April 20, 2024

Chitradurga hoysala

Kannada news portal

ಬ್ರಾಹ್ಮಣ್ಯ – ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಮತ್ತು ಅನಾಗರಿಕ ಸಮಾಜ.

1 min read

ಬ್ರಾಹ್ಮಣ್ಯ – ಅಸ್ಪೃಶ್ಯತೆ,
ಜಾತಿ ವ್ಯವಸ್ಥೆ ಮತ್ತು ಅನಾಗರಿಕ ಸಮಾಜ…………

2021 ರ ಈ ಸಮಯದಲ್ಲಿ ಮನುಷ್ಯನ ಹುಟ್ಟಿನ ಸಹಜತೆ ಮತ್ತು ಸ್ವಾಭಾವಿಕತೆ ಅತ್ಯಂತ ಸ್ಪಷ್ಟವಾಗಿ ತಿಳಿದ ನಂತರವೂ ಅದೇ ಆಧಾರದ ಮೇಲೆ ಇನ್ನೂ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿ ಇದೆ ಎಂದರೆ ನಮ್ಮ ಸಮಾಜ ಇನ್ನೂ ಅನಾಗರಿಕ ವ್ಯವಸ್ಥೆಯಲ್ಲಿ ಇದೆ ಮತ್ತು ಇಲ್ಲಿನ ಸದಸ್ಯರು ಇನ್ನೂ ಮಾನವೀಯ ಲಕ್ಷಣಗಳನ್ನು ಅರ್ಥಮಾಡಿಕೊಂಡಿಲ್ಲ ಎಂದೇ ಹೇಳಬೇಕಾಗುತ್ತದೆ.

ಬ್ರಾಹ್ಮಣ್ಯ – ಅಸ್ಪೃಶ್ಯತೆ,
ಜಾತಿ ವ್ಯವಸ್ಥೆ ಮತ್ತು ಅನಾಗರಿಕ ಸಮಾಜ.

ವೇದ ಶಾಸ್ತ್ರಗಳು, ಸಂವಿಧಾನ, ಶಿಕ್ಷಣ ವ್ಯವಸ್ಥೆ, ವಿಜ್ಞಾನ, ಧರ್ಮ ಎಲ್ಲವೂ ಮನುಷ್ಯತ್ವ ಅರ್ಥ ಮಾಡಿಸಲು ಸಂಪೂರ್ಣ ವಿಫಲವಾಗಿದೆ ಎಂದೇ ಭಾವಿಸಬೇಕಾಗುತ್ತದೆ.

ಯಾವ ಆಧಾರದ ಮೇಲೆ ಈ ಕ್ಷಣದಲ್ಲಿ ನೀವು ಯಾರನ್ನು ಯಾವ ಜಾತಿಯವನೆಂದು ಗುರುತಿಸುವಿರಿ.

ಆತನ ವಿದ್ಯೆ ಬುದ್ದಿಯಿಂದಲೇ,
ಆತನ ಜ್ಞಾನದಿಂದಲೇ,
ಆತನ ಹಣ ಅಧಿಕಾರದಿಂದಲೇ,
ಆತನ ಚರ್ಮದ ಬಣ್ಣದಿಂದಲೇ,
ಆತನ ಉದ್ಯೋಗ ವೃತ್ತಿಯಿಂದಲೇ,
ಆತನ ರಕ್ತ ಮಾಂಸದಿಂದಲೇ,
ಆತ ವಾಸಿಸುವ ಪ್ರದೇಶದಿಂದಲೇ,
ಆತನ ನಡವಳಿಕೆಯಿಂದಲೇ,
ಆತನ ಆಹಾರದಿಂದಲೇ,
ಆತನ ಉಡುಗೆ ತೊಡುಗೆಗಳಿಂದಲೇ,
ಆತನ ವಿಭೂತಿ ನಾಮಗಳಿಂದಲೇ,
ಆತನ ಉಪಯೋಗಿಸುವ ಆಯುಧಗಳಿಂದಲೇ,…..

ಈಗ ಇವು ಯಾವುದೂ ಯಾರ ಒಬ್ಬರ ಸ್ವತ್ತಾಗಿ ಅಥವಾ ಗುರುತಿಸುವಿಕೆಯಾಗಿ ಉಳಿದಿಲ್ಲ. ಎಲ್ಲವೂ ಸಾರ್ವತ್ರಿಕ ಮತ್ತು ಅನಿವಾರ್ಯ. ಆದರೂ ನಮ್ಮ ಸಮಾಜದ ಬಹುತೇಕ ಜನರ ಮನಸ್ಸು ರಕ್ತ ಉಸಿರಿನಲ್ಲಿ ಈ ಜಾತಿ ಸೇರಿಕೊಂಡಿದೆ. ನಮ್ಮ ಹುಟ್ಟಿನಿಂದ ಸಾವಿನವರೆಗಿನ ಎಲ್ಲಾ ‌ವ್ಯಾವಹಾರಿಕ ಜಗತ್ತಿನಲ್ಲಿ ಜಾತಿಯೇ ಮುಖ್ಯವಾಗುತ್ತದೆ. ಅಂದರೆ ನಾವು ನಾಗರಿಕ ಮನುಷ್ಯರು ಎಂದು ಕರೆದುಕೊಳ್ಳುವ ಅರ್ಹತೆಯನ್ನೇ ಕಳೆದುಕೊಂಡಿದ್ದೇವೆ.

ಈಗಲೂ ನಡೆಯುವ ಅನೇಕ ಅಸ್ಪೃಶ್ಯತೆ ಆಚರಣೆಯ ಅಮಾನವೀಯ ಘಟನೆಗಳು, ಈಗಲೂ ಮತ್ತೆ ಮತ್ತೆ ನೋಂದಣಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ ಜಾತಿ ಸಂಘಟನೆಗಳು, ಈಗಲೂ ನಡೆಯುತ್ತಿರುವ ಜಾತಿ ಸಮಾವೇಶಗಳು, ಈಗಲೂ ಸ್ಥಾಪಿಸಲಾಗುತ್ತಿರುವ ಜಾತಿ ಮಠಗಳು ನಮ್ಮ ಯೋಗ್ಯತೆಯನ್ನು ತೋರಿಸುತ್ತಿದೆ.

ಆಂತರ್ಯದಲ್ಲಿ ಈ ಜಾತಿ ಶ್ರೇಷ್ಠತೆಯ ವ್ಯಸನ ಯಾವ ಮಟ್ಟದಲ್ಲಿ ಇದೆ ಎಂದರೆ……

ಬ್ರಾಹ್ಮಣನೊಬ್ಬನೆಂದ,
ನಾವೇ ಶ್ರೇಷ್ಠರು ದೇವರಿಗೆ ನಾವೇ ಹತ್ತಿರ ನಾವು ದೇವರ ಪ್ರತಿನಿಧಿಗಳು.

ವೈಶ್ಯನೊಬ್ಬನೆಂದ,
ನಾವೇ ಶ್ರೇಷ್ಠರು ನಾವು ವ್ಯಾಪಾರ ಮಾಡದಿದ್ದರೆ ಸಮಾಜ ಅಸ್ತಿತ್ವದಲ್ಲೇ ಇರುವುದಿಲ್ಲ. ದೇವರಿಗೆ ನಾವೇ ಅತಿಮುಖ್ಯ.

ಕ್ಷತ್ರಿಯನೊಬ್ಬನೆಂದ,
ನಾವೇ ಶ್ರೇಷ್ಠರು ಸಮಾಜವನ್ನು ರಕ್ಣಿಸುವವರು ನಾವೇ. ನಾವಿಲ್ಲದಿದ್ದರೆ ಅರಾಜಕತೆ ಸೃಷ್ಟಿಯಾಗುತ್ತದೆ. ದೇವರಿಗೆ ನಾವೇ ಹತ್ತಿರ.

ಒಕ್ಕಲಿಗನೊಬ್ಬನೆಂದ,
ನಾವೇ ಶ್ರೇಷ್ಠರು ನಾವು ವ್ಯವಸಾಯ ಮಾಡದಿದ್ದರೆ ತಿನ್ನಲು ಆಹಾರವೇ ಇರುವುದಿಲ್ಲ. ನಾವೇ ದೇವರ ಮಕ್ಕಳು.

ಅಗಸನೊಬ್ಬನೆಂದ,
ನಾವೇ ಶ್ರೇಷ್ಠರು ನಾವು ಜನರ ಕೊಳೆಯಾದ ಬಟ್ಟೆ ಶುಭ್ರ ಮಾಡಿಕೊಡುತ್ತೇವೆ. ನಾವಿಲ್ಲದಿದ್ದರೆ ಜನ ಕೊಳಕರಾಗುತ್ತಾರೆ. ದೇವರಿಗೆ ನಾವೇ ಹತ್ತಿರ.

ಕ್ಷೌರಿಕನೊಬ್ಬನೆಂದ,
ನಾವೇ ಶ್ರೇಷ್ಠರು ಜನರು ಚೆಂದ ಕಾಣಲು ಮಂಗಳ ಕಾರ್ಯ ಮಾಡಲು ನಾವೇ ಬೇಕು. ದೇವರಿಗೆ ವಾಧ್ಯ ನುಡಿಸಿ ಖುಷಿಪಡಿಸುವವರೇ ನಾವು.

ಕುಂಬಾರನೊಬ್ಬನೆಂದ,
ನಾವೇ ಶ್ರೇಷ್ಠರು ಜನ ಅಡುಗೆ ಮಾಡಿ ಊಟ ಮಾಡಲು ನಾವು ಮಾಡುವ ಮಡಿಕೆಗಳೇ ಬೇಕು. ನಾವಿಲ್ಲದೆ ಊಟವಿಲ್ಲ. ದೇವರಿಗೆ ನಾವೇ ಹತ್ತಿರ.

ಕುರುಬನೊಬ್ಬನೆಂದ,
ನಾವೇ ಶ್ರೇಷ್ಠರು ಹಸು ಆಡು ಕುರಿಗಳನ್ನು ಸಾಕಿ ಬೆಳೆಸಿ ಜನರಿಗೂ ದೇವರಿಗೂ ಹಾಲು ತುಪ್ಪ ಎಲ್ಲಾ ನಮ್ಮಿಂದಲೇ. ನಾವೇ ದೇವರಿಗೆ ಹತ್ತಿರ.

ಚಮ್ಮಾರನೊಬ್ಬನೆಂದ,
ನಾವೂ ಶ್ರೇಷ್ಠರೆ, ನೀವು ಕಾಲಿನ ರಕ್ಷಣೆಗೆ ಹಾಕುವ ಚಪ್ಪಲಿ. ವ್ಯವಸಾಯಕ್ಕೆ ಬಳಸುವ ಸಲಕರಣೆಗಳು, ದೇವರ ರಕ್ಷಣೆಗೆ ಕಟ್ಟುವ ಕಟ್ಟಡ, ಯುಧ್ಧಕ್ಕೆ ಉಪಯೋಗಿಸುವ ಆಯುಧ, ಎಲ್ಲಾ ಮಾಡುವುದು ನಾವೇ.
ನಾವೇ ದೇವರ ನಿಜವಾದ ಮಕ್ಕಳು.

ಅಯ್ಯೋ ಹುಚ್ಚರ, ಇದು 2021……
ನಿಮ್ಮ ಶ್ರೇಷ್ಠತೆ ನಾಶವಾಗಿ ಬಹಳ ಕಾಲವಾಗಿದೆ. ಇಂದು ನಿಮ್ಮ ಕೆಲಸಗಳು ಯಾರಿಗೂ ಅನಿವಾರ್ಯವಲ್ಲ. ಅವು ಜಾತಿ ಮೀರಿ ಹೊಟ್ಟೆ ಪಾಡಿನ ಕಾಯಕಗಳಾಗಿ ಯಾರು ಬೇಕಾದರೂ ಮಾಡಬಹುದಾದ ನಾನಾ ರೂಪ ಪಡೆದುಕೊಂಡಿದೆ.

ಬ್ರಾಹ್ಮಣನೊಬ್ಬ ಶೌಚಾಲಯಗಳ Cleaning Contract ಪಡೆದರೆ, ಗೌಡನೊಬ್ಬ ಚಪ್ಪಲಿ ಅಂಗಡಿ ಇಟ್ಟರೆ, ದಲಿತನೊಬ್ಬ ಹೋಟೆಲ್ ನಡೆಸಿದರೆ, ಲಿಂಗಾಯಿತನೊಬ್ಬ ಕ್ಷೌರದ ಅಂಗಡಿ ಇಟ್ಟರೆ, ತಿಗಳರವನೊಬ್ಬ ಪೂಜಾರಿಯಾದರೆ ಉಪ್ಪಾರನೊಬ್ಬ ಜ್ಯೋತಿಷಿಯಾಗುತ್ತಾನೆ.

ಇನ್ನು ಸರ್ಕಾರಿ ಅಧಿಕಾರಿಗಳು, ನಗರದಲ್ಲಿ ವ್ಯಾಪಾರ ಮಾಡುವವರು ಖಾಸಗಿ ಕಂಪನಿ ಅಧಿಕಾರಿಗಳು ಯಾರು ಯಾರೋ ತಿಳಿದವರಿಲ್ಲ. ಎಲ್ಲರೂ ಕೇವಲ ಹೊಟ್ಟೆ ಪಾಡಿನ ನರಮಾನವರು.

ಕಳ್ಳರು ಖೈದಿಗಳು ರೋಗಿಗಳು ಭ್ರಷ್ಠರು ಕೊಲೆಗಡುಕರು ಅತ್ಯಾಚಾರಿಗಳು ಎಲ್ಲಾ ಜಾತಿಗಳಲ್ಲೂ ಇದ್ದಾರೆ ಹಾಗೇ ದಕ್ಷರು ಪ್ರಾಮಾಣಿಕರು ಪುಣ್ಯಾತ್ಮರು ಜ್ಞಾನಿಗಳು ಎಲ್ಲಾ ಕಡೆ ಇದ್ದಾರೆ. ಇವರಿಗೆ ಜಾತಿಯ ಹಂಗಿಲ್ಲ.

ಇನ್ನೂ ನಿದ್ರಾವಸ್ಥೆಯಲ್ಲಿರುವ ಮೂರ್ಖರೆ,
ಕಿತ್ತೊಗೆಯಿರಿ ನಿಮ್ಮ ಜಾತಿಗಳ ಟೈಟಲ್ ಗಳನ್ನು,
ಮದುವೆಯಾಗಿ ನಿಮಗಿಷ್ಟದ ಹುಡುಗ/ಹುಡುಗಿಯನ್ನು ,
ಹುಟ್ಟಿಸಿ ನಿಜವಾದ ಭಾರತೀಯರನ್ನು,
ಕಟ್ಟೋಣ ಸಮಾನತೆಯ ಸಮೃಧ್ಧ ಭಾರತವನ್ನು.

ಇದೇನು ದೊಡ್ಡ ಕಷ್ಟವಲ್ಲ ನಾವು ಮನಸ್ಸು ಮಾಡಿದರೆ ……..

ಮೀಸಲಾತಿಯ ಬಗ್ಗೆ ಅಸೂಯೆ ಪಡುವ ಬದಲು ಜಾತಿ ನಿರ್ಮೂಲನೆಗಾಗಿ ಪ್ರಯತ್ನ ಮಾಡೋಣ. ಜಾತಿಯೇ ಇಲ್ಲದಿದ್ದರೆ ಜಾತಿ ಮೀಸಲಾತಿಯ ಪ್ರಶ್ನೆಯೇ ಇರುವುದಿಲ್ಲ.
ಜಾತಿ ನಿರ್ಮೂಲನೆಯ ನಂತರ ಆರ್ಥಿಕ ಮೀಸಲಾತಿ ಜಾರಿಯಾಗಲಿ.

” ಜಾತಿ ಆಧಾರಿತ ಮೀಸಲಾತಿ ಭಿಕ್ಷೆಯಲ್ಲ ಅದು ಹಕ್ಕು ”

ಏಕೆಂದರೆ ಅದನ್ನು ಪಡೆಯುತ್ತಿರುವವರು ವಿದೇಶಿಯರಲ್ಲ,
ನಮ್ಮದೇ ರಕ್ತ ಸಂಬಂಧಿಗಳು ಮತ್ತು ನಮ್ಮ ಭಾರತೀಯರು, ಶತಶತಮಾನಗಳಿಂದ ಶೋಷಣೆಗೆ ಒಳಗಾಗಿರುವವರು………

(ಇಲ್ಲಿನ ಜಾತಿಗಳ ಹೆಸರು ಕೇವಲ ಸಾಂಕೇತಿಕ. ಇದು ಇತರ ಎಲ್ಲಾ ಜಾತಿಗಳಿಗೂ ಸಹಜವಾಗಿ – ಸಮನಾಗಿ ಅನ್ವಯಿಸುತ್ತದೆ. )
********************************************

ನಿನ್ನೆ 28/6/2021 ಸೋಮವಾರ 240 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಚಿತ್ರದುರ್ಗ ನಗರದಲ್ಲಿಯೇ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸಿತು.

ಬೆಳಗ್ಗೆ ಮುರುಘಾ ಮಠದ ಸ್ವಾಮಿಗಳ ಸಂದರ್ಶನ, ಸಂಜೆ ಬುದ್ದ ದಮ್ಮ ಸಹಜ ಕೃಷಿ ಕೇಂದ್ರಕ್ಕೆ ಭೇಟಿ ಮತ್ತು ಛಲವಾದಿ ಗುರುಪೀಠದ ಸ್ವಾಮಿಗಳೊಡನೆ ಮಾತುಕತೆ ನಡೆಸಲಾಯಿತು.

ಇಂದು 29/6/2021 ಮಂಗಳವಾರ 241 ನೆಯ ದಿನ ನಮ್ಮ ಕಾಲ್ನಡಿಗೆ ಚಿತ್ರದುರ್ಗ ನಗರದಿಂದ ಸುಮಾರು 35 ಕಿಲೋಮೀಟರ್ ದೂರದ ಹೊಳಲ್ಕೆರೆ ತಾಲ್ಲೂಕಿನತ್ತಾ….

ಮಾರ್ಗಮಧ್ಯದಲ್ಲಿ 6 ಕಿಲೋಮೀಟರ್ ಒಳ‌ ಸಂಚರಿಸಿ ಸಿದ್ದಾಪುರ ಗ್ರಾಮದಲ್ಲಿ ಒಂದು ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದೆ.

ನಾಳೆ 30/6/2021 ಬುಧವಾರ
242 ನೆಯ ದಿನ ನಮ್ಮ ನಡಿಗೆ ಹೊಳಲ್ಕೆರೆ ತಾಲ್ಲೂಕಿನಿಂದ
ಹೊಸ ದುರ್ಗಾ ತಾಲ್ಲೂಕಿನತ್ತಾ….

ನಂತರ ಸಾಣೇಹಳ್ಳಿ ಗ್ರಾಮದತ್ತಾ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *