April 19, 2024

Chitradurga hoysala

Kannada news portal

ಮಠಾಧೀಶರಲ್ಲಿ ತ್ಯಾಗದ ಮನೋಭಾವನೆ ಇರಬೇಕು. ಸ್ವಾಮೀಜಿಗಳ ಜೀವನ ಇರುವುದು ಸಾರ್ವತ್ರಿಕ ಜೀವನಕ್ಕಾಗಿ.ಡಾ. ಶಿವಮೂರ್ತಿ ಮುರುಘಾ ಶರಣರು.

1 min read

ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಸೋಂಪುರದ ಶ್ರೀ ಪುಟ್ಟೇಶ್ವರಸ್ವಾಮಿ ವಿರಕ್ತಮಠದಲ್ಲಿ ನಡೆದ ಶ್ರೀ ಸೋಮಶೇಖರ ಸ್ವಾಮಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು.

ತುಮಕೂರು/ಚಿತ್ರದುರ್ಗ, ಜು. 14 – ಮಠಗಳು ಧಾರ್ಮಿಕ ಕೇಂದ್ರಗಳು. ಇವು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಕೇಂದ್ರಗಳಾಗಿವೆ ಎಂದು ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಸೋಂಪುರದ ಶ್ರೀ ಪುಟ್ಟೇಶ್ವರಸ್ವಾಮಿ ವಿರಕ್ತಮಠದಲ್ಲಿ ನಡೆದ ಶ್ರೀ ಸೋಮಶೇಖರ ಸ್ವಾಮಿಗಳಿಗೆ ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶ್ರೀಗಳನ್ನು ಗೌರವಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಊರಿಗೊಂದು ದೇವಸ್ಥಾನ, ಮಠಗಳು ಇರಬೇಕೆಂದುಕೊಂಡರು. ಮಂದಿರದಲ್ಲಿರುವ ದೇವರು ಮಾತನಾಡುವುದಿಲ್ಲ. ಮಠದಲ್ಲಿರುವ ಸ್ವಾಮಿಗಳು ಮಾತನಾಡುತ್ತಾರೆ. ಮಠದ ಸ್ವಾಮಿಗಳು ಬಂದಂತಹ ಭಕ್ತರ ಸಮಸ್ಯೆಗಳನ್ನು ಕೇಳುತ್ತಾರೆ. ಭಕ್ತಾದಿಗಳ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಹಾಗೆಯೇ ಭಕ್ತರು ಸಹ ಸ್ವಾಮಿಗಳ ಆರೋಗ್ಯದ ಬಗ್ಗೆಯೂ ವಿಚಾರಿಸಬೇಕು. ಈ ಮಠದಲ್ಲಿ ಮೊದಲು ಅನೇಕ ಕಷ್ಟಕಾರ್ಪಣ್ಯಗಳನ್ನು ಸೋಮಶೇಖರ ಸ್ವಾಮಿಗಳು ಅನುಭವಿಸಿದ್ದಾರೆ. ಸ್ವಾಮಿಗಳಾಗುವುದು ಕಷ್ಟಕರವಾದ ಹಾದಿ. ಇದು ಮುಳ್ಳಿನ ಹಾಸಿಗೆ. ಸಾರ್ವಜನಿಕ ಜೀವನದಲ್ಲಿ ತತ್ವಪ್ರಚಾರ ಮಾಡುತ್ತ ಮಠಾಧೀಶರು ಬಂದಿದ್ದಾರೆ.

ಮಠಾಧೀಶರಲ್ಲಿ ತ್ಯಾಗದ ಮನೋಭಾವನೆ ಇರಬೇಕು. ಸ್ವಾಮೀಜಿಗಳ ಜೀವನ ಇರುವುದು ಸಾರ್ವತ್ರಿಕ ಜೀವನಕ್ಕಾಗಿ. ಅವರು ಭಕ್ತರ ಉದ್ಧಾರಕ್ಕೆ ತಮ್ಮ ಬದುಕನ್ನು ಸವೆಸುತ್ತಾರೆ. ರಾಜರಿಂದ ಪೂಜಿತವಾಗಿರುವ ಮಠ ಶ್ರೀ ಮುರುಘರಾಜೇಂದ್ರ ಬೃಹನ್ಮಠ. ಪರಂಪರೆಯನ್ನು ನಾವು ಉಳಿಸಬೇಕಿದೆ. ಅನಾರೋಗ್ಯ ಕಾರಣದಿಂದ ನಮ್ಮ ಹತ್ತಿರ ಸೋಮಶೇಖರ ಸ್ವಾಮಿಗಳು ಕೇಳಿಕೊಂಡಾಗ ನಾವು ಒಪ್ಪಿಕೊಂಡೆವು. ಭಕ್ತಾದಿಗಳ ಸಹಕಾರದಿಂದ ಮಠಗಳು ನಡೆಯುತ್ತವೆ. ತುಮಕೂರು ಜಿಲ್ಲೆಯ ಎಲ್ಲ ಭಕ್ತರು ಈ ಮಠಕ್ಕೆ ಸಹಕಾರ ನೀಡಬೇಕು. ಎಲ್ಲರ ಸಹಕಾರದೊಂದಿಗೆ ಈ ಮಠವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಎಲ್ಲ ವಿರಕ್ತಮಠಗಳ ಕೇಂದ್ರಸ್ಥಾನವಾಗಿದ್ದು, ರಾಜ್ಯಾದ್ಯಂತ ಮತ್ತು ಹೊರರಾಜ್ಯಗಳಲ್ಲಿ ತನ್ನ ಶಾಖಾಮಠಗಳನ್ನು ಹೊಂದಿದೆ. ಶ್ರೀ ಪುಟ್ಟೇಶ್ವರಸ್ವಾಮಿ ವಿರಕ್ತಮಠವು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಶಾಖಾಮಠವಾಗಿದ್ದು, 1916ನೇ ಇಸವಿಯಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿಯವರಿಂದ ನೇಮಕಗೊಂಡ ಶ್ರೀ ಸಿದ್ಧಲಿಂಗಸ್ವಾಮಿಗಳು ಈ ಮಠಕ್ಕೆ ಬಂದು ನೆಲೆಸಿದರು. ಇದರೊಟ್ಟಿಗೆ ಬೆಂಗಳೂರಿನ ಶ್ರೀ ಸರ್ಪಭೂಷಣ ªಮಠವನ್ನು ನೋಡಿಕೊಳ್ಳುತ್ತಿದ್ದ ಅವರು 13-10-1997ರಂದು ಲಿಂಗೈಕ್ಯರಾದರು. ಅವರು 1993ರಲ್ಲಿ ಶ್ರೀ ಸೋಮಶೇಖರ ಸ್ವಾಮಿಗಳಿಗೆ ಪುಟ್ಟೇಶ್ವರಸ್ವಾಮಿ ವಿರಕ್ತಮಠದ ಅಧಿಕಾರ ವಹಿಸಿಕೊಟ್ಟಿದ್ದು, ಮುರುಘಾಮಠದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಪಟ್ಟಾಧಿಕಾರ ಮಾಡಿರುತ್ತಾರೆ. ನಂತರ ಶ್ರೀ ಸೋಮಶೇಖರ ಸ್ವಾಮಿಗಳು ಇಲ್ಲಿಯವರೆಗೆ ಸದರಿ ಶಾಖಾಮಠದ ಮೂಲಕ ಈ ಭಾಗದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಪ್ರಚಾರ, ಸಾಮಾಜಿಕ ಮತ್ತು ಶೈಕ್ಷಣಿಕ ಕಲ್ಯಾಣ ಕಾರ್ಯಗಳನ್ನು ನಿರ್ವಹಿಸುತ್ತ ಬಂದಿರುತ್ತಾರೆ. ಶ್ರೀಗಳು ಈಗ್ಗೆ ಕೆಲವು ವರ್ಷಗಳಿಂದ ಆರೋಗ್ಯಸಮಸ್ಯೆಯಿಂದ ಬಳಲುತ್ತಿದ್ದು, ಪುಟ್ಟೇಶ್ವರ ಮಠದ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗದಿರುವುದರಿಂದ ಬಿಡುಗಡೆ ಹೊಂದಲು ಬಯಸಿದ್ದಾರೆ ಎಂದರು.
ಸಮ್ಮುಖ ವಹಿಸಿದ್ದ ಹನುಮಂತಪುರ ಲಕ್ಷ್ಮ್ಟೀಶ್ವರಿ ಶಕ್ತಿಪೀಠದ ಡಾ. ಶ್ರೀ ನಾಗೇಂದ್ರ ಸ್ವಾಮಿಗಳು ಮಾತನಾಡಿ, ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸೋಮಶೇಖರ ಸ್ವಾಮಿಗಳು ಶ್ರಮಿಸಿದ್ದಾರೆ. ಹಿಂದೆ ತುಂಬ ಕಷ್ಟದ ಪರಿಸ್ಥಿತಿ ಶ್ರೀಮಠಕ್ಕೆ ಇತ್ತು. ಮಠಕ್ಕೆ ಬಂದ ಭಕ್ತರ ಪ್ರಸಾದಕ್ಕೆ ದಾಸೋಹ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಹಾಗಾಗಿ ಸ್ವಾಮಿಗಳು ಇಲ್ಲದೆ ಮಠ ಕೊರಗಬಾರದೆಂದು ಈ ಮಠವು ಚಿತ್ರದುರ್ಗ ಮುರುಘಾಮಠದ ಶಾಖಾಮಠವಾಗಿದ್ದು, ಶ್ರೀ ಮುರುಘಾ ಶರಣರನ್ನು ಭೇಟಿ ಮಾಡಿ ಈ ಮಠವನ್ನು ಮುಂದುವರಿಸಿಕೊಂಡು ಹೋಗಲು ಕೇಳಿಕೊಂಡಾಗ ಒಪ್ಪಿದರು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ಸೋಮಶೇಖರ ಸ್ವಾಮಿಗಳು, ಶ್ರೀ ಮುರುಘಾಮಠದ ಪರಂಪರೆ ಹೊಂದಿರುವ ಸೋಂಪುರ ಮಠಕ್ಕೆ ಜಗದ್ಗುರುಗಳ ಆಶೀರ್ವಾದದಿಂದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಅಧಿಕಾರಕ್ಕೆ ಬಂದರು. ಅವರ ಕಾಲದಲ್ಲಿ ಒಂದಷ್ಟು ಅಭಿವೃದ್ಧಿ ಹೊಂದಿತು. ನಂತರ ಅವರು ವಯೋಸಹಜ ಕಾರಣದಿಂದ 1993ರಲ್ಲಿ ನನಗೆ ಅಧಿಕಾರ ವಹಿಸಿದರು. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ನನಗೆ ಎಲ್ಲ ರೀತಿಯ ಆಶೀರ್ವಾದ ಮಾಡಿದರು. ಆದರೆ ಸಧ್ಯ ನನ್ನ ಆರೋಗ್ಯ ಪರಿಸ್ಥಿತಿ ಸರಿ ಇಲ್ಲದ ಕಾರಣ ನಾನು ಸ್ವಇಚ್ಛೆಯಿಂದ ಎಲ್ಲ ಅಧಿಕಾರವನ್ನು ಶ್ರೀ ಮುರುಘಾಮಠಕ್ಕೆ ಬಿಟ್ಟು ಕೊಡುತ್ತಿದ್ದೆನೆ  . ಈ ಮಠದ ಎಲ್ಲ ಆಸ್ತಿಗೆ ಮುರುಘಾಮಠ ಜವಾಬ್ದಾರಿ ಹೊರುತ್ತದೆ. ಈ ಮಠಕ್ಕೆ ಮುರುಘಾಮಠದಿಂದಲೇ ಬೇರೊಬ್ಬ ಸಮರ್ಥ ಉತ್ತರಾಧಿಕಾರಿಯನ್ನು ನೇಮಿಸಬೇಕೆಂದು ಹೇಳಿದರು.

ನಿವೃತ್ತ ತಹಶೀಲ್ದಾರ್ ಹೆಚ್.ಜಿ. ಪುಟ್ಟಪ್ಪಯ್ಯ, ಮೈಲಹಳ್ಳಿ ಬಸಪ್ಪನವರು ವೇದಿಕೆಯಲ್ಲಿದ್ದರು. ಶಿವರುದ್ರಪ್ಪ, ಪ್ರಕಾಶ್, ಮಲ್ಲಿಕಾರ್ಜುನ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.ಉಮೇಶ್ ಪತ್ತಾರ್ ಮತ್ತು ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಗಂಗಾಧರ್ ಸ್ವಾಗತಿಸಿದರು.

About The Author

Leave a Reply

Your email address will not be published. Required fields are marked *