April 25, 2024

Chitradurga hoysala

Kannada news portal

*ನನ್ನ ಗೆಳೆಯ ಕವಿ ಸಿದ್ದಲಿಂಗಯ್ಯ*ಕವಿ:ಲೇಖಕರು : ಚಂದ್ರಶೇಖರ ತಾಳ್ಯ ಹೊಳಲ್ಕೆರೆ

1 min read

*ನನ್ನ ಗೆಳೆಯ ಕವಿ ಸಿದ್ದಲಿಂಗಯ್ಯ*.                      ಕಳೆದ ಶತಮಾನದ 70 ರ ದಶಕ ತಲ್ಲಣದ, ಉತ್ಸಾಹದ, ರೊಚ್ಚಿನ ಕಾಲ. ಯುವ ವಿದ್ಯಾರ್ಥಿಗಳಲ್ಲಿ ಅನ್ಯಾಯ ಅಸಮಾನತೆಯ ವಿರುದ್ಧ ಹೋರಾಡಬೇಕೆಂಬ ಎಚ್ಚರ ಮೂಡಿದ ಕಾಲ. ಬಸವಲಿಂಗಪ್ಪನವರ ಬೂಸಾ ಹೇಳಿಕೆ ರಾಜ್ಯದಲ್ಲಿ ಹೊಸ ಸಂಚಲನವನ್ನುಂಟು ಮಾಡಿತ್ತು. ಬರಹಗಾರರ ಒಕ್ಕೂಟವನ್ನು ಮಹಾಕವಿ ಕುವೆಂಪು ಉದ್ಘಾಟಿಸಿದ್ದರು. ಜಾತಿವಿನಾಶ ಸಮ್ಮೇಳನ ಹೊಸ ಸಮಾಜ ರಚನೆಯ ಕನಸಿಗೆ ಇಂಬು ನೀಡಿತ್ತು. ಯುವಕರು ನಿಗಿ ನಿಗಿ ಉರಿಯುತ್ತ, ಬೆಳಕಿಗಾಗಿ ಹಂಬಲಿಸುತ್ತಾ ಇದ್ದ ಈ ಸಂಧಿಕಾಲದಲ್ಲೇ ಕವಿಗಳ ಪರಿಚಯ ನನಗಾದದ್ದು. ದಂತಕತೆಯಂತೆ ಬದುಕುತ್ತಿರುವ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿದ ದೇವನೂರ ಮಹಾದೇವ ಕವಿಗಳ ಪರಿಚಯ ಮಾಡಿಸಿದ್ದ. ಆಗ ನಾನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ತತ್ವಶಾಸ್ತ್ರದ ವಿದ್ಯಾರ್ಥಿ. ಕವಿಗಳು ಮೈಸೂರಿಗೆ ಬಂದಿದ್ದರು. ಅವರ ಜೊತೆ ಶ್ರೀಧರ ಕಲಿವೀರ ಇದ್ದ ನೆನಪು. ಅಂದು ದೇವನೂರು, ದೇವಯ್ಯ ಹರವೆ, ರುದ್ರಪ್ಪ ಹನಗವಾಡಿ, ಡಾ. ಲಕ್ಷ್ಮೀನಾರಾಯಣ, ವೈ. ಮಹೇಶ ಮುಂತಾದ ಪ್ರಗತಿಪರವಾಗಿ ಚಿಂತಿಸುವ ಯುವಕರೆಲ್ಲ ಸೇರಿ ಚರ್ಚಿಸಿ ಹೊಸ ಮಾರ್ಗಗಳ ಹೊಳಹನ್ನು ಹುಡುಕುತ್ತಿದ್ದರು. ಅಲ್ಲಿ ಜಾತಿ ಇರಲಿಲ್ಲ, ಮತದ ತೊಡಕುಗಳಿರಲಿಲ್ಲ. ಅಲ್ಲಿದ್ದದ್ದು ಸಮಾನತೆಯ ಕನಸೊಂದೇ. ಅಂದು ತಡ ರಾತ್ರಿಯಲ್ಲಿ ಕವಿಗಳು ನನ್ನ ರೂಮಿನಲ್ಲೇ ಬಿಡಾರ ಮಾಡಿದ್ದು ಈಗಲೂ ಹಸಿರಾಗಿದೆ. ಅಲ್ಲಿಂದ ನಾನು ಸಿದ್ದಲಿಂಗಯ್ಯ ಆಪ್ತ ಗೆಳೆಯರಾದೆವು. ಮುಂದೆ ನಾನು ಬೆಂಗಳೂರಿಗೆ ಹೋದಾಗಲೆಲ್ಲ ಅವರನ್ನು ಭೆಟ್ಟಿಯಾಗುತ್ತಿದ್ದೆ. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಆಗ ಕಿ.ರಂ, ಡಿ.ಆರ್, ಬರಗೂರು, ಶೂದ್ರ, ಕಾಳೇಗೌಡ ನಾಗವಾರ, ಮುಂತಾದ ಮಹಾ ಪ್ರತಿಭಾವಂತ ಗೆಳೆಯರಿದ್ದರು. ಸಾಮಾಜಿಕ ಚಳುವಳಿಗಳಲ್ಲಿ ನಾವೆಲ್ಲ ಸಕ್ರಿಯವಾಗಿ ಭಾಗಿಯಾಗುತ್ತಿದ್ದೆವು. ಒಮ್ಮೆ ಮಾಲೂರಿನ ದಲಿತ ಹೆಣ್ಣುಮಗಳ ಮೇಲಾದ ಅತ್ಯಾಚಾರವನ್ನು ವಿರೋಧಿಸಿ ಸಮುದಾಯ ಸಂಘಟನೆ ಮತ್ತು ಪ್ರಗತಿಪರ ಚಿಂತಕರೆಲ್ಲ ಸೇರಿ ಒಂದು ಜಾಥಾ ಏರ್ಪಡಿಸಿದ್ದರು. ಒಂದು ಹಂತದಲ್ಲಿ ಪೋಲೀಸರು ಜಾಥಾವನ್ನು ತಡೆದು ಅಲ್ಲಿದ್ದವರನ್ನು ಅರೆಸ್ಟ್ ಮಾಡಲು ಮುಂದಾದರು. ನಾನು ಅರೆಸ್ಟಾಗುವ ಆತುರದಲ್ಲಿದ್ದೆ. ಇದನ್ನು ಗಮನಿಸಿದ ಕವಿಗಳು ಮತ್ತು ಕಾಳೇಗೌಡರು ಸನ್ನೆ ಮಾಡಿ ನನ್ನನ್ನು ಅವರ ಹತ್ತಿರ ಕರೆದು ನೀವು ಅರೆಸ್ಟಾದರೆ ಎಲ್ಲೋ ಕಾಣದ ಜಾಗದಲ್ಲಿ ಪೋಲೀಸರು ಬಿಟ್ಟುಬಿಡುತ್ತಾರೆ ಬೆಂಗಳೂರಿನ ಪೂರ್ಣ ಪರಿಚಯ ನಿಮಗಿಲ್ಲ. ಮತ್ತೆ ವಾಪಸ್ಸು ಬರುವುದು ಕಷ್ಟವಾಗುತ್ತೆ ಅನ್ನುವ ಸದುದ್ದೇಶದಿಂದ ಅರೆಸ್ಟ್ ತಪ್ಪಿಸಿದರು. ಮುಂದೆ ಅನೇಕ ಸಲ ಭೆಟ್ಟಿಯಾದಾಗಲೆಲ್ಲ ಈ ಪ್ರಸಂಗವನ್ನು ನೆನೆದು ತಮ್ಮದೇ ಹಾಸ್ಯದ ಧಾಟಿಯಲ್ಲಿ ನನ್ನನ್ನು ಲೇವಡಿ ಮಾಡುತ್ತಿದ್ದರು. ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಅವರು ಹೊಳಲ್ಕೆರೆಗೆ ಸನ್ಮಾನ್ಯ ಎಚ್.ಆಂಜನೇಯ ಅವರ ಪರವಾಗಿ ಬಂದಿದ್ದರು. ಆಗ ನನ್ನ ಮನೆಗೆ ಬಂದು ಸುಮಾರು ಒಂದು ಒಂದೂವರೆ ಗಂಟೆ ಹರಟೆ ಹೊಡೆದು ನಗಿಸಿ ಹೋಗಿದ್ದರು. ಆ ಸಂದರ್ಭದಲ್ಲಿ ನಿಮಗೆ ಕೊಡಲು ಏನೂ ನಾನು ತರಲಿಲ್ಲ ಎಂದು ಚಡಪಡಿಸುತ್ತಾ ಅವರ ಡ್ರೈವರ್‍ನನ್ನು ಕರೆದು ಕಾರಿನಲ್ಲಿದ್ದ ಅವರ ಆಯ್ದ ಕವಿತೆಗಳ ಸಂಕಲನವನ್ನು ನನಗೆ ಕೊಟ್ಟರು. ಇದು ಅಮೂಲ್ಯವಾದ ಕೊಡುಗೆಯನ್ನೇ ಕೊಟ್ಟಿದ್ದೀರಿ ಕವಿಗಳೇ ಎಂದು ನಾನಂದಾಗ ಬಾಚಿ ನನ್ನನ್ನು ತಬ್ಬಿಕೊಂಡರು. ಅವರು ಮಾನವೀಯತೆಯ ಸಾಕಾರ ಮೂರ್ತಿಯಂತಿದ್ದರು, ನಿಗರ್ವಿಯಾಗಿದ್ದರು. ಅವರೊಬ್ಬ ಉರಿಯ ಕೇರಿಯ ಮಹಾ ಸಾಧಕ. ಹಾಸ್ಯದ ಒಡಲೊಳಗೇ ಬೆಂಕಿಯುಂಡೆಗಳನ್ನು ಚಿಮ್ಮಿಸಬಲ್ಲವರಾಗಿದ್ದ ಮೇಧಾವಿ, ರಾಜಕೀಯ ನಡೆಯಲ್ಲಿ ಅಲ್ಲಲ್ಲಿ ಎಡವಿದ ಸಹಜ ಮನುಷ್ಯ, ತಮ್ಮದೇ ತಪ್ಪನ್ನು ಎಂದೂ ಮುಚ್ಚಿಡದ, ಅದನ್ನೂ ಹಾಸ್ಯದಲ್ಲೇ ತೇಲಿಸಿಬಿಡುವ ಚತುರತೆ ಅವರದ್ದು. ಮೆಲು ನಡೆಯ, ಮೆಲು ನಗೆಯ, ಮೆಲು ಮಾತಿನ, ಮುಟ್ಟಿದರೆ ಮೆದುವಾಗಿ ಸಿಕ್ಕುವ ಗುಬ್ಬಚ್ಚಿಯಂಥ ಬೆಚ್ಚಗಿನ ವ್ಯಕ್ತಿತ್ವ ಅವರದ್ದು. ಅವರು ನನ್ನ ಗೆಳೆಯರಾಗಿದ್ದರು ಎನ್ನುವುದು ನನಗೆ ಹೆಮ್ಮೆ. ಹೋದ ವರ್ಷ ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಮತ್ತು ದೂರದರ್ಶನ ಕೇಂದ್ರ ಜಂಟಿಯಾಗಿ ಏರ್ಪಡಿಸಿದ್ದ ಗಾಂಧಿ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ನಾನೂ ಆಹ್ವಾನಿತನಾಗಿ ಕವಿತೆ ವಾಚಿಸಿದೆ. ಗೋಷ್ಟಿಯ ನಂತರ ಒಟ್ಟಿಗೇ ಊಟ ಮಾಡಿದೆವು. ಕವಿಗಳ ಆರೋಗ್ಯ ತುಂಬಾ ಸೂಕ್ಷ್ಮವಾದಂತೆ ಕಾಣಿಸಿತು. ತುಂಬಾ ನೋವಾಯಿತು. ಈಗ ಕವಿ ಸಿದ್ದಲಿಂಗಯ್ಯ ಬರೀ ನೆನಪು. ಆದರೆ ಈ ನೆನಪು ಶುಷ್ಕವಾದದ್ದಲ್ಲ. ಆ ನೆನಪಿಗೊಂದು ಅರ್ಥವಿದೆ. ಸಾಂಸ್ಕೃತಿಕ , ಸಾಮಾಜಿಕ ಎಚ್ಚರದ ಅಲೆಗಳು ಆ ನೆನಪಿನಲ್ಲಿ ತುಯ್ದಾಡುತ್ತವೆ. ನಮ್ಮ ಸಾಮಾಜಿಕ ಎಚ್ಚರಕ್ಕಾಗಿ, ರಾಜಕೀಯದ ಸೂಕ್ಷ್ಮ ನಡೆಗಳಿಕೆಗಾಗಿ, ಹೊಸ ಸಮಾಜದ ಕನಸುಗಳಿಗಾಗಿ, ಮನಸ್ಸಿನ ಲವ ಲವಿಕೆಗಾಗಿ ಲಂಕೇಶ್, ತೇಜಸ್ವಿ, ಎಂ.ಡಿ. ನಂಜುಂಡಸ್ವಾಮಿ, ಕಿ.ರಂ, ಡಿ.ಆರ್, ಕವಿ ಸಿದ್ದಲಿಂಗಯ್ಯ ಇವರೆಲ್ಲ ಇನ್ನಷ್ಟು ಕಾಲ ಬುದುಕಬೇಕಿತ್ತು. ಇದು ನಮ್ಮಂತಹ ಹುಲು ಮಾನವರ ಆಸೆ, ಆದರೆ ವಿಧಿಯ ವಕಾಲತ್ತು ಬೇರೆಯದೇ ಆಗಿರುತ್ತದಲ್ಲವೆ?. _________________ ಕವಿ:ಲೇಖಕರು : ಚಂದ್ರಶೇಖರ ತಾಳ್ಯ ಹೊಳಲ್ಕೆರೆ.( ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗು ಮಕ್ಕಳ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಇವರ ಆಯೋಜನೆಯಲ್ಲಿ ದಿವಂಗತ ಜನಕವಿ ಡಾ.ಸಿದ್ಧಲಿಂಗಯ್ಯ ರವರ ಕಾವ್ಯ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕವಿಗೆ ಸಮರ್ಪಿಸಲು ರಚಿಸಿದ ಭಾವಪೂರ್ಣ ನುಡಿನಮನ.)

About The Author

Leave a Reply

Your email address will not be published. Required fields are marked *