April 25, 2024

Chitradurga hoysala

Kannada news portal

ಸತ್ಯ ಹೇಳುವವನು ಲೋಕ ವಿರೋಧಿ…….

1 min read


ಸತ್ಯ ಹೇಳುವವನು ಲೋಕ ವಿರೋಧಿ…….

ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಿದರೆ ಧರ್ಮ ವಿರೋಧಿ ಎನ್ನುವಿರಿ,

ಆರ್ಥಿಕ ಅಸಮಾನತೆಯನ್ನು ಒತ್ತಿ ಹೇಳಿದರೆ ಪ್ರಗತಿ ವಿರೋಧಿ ಎನ್ನುವಿರಿ,

ಆಚರಣೆಗಳ ಮೌಡ್ಯಗಳನ್ನು ಬಿಚ್ಚಿ ತೋರಿಸಿದರೆ ಸಂಪ್ರದಾಯ ವಿರೋಧಿ ಎನ್ನುವಿರಿ,

ವರದಕ್ಷಿಣೆ ಕಾನೂನಿನ ದುರುಪಯೋಗದ ಬಗೆಗೆ ಮಾತನಾಡಿದರೆ ಮಹಿಳಾ ವಿರೋಧಿ ಎನ್ನುವಿರಿ,

ಅಸ್ಪೃಷ್ಯತಾ ಕಾನೂನಿನ ದುರ್ಬಳಕೆ ಬಗೆಗೆ ಮಾತನಾಡಿದರೆ ದಲಿತ ವಿರೋಧಿ ಎನ್ನುವಿರಿ,

ಜಾತಿಯಿಂದಾಗುವ ಅವಮಾನಗಳನ್ನು ಪ್ರಶ್ನಿಸಿದರೆ ಜಾಣ ಕಿವುಡರಾಗಿ ಅಮಾನವೀಯ ಸಮರ್ಥನೆಗೆ ಇಳಿಯುವಿರಿ,

ದೇಶದೊಳಗಿನ ಬಡತನ ದಾರಿದ್ಯಗಳನ್ನು ಎತ್ತಿ ಹಿಡಿದರೆ
ದೇಶದ್ರೋಹಿ ಎನ್ನುವಿರಿ,

ಊಟ, ಬಟ್ಟೆಯ ಸ್ವಾತಂತ್ರ್ಯ ಪ್ರಶ್ನಿಸಿದರೆ ಸ್ವೇಚ್ಚಾಚಾರಿ ಎನ್ನುವಿರಿ,

ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳಬಾರದು ಎನ್ನುವಿರಿ,

ಪ್ರಶ್ನಿಸಿದರೆ ಅಧಿಕ ಪ್ರಸಂಗಿ ಎನ್ನುವಿರಿ,

ಸರ್ವಧರ್ಮ ಸಹಿಷ್ಣುತೆಯ ಬಗ್ಗೆ ಹೊಗಳುವಿರಿ ಮೇಲ್ನೋಟಕ್ಕೆ,

ಒಳಗೆ ಇತರೆ ಧರ್ಮಗಳನ್ನು ದ್ವೇಷಿಸುವಿರಿ,

ಮಾತೃಭಾಷೆ ಶ್ರೇಷ್ಠ ಎನ್ನುವಿರಿ, ಅದು ನಿಜ,

ಆದರೆ ನಿಮ್ಮ ಭಾಷೆ ಅತಿ ಶ್ರೇಷ್ಠ ಎನ್ನುವಿರಿ, ಅದು ಹೇಗೆ,

ಮುಕ್ತ ಸ್ವಾತಂತ್ರ್ಯದ, ಸಹಿಷ್ಣುತೆಯ ಸಮಾಜದಲ್ಲಿ ನಿಜವಾಗಿ ನಾವಿದ್ದೇವೆಯೆ,

ನನಗೇನೂ ಆ ಬಗೆಗೆ ಸಾಕಷ್ಟು ಅನುಮಾನ ಗೊಂದಲಗಳಿವೆ.

ಭ್ರಮೆಗಳನ್ನು ಸೃಷ್ಟಿಸಿ, ವಾಸ್ತವತೆಯನ್ನು ಮರೆಮಾಚಿ,
ಆತ್ಮವಂಚಕ ಸಮಾಜ ಸೃಷ್ಟಿಯಾಗಿದೆ ಎಂದೆನಿಸುತ್ತಿದೆ.

ಏಕೆಂದರೆ……..

ಈ ದೇಶದಲ್ಲಿ,
ಜನರ ಭಾವನೆಗಳನ್ನು ಕೆರಳಿಸುವವನು ನಾಯಕನಾಗುತ್ತಾನೆ,

ಜನರನ್ನು ಮಾತಿನ ಮೋಡಿಯಲ್ಲಿ ಮರಳು ಮಾಡುವವನು ರಾಜಕಾರಣಿಯಾಗುತ್ತಾನೆ,

ಜನರಲ್ಲಿ ಆಸೆ ಹುಟ್ಟಿಸಿ ನಂಬಿಸುವವನು MLA, ಮಂತ್ರಿಯಾಗುತ್ತಾನೆ,

ಜನರನ್ನು ಭಯ ಭಕ್ತಿ ಉಕ್ಕಿಸುವವನು ಸ್ವಾಮೀಜಿಯಾಗುತ್ತಾನೆ,

ಜನರಲ್ಲಿ ಭ್ರಮೆಗಳನ್ನು ಸೃಷ್ಟಿಸಿ ಸುಳ್ಳು ಭವಿಷ್ಯ ಹೇಳುವವನು ಜ್ಯೋತಿಷಿಯಾಗುತ್ತಾನೆ,

ಜನರನ್ನು ತನ್ನ ಬಾಹುಬಲದಿಂದ ಹೆದರಿಸುವವನು ರೌಡಿಯಾಗುತ್ತಾನೆ,

ಮಧ್ಯವರ್ತಿ ಕೆಲಸ ಮಾಡುವವನು ಕೋಟ್ಯಾಧಿಪತಿಯಾಗುತ್ತಾನೆ,

ಕೃತಕ ಭಾವನೆಗಳನ್ನು ವ್ಯಕ್ತಪಡಿಸುವವನು ನಟನಾಗುತ್ತಾನೆ,

ಆಕರ್ಷಕವಾಗಿ ಬರೆಯುವವನು ಪ್ರಖ್ಯಾತ ಸಾಹಿತಿಯಾಗುತ್ತಾನೆ,

ನಾಚಿಕೆ, ಮಾನ ಮರ್ಯಾದೆ ಬಿಟ್ಟವನು ಎಲ್ಲರಿಗಿಂತ ದೊಡ್ಡವನಾಗುತ್ತಾನೆ,

ಮತ್ತೊಂದೆಡೆ,

ಹೊಲದಲ್ಲಿ ಬೆವರು ಸುರಿಸುವವರು ಬಡ ರೈತರಾಗುತ್ತಾರೆ,

ಬಿಸಿಲಿನಲ್ಲಿ ಒಣಗುವವರು ದಿನಗೂಲಿ ಕಟ್ಟಡ ಕಾರ್ಮಿಕನಾಗುತ್ತಾರೆ,

ತೂಕದ ಮೂಟೆ ಹೊರುವವರು ಕೂಲಿಯಾಗುತ್ತಾರೆ,

ಹೋಟೆಲ್ಲಿನಲ್ಲಿ ತಟ್ಟೆ,ಲೋಟ ತೊಳೆಯುವವರು ಬಾಲ ಕಾರ್ಮಿಕರಾಗುತ್ತಾರೆ,

ಮಲ ಹೊರುವವರು ಅಸ್ಪೃಷ್ಯರಾಗುತ್ತಾರೆ,

ಹೊಟ್ಟೆಪಾಡಿಗಾಗಿ ದೇಹ ಮಾರುವವರು ವೇಶ್ಯೆಯರಾಗುತ್ತಾರೆ,

ಕರುಣಾಮಯಿಗಳು ಅನಾಥರಾಗುತ್ತಾರೆ,

ಮಾನ-ಮರ್ಯಾದೆಗಳಿಗೆ ಅಂಜುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ,

ಇದೆಲ್ಲಾ ವಾಸ್ತವ ಹೇಳುವವರು ಕೊಲೆಯಾಗುತ್ತಾರೆ,

ಇದನ್ನೆಲ್ಲಾ ಅರಿತವರು ಅರೆ ಹುಚ್ಚರಾಗುತ್ತಾರೆ.

” ಷರತ್ತುಗಳು ಅನ್ವಯ ”

ಈಗಲೂ ಕಾಲ ಮಿಂಚಿಲ್ಲ.

ಬದಲಾವಣೆಯ ಎಲ್ಲಾ ಸಾಧ್ಯತೆಗಳು ಇವೆ.

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ
ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸೋಣ

ಆ ದಿನಗಳ ನಿರೀಕ್ಷೆಯಲ್ಲಿ……………….

ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *