯವನ್ನು ಮಾತ್ರ ಕೇಳುತ್ತಿದ್ದೇವೆ. ನಮ್ಮ ಉತ್ಪನ್ನಗಳಿಗೆ ಬೆಲೆಗಳನ್ನು ನಿಗದಿ ಮಾಡುವ ಸಂದರ್ಭ ಬಂದಾಗ ನಾವು ಅಪಾರ ಶೋಷಣೆ ಮತ್ತು ಲೂಟಿಗೆ ಒಳಗಾಗುತ್ತಿದ್ದೇವೆ. ಇದರಿಂದಾಗಿ ಕೃಷಿ ನಮಗೆ ನಷ್ಟದ ವೃತ್ತಿಯಾಗಿದೆ. ನಾವು ವಿಪರೀತ ಸಾಲದಲ್ಲಿದ್ದೇವೆ ಮತ್ತು ಕಳೆದ 30 ವರ್ಷಗಳಲ್ಲಿ, 4 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಯ ಮೂಲಕ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸ್ವಾಮಿನಾಥನ್ ಆಯೋಗದ ಸೂತ್ರವನ್ನು ಬಳಸಿಕೊಂಡು ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಅ2 + 50% ಯನ್ನು ನಿಗದಿಪಡಿಸಬೇಕು ಮತ್ತು ಅಂತಹ ಎಂಎಸ್‍ಪಿಯನ್ನು ಎಲ್ಲಾ ರೈತರಿಗೆ ಕಾನೂನಿನ ಚೌಕಟ್ಟಿನಲ್ಲಿ ಖಾತರಿಪಡಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಈ ವಿಚಾರದಲ್ಲಿ ತನ್ನ ಭರವಸೆಗಳು ಮತ್ತು ಬದ್ಧತೆಗಳನ್ನು ಈಡೇರಿಸುವ ಬದಲು, ಭಾರತ ಸರ್ಕಾರವು 2022 ರ ವೇಳೆಗೆ `ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಸುಳ್ಳು ಹೇಳುತ್ತಿದೆ. ಅದನ್ನು ಸಾಧಿಸಲಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಕಳೆದ ಏಳು ತಿಂಗಳುಗಳಲ್ಲಿ, ನಾವು ಅನುಭವಿಸಿದ್ದು 46 ªವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯನ್ನು ನೆನಪಿಗೆ ತಂದಿತು, ಮತ್ತು ಇಂದು ಕೇವಲ ರೈತರ ಚಳವಳಿ ಮಾತ್ರವೇ ಸರ್ಕಾರದ ದಬ್ಬಾಳಿಕೆಯನ್ನು ಅನುಭವಿಸುತ್ತಿಲ್ಲ, ಕಾರ್ಮಿಕರು, ಯುವಜನ, ವಿದ್ಯಾರ್ಥಿಗಳ, ಮಹಿಳೆಯರ, ಅಲ್ಪಸಂಖ್ಯಾತ ಸಮುದಾಯಗಳ, ದಲಿತರ ಹಾಗೂ ಆದಿವಾಸಿಗಳ ಚಳುವಳಿಗಳು ಕೂಡ ಸರ್ಕಾರದ ಕಿರುಕುಳ ಎದುರಿಸುತ್ತಿವೆ.ಅಗಿನ ತುರ್ತು ಪರಿಸ್ಥಿತಿಯಂತೆ ಈಗಲೂ ಕೂಡ ಅನೇಕ ದೇಶಭಕ್ತ ಹೋರಾಟಗಾರರನ್ನು ಕಾರಾಗೃಹಗಳಲ್ಲಿ ಇರಿಸಲಾಗಿದೆ. ಸರ್ವಾಧಿಕಾರಿ ಆಡಳಿತವನ್ನು ವಿರೋಧಿಸುವವರ ವಿರುದ್ಧ ಯುಎಪಿಎಯಂತಹ ಕಠಿಣ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಮಾಧ್ಯಮವು ಭಯಬೀತಗೊಂಡಿದೆ ಮತ್ತು ಸರಕಾರಕ್ಕೆ ವಿದೇಯತೆ ತೋರುತ್ತಿದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಆಕ್ರಮಿಸಲಾಗಿದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸುವುದು ವಾಡಿಕೆಯಾಗಿದೆ. ತುರ್ತು ಪರಿಸ್ಥಿತಿ ಘೋಷಿಸದೆ, ಪ್ರತಿದಿನವೂ ಪ್ರಜಾಪ್ರಭುತ್ವದ ಕುತ್ತಿಗೆ ಹಿಚುಕಲಾಗುತ್ತಿದೆ. ಈ ಸಂದರ್ಭದಲ್ಲಿ, ನಮ್ಮ ಸಾಂವಿಧಾನಿಕ ಚೌಕಟ್ಟಿನ ಮುಖ್ಯ ಪಾಲಕರಾದ ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ.

ಈ ಹಿನ್ನಲೆಯಲ್ಲಿ, ಇಂದು, ಈ ಜ್ಞಾಪಕ ಪತ್ರವನ್ನು ನಿಮಗೆ ಸಲ್ಲಿಸುವ ಮೂಲಕ, ದೇಶದ ಕೋಟ್ಯಂತರ ಕೃಷಿ ಕುಟುಂಬಗಳ ಹತಾಶೆ ಮತ್ತು ಆಳವಾದ ಕೋಪವನ್ನು ನಾವು ನಿಮ್ಮ ಗಮನಕ್ಕೆ ತರುತ್ತಿದ್ದೇವೆ, ರೈತರ ಆಂದೋಲನದ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಸ್ವೀಕರಿಸಲು, ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ಎಲ್ಲಾ ರೈತರಿಗೆ ಸಿ2 + 50% ರಷ್ಟು ಆದಾಯವನ್ನು ನೀಡುವ ಎಂಎಸ್‍ಪಿಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೆ ತರಲು ನೀವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ.

ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದ ಐತಿಹಾಸಿಕ ರೈತರ ಆಂದೋಲನವು ದೇಶದ ಕೃಷಿ ಮತ್ತು ರೈತರನ್ನು ಉಳಿಸುವ ಚಳುವಳಿಯಷ್ಟೇ ಅಲ್ಲ, ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ಅಂದೋಲನವೂ ಆಗಿದೆ. ಜೈ ಕಿಸಾನ್, ಜೈ ಹಿಂದ್ Áವು ಭಾರತದ ಜನರು, ರಾಷ್ಟ್ರವನ್ನು ಪೋಷಿಸುವ ಮತ್ತು ಎಲ್ಲರನ್ನೂ ಜೀವಂತವಾಗಿರಿಸಿಕೊಳ್ಳುವವರು, `ಅನ್ನದಾತರು” ನಾವು ಎಂದಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಚಿ.ಸುರೇಶ್‍ಬಾಬು, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಪ್ರಭು ಇಸಮುದ್ರ, ತಾಲೂಕು ಅಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ತಾಲೂಕು ಕಾರ್ಯದರ್ಶಿ ರವಿ ಕೋಗುಂಡೆ, ತಾಲೂಕು ಉಪಾಧ್ಯಕ್ಷ ಸಜ್ಜನಕೆರೆ ರೇವಣ್ಣ, ತಾಲೂಕು ಸಂಘಟನಾ ಕಾರ್ಯದರ್ಶಿ ಹುಣಸೆಕಟ್ಟೆ ಕಾಂತರಾಜ್, ರೈತ ಮುಖಂಡರಾದ ಪ್ರಸನ್ನ, ಎಂ.ಬಸವರಾಜ್, ಎ.ಜಿ.ಮಹೇಶ್, ಸಿ.ಎನ್.ಧನಂಜಯ್ ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *